ಕಟ್ಟಡ, ಮರ ಏರುವ ಸಾಹಸಕ್ಕೆ ಬ್ರೇಕ್

*ಸುರಕ್ಷಿತ ದಸರಾಕ್ಕೆ ಜಿಲ್ಲಾಡಳಿತ ಕ್ರಮ *ಹಳೆಯ ಕಟ್ಟಡಗಳ ಸುತ್ತ ಪೊಲೀಸ್ ಕಾವಲು
Break from building and tree climbing adventure
ಕಟ್ಟಡ, ಮರ ಏರುವ ಸಾಹಸಕ್ಕೆ ಬ್ರೇಕ್
Published on: 

ಜಂಬೂಸವಾರಿ ಎಂದಾಕ್ಷಣ ದುಸ್ಥಿತಿಯಲ್ಲಿರುವ ಪಾರಂಪರಿಕ ಕಟ್ಟಡಗಳ ಮೇಲೆ ಜನರು ಕಿಕ್ಕಿರಿದು ಕುಳಿತು ಮೆರವಣಿಗೆ ವೀಕ್ಷಿಸುವುದು, ಮರಗಳ ತುದಿಗೇರಿ ಜಂಬೂಸವಾರಿಯ ವೈಭವ ಕಣ್ತುಂಬಿಕೊಳ್ಳುವುದು ಸಾಮಾನ್ಯ ದೃಶ್ಯವಾಗಿತ್ತು. ಆದರೆ, ಈ ಬಾರಿ ಅಂತಹ ಅಪಾಯಕಾರಿ ಸಾಹಸಗಳಿಗೆ ಜಿಲ್ಲಾಡಳಿತ ಕಡಿವಾಣ ಹಾಕಿತು.

ನಾಡಹಬ್ಬದ ಸಂಭ್ರಮದ ನಡುವೆ ಜನರ ಸುರಕ್ಷತೆಗೆ ಆದ್ಯತೆ ನೀಡಿದ ಜಿಲ್ಲಾಡಳಿತ, ಯಾವುದೇ ಅನಾಹುತ ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಿತು. ಜನರು ಜೀವದ ಹಂಗು ತೊರೆದು ಜಂಬೂಸವಾರಿ ವೀಕ್ಷಿಸಲು ಕಟ್ಟಡಗಳ ಮೇಲೆ ಏರುವುದನ್ನು ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿತ್ತು. ಪರಿಣಾಮ, ಪ್ರತಿವರ್ಷ ಜನರಿಂದ ತುಂಬಿರುತ್ತಿದ್ದ ನಗರದ ಹಲವು ಹಳೆಯ ಕಟ್ಟಡಗಳ ಮೇಲ್ಭಾಗ ಈ ಬಾರಿ ಖಾಲಿಯಾಗಿತ್ತು.

ಕಟ್ಟಡಗಳ ಮೇಲೆ ಪೊಲೀಸ್ ಕಾವಲು:

ದಸರಾ ಸಂದರ್ಭ ಲಕ್ಷಾಂತರ ಜನರು ನಗರಕ್ಕೆ ಆಗಮಿಸುವ ಹಿನ್ನೆಲೆಯಲ್ಲಿ ಯಾವುದೇ ರೀತಿಯ ಅನಾಹುತ ಸಂಭವಿಸದಂತೆ ಎಚ್ಚರಿಕೆ ವಹಿಸುವಂತೆ ರಾಜ್ಯ ಸರ್ಕಾರ ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಿತ್ತು. ಇದರಂತೆ, ದುಸ್ಥಿತಿಯಲ್ಲಿರುವ ಕಟ್ಟಡಗಳು ಹಾಗೂ ಪಾರಂಪರಿಕ ಕಟ್ಟಡಗಳ ಮೇಲೆ ಜನರು ಏರಿ ಜಂಬೂಸವಾರಿ ವೀಕ್ಷಿಸುವುದನ್ನು ನಿರ್ಬಂಧಿಸಲಾಗಿತ್ತು.

