ಆಶಾ ಕಾರ್ಯಕರ್ತೆಯರ ಬೇಡಿಕೆಗಳನ್ನು ಈಡೇರಿಸಿ

* ವಿವಿಧ ಸಂಘಟನೆಗಳ ಆಗ್ರಹ * ನಗರದ ರಾಮಸ್ವಾಮಿ ವೃತ್ತದಲ್ಲಿ ಪ್ರತಿಭಟನೆ
A protest was held on Saturday at Ramaswamy Circle in the city under the leadership of AIDSSO.
ಎಐಡಿಎಸ್‌ಒ ನೇತೃತ್ವದಲ್ಲಿ ನಗರದ ರಾಮಸ್ವಾಮಿ ವೃತ್ತದಲ್ಲಿ ಶನಿವಾರ ಪ್ರತಿಭಟನೆ ನಡೆಯಿತು.
Published on: 

ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಆಶಾ ಕಾರ್ಯಕರ್ತೆಯರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಹೋರಾಟಕ್ಕೆ ಬೆಂಬಲ ಸೂಚಿಸಿ ನಗರದಲ್ಲಿ ಶನಿವಾರ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿ, ರಾಜ್ಯ ಸರ್ಕಾರ ಕೂಡಲೇ ಅವರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿದವು.

ಆಶಾ ಕಾರ್ಯಕರ್ತೆಯರ ನ್ಯಾಯಯುತ ಬೇಡಿಕೆಗಳನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿ ಈಡೇರಿಸಬೇಕು ಎಂದು ಆಗ್ರಹಿಸಿ ಎಐಡಿಎಸ್‌ಒ ನೇತೃತ್ವದಲ್ಲಿ ನಗರದ ರಾಮಸ್ವಾಮಿ ವೃತ್ತದಲ್ಲಿ ಪ್ರತಿಭಟನೆ ನಡೆಯಿತು.

ಎಐಡಿಎಸ್‌ಒ ರಾಜ್ಯ ಖಜಾಂಚಿ ಸುಭಾಷ್ ಬೆಟ್ಟದ ಕೊಪ್ಪ ಮಾತನಾಡಿ, ಕಳೆದ 12 ದಿನಗಳಿಂದ ಮಳೆ, ಚಳಿ, ಬಿಸಿಲನ್ನೂ ಲೆಕ್ಕಿಸದೆ ಆಶಾ ಕಾರ್ಯಕರ್ತೆಯರು ಬೆಂಗಳೂರಿನ ಫೀಡಂ ಪಾರ್ಕ್‌ನಲ್ಲಿ ನಿರಂತರ ಹೋರಾಟ ನಡೆಸುತ್ತಿದ್ದಾರೆ. ಅವರ ಹೋರಾಟ ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಿದೆ. ಮಹಿಳೆಯರು ಹಾಗೂ ಹಿಂದುಳಿದ ಜನಸಮುದಾಯದ ಏಳಿಗೆಗೆ ಶ್ರಮಿಸಿದ ಮಹಾತ್ಮ ಜ್ಯೋತಿಬಾ ಫುಲೆ ಅವರ ಸ್ಮರಣದಿನದ ಸಂದರ್ಭದಲ್ಲಿ ಮಕ್ಕಳೊಂದಿಗೆ ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿರುವ ಆಶಾ ತಾಯಂದಿರ ಹೋರಾಟವನ್ನು ಎಐಡಿಎಸ್‌ಒ ಸಂಪೂರ್ಣವಾಗಿ ಬೆಂಬಲಿಸುತ್ತದೆ ಎಂದರು.

4.5 ಲಕ್ಷ ಕೋಟಿ ರೂ.ಬಜೆಟ್ ಹೊಂದಿರುವ ಸರ್ಕಾರ ಆಶಾ ಕಾರ್ಯಕರ್ತೆಯರ ಬೇಡಿಕೆಯಾದ ಕನಿಷ್ಠ 15 ಸಾವಿರ ರೂ.ವೇತನ ನಿಗದಿಪಡಿಸಲು ಮುಂದಾಗುತ್ತಿಲ್ಲ. ಬೇಡಿಕೆಗಳನ್ನು ಈಡೇರಿಸುವ ಬದಲು ಮುಖ್ಯಮಂತ್ರಿಗಳು ಸೇರಿದಂತೆ ಸಚಿವರು ಬೇಜವಾಬ್ದಾರಿಯುತ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಸಂವಿಧಾನ ಉಳಿಸುವ ಮಾತುಗಳನ್ನಾಡುವ ಸರ್ಕಾರವೇ ಸಂವಿಧಾನ ವಿರೋಧಿ ನಡೆ ತೋರುತ್ತಿದೆ ಎಂದು ಟೀಕಿಸಿದರು.

