ಜನಸಾಗರದ ನಡುವೆ ಜಂಬೂ ವೈಭವ

* ಬಿಸಿಲನ್ನೂ ಲೆಕ್ಕಿಸದೆ ಕಾದು ಕುಳಿತ ಜನರು * ಚಾಮುಂಡೇಶ್ವರಿಯ ವೈಭವ ಕಣ್ತುಂಬಿಕೊಂಡ ಜನತೆ
ಜನಸಾಗರದ ನಡುವೆ ಜಂಬೂ ವೈಭವ
ಜನಸಾಗರದ ನಡುವೆ ಜಂಬೂ ವೈಭವJambu's glory amidst the ocean of people
Published on: 

ಅವಿನಾಶ್ ಜೈನಹಳ್ಳಿ ಮೈಸೂರು

ಕಣ್ಣು ಹಾಯಿಸಿದಷ್ಟೂ ಜನಸಾಗರ, ಕಿವಿಗೆ ಅಪ್ಪಳಿಸುವ ಜಯಘೋಷ, ಎಲ್ಲೆಲ್ಲೂ ಹಬ್ಬದ ಸಂಭ್ರಮ, ಹೆಜ್ಜೆ ಹೆಜ್ಜೆಗೂ ಕುತೂಹಲದ ಕಣ್ಣುಗಳು, ಮನಸ್ಸಿನ ತುಂಬೆಲ್ಲ ಜಂಬೂಸವಾರಿ ಕಣ್ತುಂಬಿಕೊಳ್ಳುವ ಕಾತರ! ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ವಿಶ್ವವಿಖ್ಯಾತ ಜಂಬೂಸವಾರಿ ಬುಧವಾರ ಮೈಸೂರಿನ ರಾಜಬೀದಿಗಳಲ್ಲಿ ಸೃಷ್ಟಿಸಿದ್ದು ಜನಸಾಗರದ ಮಹಾಪರ್ವ.

ಅರಮನೆಯ ಅಂಗಳದಿಂದ ಬನ್ನಿಮಂಟಪದವರೆಗೆ ಜನವೋ ಜನ, ಎತ್ತ ನೋಡಿದರೂ ಜನರೇ ಕಾಣುವಷ್ಟು ದಟ್ಟಣೆ. ಬಿಸಿಲಿನ ಬೇಗೆ, ಗಂಟೆಗಟ್ಟಲೇ ಕಾಯುವಿಕೆ, ನೂಕುನುಗ್ಗಲಿನ ನಡುವೆಯೂ ಜನರ ಉತ್ಸಾಹ ಮಾತ್ರ ಕೊಂಚವೂ ಕುಂದಲಿಲ್ಲ. ಜಂಬೂಸವಾರಿ ಮೆರವಣಿಗೆಯನ್ನು ಕಣ್ತುಂಬಿಕೊಳ್ಳಲು ಮಂಗಳವಾರ ರಾತ್ರಿಯಿಂದಲೇ ಕೆಲವರು ರಸ್ತೆ ಬದಿಯಲ್ಲಿ ಜಾಗ ಕಾಯ್ದಿರಿಸಿದ್ದರೆ, ಬುಧವಾರ ಬೆಳಗ್ಗೆಯಿಂದಲೇ ಸಾವಿರಾರು ಜನರು ಅರಮನೆಯ ಪ್ರವೇಶದ್ವಾರಗಳ ಮುಂದೆ ಸಾಲುಗಟ್ಟಿ ನಿಂತಿದ್ದರು. ಬ್ರಹ್ಮಪುರಿ, ಕರಿಕಲ್ಲು ತೊಟ್ಟಿ, ಜಯಮಾರ್ತಾಂಡ ಹಾಗೂ ವರಾಹ ದ್ವಾರಗಳ ಬಳಿ ಜನಜಂಗುಳಿ ಕಂಡುಬಂತು. ಅರಮನೆಯೊಳಗೆ ಪ್ರವೇಶಿಸಿ ಜಂಬೂಸವಾರಿಯ ವೈಭವವನ್ನು ಹತ್ತಿರದಿಂದ ಕಣ್ತುಂಬಿಕೊಳ್ಳಬೇಕು ಎಂಬ ಆಸೆಯಿಂದ ಜನರು ಕಾದು ಕುಳಿತಿದ್ದರು.