ನಗರದ ಪಾರಂಪರಿಕ ಕಟ್ಟಡಗಳಾದ ಲ್ಯಾನ್ಸ್‌ಡೌನ್, ದೇವರಾಜ ಮಾರುಕಟ್ಟೆ, ಹಳೆಯ ಕಟ್ಟಡಗಳಾದ ವಿಶ್ವೇಶ್ವರಯ್ಯ ಭವನ, ಕೆಎಸ್‌ಆರ್‌ಟಿಸಿ ನಗರ ಬಸ್ ನಿಲ್ದಾಣ ಕಟ್ಟಡ ಹಾಗೂ ಗರುಡ ಮಹಲ್ ಕಟ್ಟಡದ ಸುತ್ತ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಕಟ್ಟಡಗಳ ಬಳಿ ಇಬ್ಬರು-ಮೂವರು ಪೊಲೀಸ್ ಸಿಬ್ಬಂದಿ ನಿಯೋಜಿಸಿ, ಮೇಲ್ಭಾಗಕ್ಕೆ ತೆರಳಲು ಯತ್ನಿಸಿದವರಿಗೆ ತಿಳಿವಳಿಕೆ ನೀಡಿ ವಾಪಸ್ ಕಳುಹಿಸುತ್ತಿದ್ದ ದೃಶ್ಯಗಳು ಕಂಡುಬಂತು.

ಪ್ರತಿವರ್ಷ ಜಂಬೂಸವಾರಿ ಮೆರವಣಿಗೆಯನ್ನು ಎತ್ತರದಿಂದ ವೀಕ್ಷಿಸುವ ಉದ್ದೇಶದಿಂದ ಲ್ಯಾನ್ಸ್‌ಡೌನ್ ಕಟ್ಟಡ ಹಾಗೂ ದೇವರಾಜ ಮಾರುಕಟ್ಟೆಯ ಮೇಲ್ಭಾಗದಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಿದ್ದರು. ಆದರೆ, ಈ ಕಟ್ಟಡಗಳು ಶಿಥಿಲಾವಸ್ಥೆಯಲ್ಲಿರುವುದರಿಂದ ಕುಸಿದು ಬೀಳುವ ಅಪಾಯವಿದೆ ಎಂಬ ಆತಂಕವನ್ನು ಸಾಕಷ್ಟು ಜನರು ವ್ಯಕ್ತಪಡಿಸಿದ್ದರು. ಹೀಗಿದ್ದರೂ, ಮೆರವಣಿಗೆಯನ್ನು ಕಣ್ತುಂಬಿಕೊಳ್ಳುವ ಆಸೆಗೆ ಮಣಿದು ಜನರು ಕಟ್ಟಡಗಳನ್ನು ಏರುತ್ತಿದ್ದರು. ಈ ಬಾರಿ ಅಂತಹ ಅಪಾಯಕಾರಿ ಪ್ರವೃತ್ತಿಗೆ ಕಡಿವಾಣ ಹಾಕುವ ಪ್ರಯತ್ನ ನಡೆಯಿತು.

ಮರದ ಮೇಲಿನ ಸಾಹಸಕ್ಕೂ ತಡೆ:

ಕಟ್ಟಡಗಳಷ್ಟೇ ಅಲ್ಲ, ರಸ್ತೆ ಬದಿಯ ಮರಗಳೂ ಜಂಬೂಸವಾರಿ ವೀಕ್ಷಣೆಯ ವೇದಿಕೆಗಳಾಗುತ್ತಿದ್ದವು. ನೆಲದಲ್ಲಿ ನಿಂತು ಮೆರವಣಿಗೆ ನೋಡಲು ಸಾಧ್ಯವಾಗದ ಕೆಲವರು ಮರಗಳ ಕೊಂಬೆಗಳನ್ನು ಏರಿ ಕುಳಿತುಕೊಳ್ಳುತ್ತಿದ್ದರು. ಇದರಿಂದ ಕೆಳಗೆ ಬೀಳುವ ಅಪಾಯವಷ್ಟೇ ಅಲ್ಲದೆ, ಮರದ ಕೊಂಬೆಗಳು ಮುರಿದು ಅನಾಹುತ ಸಂಭವಿಸುವ ಸಾಧ್ಯತೆಯೂ ಇತ್ತು. ಇದನ್ನು ಮನಗಂಡು ಈ ಬಾರಿ ಪ್ರಮುಖ ಸ್ಥಳಗಳಲ್ಲಿನ ಮರಗಳ ಬಳಿ ಪೊಲೀಸರನ್ನು ನಿಯೋಜಿಸಿ, ಜನರು ಮರ ಏರುವುದನ್ನು ತಡೆಯಲಾಯಿತು. ಆದರೂ, ಕೆಲ ಯುವಕರು ಪೊಲೀಸರ ಕಣ್ತಪ್ಪಿಸಿ ಮರಗಳನ್ನು ಏರಿ ಮೆರವಣಿಗೆ ವೀಕ್ಷಿಸುತ್ತಿದ್ದ ದೃಶ್ಯಗಳು ಅಲ್ಲಲ್ಲಿ ಕಂಡುಬಂದವು.

ಸಂಭ್ರಮಕ್ಕಿಂತ ಸುರಕ್ಷತೆಯೇ ಮುಖ್ಯ:

ದಸರಾ ಜಂಬೂಸವಾರಿ ಮೈಸೂರಿಗರ ಪಾಲಿಗೆ ಕೇವಲ ಮೆರವಣಿಗೆಯಲ್ಲ; ಅದು ನಾಡಿನ ಪರಂಪರೆ, ಹೆಮ್ಮೆ ಹಾಗೂ ಭಾವನಾತ್ಮಕ ಬೆಸುಗೆಯ ಸಂಕೇತ. ಅದನ್ನು ಕಣ್ತುಂಬಿಕೊಳ್ಳಲು ಜನರು ಗಂಟೆಗಟ್ಟಲೆ ಕಾಯುವುದು, ಉತ್ತಮ ಸ್ಥಳಕ್ಕಾಗಿ ಮುಂಚಿತವಾಗಿಯೇ ಜಾಗ ಕಾಯ್ದಿರಿಸುವುದು ಸಹಜ. ಆದರೆ, ಈ ಉತ್ಸಾಹದ ನಡುವೆ ಜೀವಕ್ಕೆ ಅಪಾಯ ತಂದುಕೊಳ್ಳುವ ಪ್ರವೃತ್ತಿಗೆ ಕಡಿವಾಣ ಹಾಕುವುದು ಅಗತ್ಯವಾಗಿತ್ತು. ಅದನ್ನು ಜಿಲ್ಲಾಡಳಿತ ಯಶಸ್ವಿಯಾಗಿ ಮಾಡಿದೆ.

ಪ್ರತಿ ವರ್ಷ ಜಂಬೂಸವಾರಿ ದಿನ ದುಸ್ಥಿತಿಯಲ್ಲಿರುವ ಕಟ್ಟಡಗಳ ಮೇಲೆ ಜನರು ತುಂಬಿಕೊಂಡಿರುವುದು ಹಾಗೂ ಮರಗಳ ತುದಿಯಲ್ಲಿ ಕುಳಿತು ಮೆರವಣಿಗೆ ವೀಕ್ಷಿಸುವುದು ಆತಂಕಕ್ಕೆ ಕಾರಣವಾಗುತ್ತಿತ್ತು. ಈ ಬಾರಿ ಅಂತಹ ದೃಶ್ಯಗಳನ್ನು ತಡೆಯಲು ಜಿಲ್ಲಾಡಳಿತ ಕೈಗೊಂಡ ಕ್ರಮದಿಂದ ಹಳೆಯ ಕಟ್ಟಡಗಳ ಮೇಲಿನ ಜನದಟ್ಟಣೆ ತಪ್ಪಿದಂತಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net