ಬೀದಿಬೀದಿಯಲ್ಲೂ ಜನಸಾಗರ:

ನಗರದ ಹೃದಯಭಾಗ ಬುಧವಾರ ಜನರ ಮಹಾಪೂರಕ್ಕೆ ಸಾಕ್ಷಿಯಾಯಿತು. ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ಆವರಣ, ಆಲ್ಬರ್ಟ್ ವಿಕ್ಟರ್ ರಸ್ತೆ, ಚಾಮರಾಜ ವೃತ್ತ, ಕೆ.ಆರ್.ವೃತ್ತ, ದೇವರಾಜ ಮಾರುಕಟ್ಟೆ, ಆಯುರ್ವೇದ ಕಾಲೇಜು ವೃತ್ತ, ಪಂಚಮುಖಿ ಗಣಪತಿ ದೇವಸ್ಥಾನ ಹಾಗೂ ಹಳೇ ಆರ್‌ಎಂಸಿ ವೃತ್ತ, ಸಯ್ಯಜಿರಾವ್ ರಸ್ತೆ, ಹೈವೇ ವೃತ್ತ ಸುತ್ತಮುತ್ತ ಜನಸಾಗರವೇ ಕಂಡುಬಂತು. ಮೆರವಣಿಗೆ ಸಾಗುವ ದಾರಿಯ ಎರಡೂ ಬದಿಗಳಲ್ಲಿ ಜನರು ಜಾಗ ಹಿಡಿದು ಕುಳಿತಿದ್ದರು. ಕುಳಿತುಕೊಳ್ಳಲು ಸ್ಥಳ ಸಿಗದವರು ನಿಂತುಕೊಂಡೇ ಕಾಯುತ್ತಿದ್ದರು. ಕಟ್ಟಡಗಳ ಮೇಲ್ಭಾಗ, ರಸ್ತೆ ಬದಿಯ ಎತ್ತರದ ಸ್ಥಳಗಳು ಹಾಗೂ ವಾಹನಗಳ ಮೇಲೂ ಜನರು ನಿಂತು ಮೆರವಣಿಗೆ ವೀಕ್ಷಿಸಿದರು.

ಅರಮನೆ ಆವರಣದಿಂದ ಬನ್ನಿಮಂಟಪದವರೆಗೂ ಜನರ ಉತ್ಸಾಹಕ್ಕೆ ಮಿತಿಯೇ ಇರಲಿಲ್ಲ. ಖಾಸಗಿ ಬಸ್ ನಿಲ್ದಾಣದ ಕಟ್ಟಡಗಳ ಮೇಲೂ ಜನರು ಕುಳಿತು ಮೆರವಣಿಗೆಯ ಆಗಮನಕ್ಕಾಗಿ ಕಾದಿದ್ದರು. ಕಲಾತಂಡಗಳು ಒಂದರ ಹಿಂದೆ ಒಂದರಂತೆ ಸಾಗುತ್ತಿದ್ದಂತೆ ಜನರ ಚಪ್ಪಾಳೆ, ಜಯಘೋಷ ಮುಗಿಲು ಮುಟ್ಟಿತು. ತಾಯಿ ಚಾಮುಂಡೇಶ್ವರಿ, ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಯದುವೀರ್ ಒಡೆಯರ್ ಅವರಿಗೆ ಜೈಕಾರ ಹಾಕಿ ಜನರು ಸಂಭ್ರಮಿಸಿದರು.

ಹಿಂದಿನ ದಿನವೇ ಜಾಗ ಕಾಯ್ದಿರಿಸಿದ್ದರು!

ಜಂಬೂಸವಾರಿಯನ್ನು ಕಣ್ತುಂಬಿಕೊಳ್ಳಲು ಉತ್ತಮ ಸ್ಥಳ ಸಿಗಬೇಕು ಎಂಬ ಉದ್ದೇಶದಿಂದ ಹಲವರು ಮಂಗಳವಾರವೇ ರಸ್ತೆ ಬದಿಯಲ್ಲಿ ಜಾಗ ಕಾಯ್ದಿರಿಸಿದ್ದರು. ಅರಮನೆ ಆವರಣ ಪ್ರವೇಶಿಸಲು ಪಾಸ್ ಹಾಗೂ ಟಿಕೆಟ್ ಕಡ್ಡಾಯಗೊಳಿಸಲಾಗಿತ್ತು. ಪಾಸ್ ಹಾಗೂ ಟಿಕೆಟ್ ಇಲ್ಲದ ಅನೇಕರು ಸಯ್ಯಜಿರಾವ್ ರಸ್ತೆಯ ಫುಟ್‌ಪಾತ್‌ಗಳ ಮೇಲೆ ಚಾಪೆ, ಟಾರ್ಪಲ್, ಜಮಖಾನೆ ಹಾಗೂ ಚೀಲಗಳನ್ನು ಹಾಕಿ ಜಾಗವನ್ನು ಗುರುತಿಸಿಕೊಂಡಿದ್ದರು. ಬುಧವಾರ ಬೆಳಗ್ಗೆ ಕಾಯ್ದಿರಿಸಿದ ಸ್ಥಳಗಳಿಗೆ ಬಂದು ಕುಳಿತರು. ಆದರೆ, ಜನರ ಸಂಖ್ಯೆ ಹೆಚ್ಚಾದಂತೆ ಜಾಗಕ್ಕಾಗಿ ಕೆಲವೆಡೆ ವಾಗ್ವಾದವೂ ನಡೆಯಿತು.

ಜನದಟ್ಟಣೆಯ ನಡುವೆ ನೂಕುನುಗ್ಗಲು

ಜಂಬೂಸವಾರಿಯ ಸಂಭ್ರಮದ ನಡುವೆಯೇ ಜನದಟ್ಟಣೆ ಹಲವು ಕಡೆ ಆತಂಕಕ್ಕೂ ಕಾರಣವಾಯಿತು. ನಗರ ಬಸ್ ನಿಲ್ದಾಣ, ಕೆ.ಆರ್. ವೃತ್ತ, ಚಿಕ್ಕಗಡಿಯಾರ, ಆಯುರ್ವೇದ ಕಾಲೇಜು ವೃತ್ತ, ಭಾರತೀಯ ವೈದ್ಯಕೀಯ ಸಂಘದ ಸಮೀಪ, ಪಂಚಮುಖಿ ಗಣಪತಿ ವೃತ್ತ, ಬಂಬೂಬಜಾರ್ ಹಾಗೂ ಹೈವೇ ವೃತ್ತದ ಬಳಿ ನೂಕುನುಗ್ಗಲು ಉಂಟಾಯಿತು.

ನಗರ ಬಸ್ ನಿಲ್ದಾಣ ಹಾಗೂ ಕೆ.ಆರ್. ವೃತ್ತದಲ್ಲಿ ತಳ್ಳಾಟ ಹೆಚ್ಚಾಗಿತ್ತು. ಜನರ ನಡುವೆ ಸಿಲುಕಿದ ಮಹಿಳೆಯರು, ಮಕ್ಕಳು ಹಾಗೂ ಹಿರಿಯರು ತೊಂದರೆ ಅನುಭವಿಸಿದರು. ಕೆಲ ಮಹಿಳೆಯರು ಮತ್ತು ಮಕ್ಕಳು ಉಸಿರಾಟದ ತೊಂದರೆಯಿಂದ ಅಸ್ವಸ್ಥರಾದರು. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಅವರನ್ನು ಜನಸಂದಣಿಯಿಂದ ಹೊರತಂದು ರಸ್ತೆ ಬದಿಯಲ್ಲಿ ಕೂರಿಸಿ ಆರೈಕೆ ಮಾಡಿದರು.

ಲಘು ಲಾಠಿ ಪ್ರಹಾರ

ಕೆ.ಆರ್. ವೃತ್ತ, ನಗರ ಬಸ್ ನಿಲ್ದಾಣ, ಚಿಕ್ಕಗಡಿಯಾರ ಬಳಿ ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು. ಬ್ಯಾರಿಕೇಡ್ ಗಳನ್ನು ಹತ್ತಿ ದಾಟಲು ಕೆಲವರು ಯತ್ನಿಸಿದಾಗ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು. ವಿವಿಧ ವೃತ್ತಗಳಲ್ಲಿ ಎರಡು ಹಂತದ ಬ್ಯಾರಿಕೇಡ್‌ಗಳನ್ನು ಅಳವಡಿಸಿ, ಅವುಗಳ ನಡುವಿನ ಜಾಗದಲ್ಲಿ ಮಕ್ಕಳನ್ನು ಕೂರಿಸಲು ವ್ಯವಸ್ಥೆ ಕಲ್ಪಿಸಲಾಗಿತ್ತು. ಆದರೂ ಜನರ ಮಹಾಪೂರವನ್ನು ನಿಯಂತ್ರಿಸುವುದು ಪೊಲೀಸರಿಗೆ ಸವಾಲಾಗಿ ಪರಿಣಮಿಸಿತು. ಮಧ್ಯಾಹ್ನದ ಬಿಸಿಲು ಮೈ ಸುಡುತ್ತಿದ್ದರೂ ಜನರು ಮಾತ್ರ ತಮ್ಮ ಜಾಗ ಬಿಟ್ಟುಕೊಡಲು ಸಿದ್ಧರಿರಲಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net