ಹಿರಿಯ ಸಾಹಿತಿ ನಾ.ದಿವಾಕರ್ ಮಾತನಾಡಿ, ಕಾರ್ಪೋರೇಟ್ ಕಂಪನಿಗಳಿಗೆ ಸಾವಿರಾರು ಕೋಟಿ ರೂ.ತೆರಿಗೆ ವಿನಾಯಿತಿ ನೀಡುತ್ತಿರುವ ಸರ್ಕಾರ, ಆಶಾ ಕಾರ್ಯಕರ್ತೆಯರಿಗೆ ಕನಿಷ್ಠ ವೇತನ ನಿಗದಿಪಡಿಸದಿರುವುದು ಕಾರ್ಮಿಕ ವಿರೋಧಿ ಧೋರಣೆಯಾಗಿದೆ. ದುಡಿಯುವ ವರ್ಗ ವೇತನಕ್ಕಾಗಿ ಹೋರಾಟ ಮಾಡಿದಾಗ ಅದನ್ನು ಬ್ಲಾಕ್‌ಮೇಲ್ ಎಂದು ಕರೆಯುವುದು ಅತ್ಯಂತ ಬೇಜವಾಬ್ದಾರಿಯ ಹೇಳಿಕೆ. 8ರಿಂದ 10 ಗಂಟೆಗಳ ಕಾಲ ಮನೆ ಮನೆಗೆ ತೆರಳಿ ಮಾನವೀಯ ಸೇವೆ ಸಲ್ಲಿಸುವ ಆಶಾ ಕಾರ್ಯಕರ್ತೆಯರಿಗೆ ಮಾಡಿದ ಅವಮಾನವಾಗಿದೆ. ಕೂಡಲೇ ವೈಜ್ಞಾನಿಕವಾಗಿ ಮಾಸಿಕ ವೇತನ ನಿಗದಿಪಡಿಸಬೇಕು ಎಂದು ಆಗ್ರಹಿಸಿದರು.

ನಿವೃತ್ತ ಪ್ರಾಧ್ಯಾಪಕ ಕಾಳಚನ್ನೇಗೌಡ ಮಾತನಾಡಿ, ಆಶಾ ಕಾರ್ಯಕರ್ತೆಯರು ದಿಢೀರ್ ಮುಷ್ಕರ ಆರಂಭಿಸಿಲ್ಲ. ಹಲವು ಬಾರಿ ಶಾಂತಿಯುತವಾಗಿ ಮನವಿ ಸಲ್ಲಿಸಿದ್ದಾರೆ. ಕಳೆದ ಬಾರಿ ಸರ್ಕಾರ ನೀಡಿದ್ದ ಭರವಸೆಯನ್ನೂ ಈಡೇರಿಸಿಲ್ಲ. ಸರ್ಕಾರ ಆಶಾ ಕಾರ್ಯಕರ್ತೆಯರ ಸೇವೆಯಿಂದ ಹಲವು ಪ್ರಯೋಜನಗಳನ್ನು ಪಡೆಯುತ್ತಿದ್ದರೂ ಅವರ ಶ್ರಮಕ್ಕೆ ತಕ್ಕ ವೇತನ ನೀಡುತ್ತಿಲ್ಲ. ಸರ್ಕಾರಕ್ಕೆ ತಾಯಿ ಹೃದಯವಿಲ್ಲ. ಕೂಡಲೇ ವೇತನ ನಿಗದಿಪಡಿಸಬೇಕು ಎಂದು ಒತ್ತಾಯಿಸಿದರು.

ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ಪದಾಧಿಕಾರಿ ಡಾ.ಇ.ರತಿರಾವ್ ಮಾತನಾಡಿ, ಕೋವಿಡ್ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯರು ಬೀದಿ ಬೀದಿಗಳಲ್ಲಿ ಸಂಚರಿಸಿ ಹಲವರ ಪ್ರಾಣ ಉಳಿಸಿದ್ದಾರೆ. ಅವರ ಹೋರಾಟಕ್ಕೆ ಸಂಪೂರ್ಣ ಬೆಂಬಲವಿದೆ. ಆಶಾ ಕಾರ್ಯಕರ್ತೆಯರು ಕೇಳುತ್ತಿರುವ 15 ಸಾವಿರವೇ ಕಡಿಮೆಯಾಗಿದ್ದು, ಅವರ ಶ್ರಮಕ್ಕೆ ತಕ್ಕಂತೆ 40 ಸಾವಿರ ರೂ.ವೇತನ ನಿಗದಿಪಡಿಸಬೇಕು ಎಂದು ಅಭಿಪ್ರಾಯಪಟ್ಟರು.

ಪ್ರತಿಭಟನೆಯಲ್ಲಿ ನಿವೃತ್ತ ಪ್ರಾಧ್ಯಾಪಕಿ ಡಾ.ಎಚ್.ಎಂ.ಹೇಮಲತಾ, ಎಐಡಿಎಸ್‌ಒ ಜಿಲ್ಲಾ ಕಾರ್ಯದರ್ಶಿಗಳಾದ ನಿತಿನ್, ನಿವೃತ್ತ ಪ್ರಾಧ್ಯಾಪಕರಾದ ಲತಾ ಬಿದ್ದಪ್ಪ, ಶ್ರೀದೇವಿ, ರೂಪರಾವ್, ರಂಗನಿರ್ದೇಶಕಿ ಕೆ.ಆರ್.ಸುಮತಿ, ಸಾಮಾಜಿಕ ಹೋರಾಟಗಾರ್ತಿ ನಂದಾ ಹಳೆಮನೆ ಇತತರರಿದ್ದರು.

ಮೈಸೂರು ಕನ್ನಡ ವೇದಿಕೆ:

ನಗರದ ಹಳೆಯ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಮೈಸೂರು ಕನ್ನಡ ವೇದಿಕೆ ವತಿಯಿಂದ ಪ್ರತಿಭಟನೆ ನಡೆಯಿತು. ಆಶಾ ಕಾರ್ಯಕರ್ತೆಯರು ಗ್ರಾಮೀಣ ಆರೋಗ್ಯ ವ್ಯವಸ್ಥೆಯ ನಿಜವಾದ ಕಾವಲುಗಾರರಾಗಿದ್ದು, ಕೋವಿಡ್ ಸಾಂಕ್ರಾಮಿಕದ ಸಂದರ್ಭದಿಂದ ಇಂದಿನವರೆಗೂ ಜೀವದ ಹಂಗು ತೊರೆದು ಗರ್ಭಿಣಿಯರು, ಬಾಣಂತಿಯರು, ಮಕ್ಕಳು ಹಾಗೂ ಹಿರಿಯರ ಆರೋಗ್ಯ ರಕ್ಷಣೆಗೆ ಶ್ರಮಿಸುತ್ತಿದ್ದಾರೆ. ಆದರೆ, ಅವರಿಗೆ ಸಿಗುತ್ತಿರುವ ಗೌರವಧನ ತೀರಾ ಕಡಿಮೆಯಾಗಿದ್ದು, ಅಗತ್ಯ ವಸ್ತುಗಳ ಬೆಲೆ ಏರಿಕೆಯ ನಡುವೆ ಜೀವನ ನಡೆಸುವುದು ಕಷ್ಟಕರವಾಗಿದೆ. ಇಷ್ಟಾದರೂ ಸರ್ಕಾರ ಅವರ ಸಮಸ್ಯೆಗಳ ಬಗ್ಗೆ ಗಮನಹರಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರ ಕೇವಲ ಭರವಸೆಗಳನ್ನು ನೀಡುತ್ತಾ ಕಾಲಹರಣ ಮಾಡುತ್ತಿದೆ. ಆಶಾ ಕಾರ್ಯಕರ್ತೆಯರಿಗೆ ಕೂಡಲೇ ಮಾಸಿಕ 15 ಸಾವಿರ ರೂ.ಗೌರವಧನ ನಿಗದಿಪಡಿಸಬೇಕು. ನಿವೃತ್ತಿ ಸೌಲಭ್ಯ ಹಾಗೂ ಆರೋಗ್ಯ ವಿಮೆ ಒದಗಿಸಬೇಕು ಎಂದು ಒತ್ತಾಯಿಸಿದರು.

ವೇದಿಕೆ ಅಧ್ಯಕ್ಷ ಎಸ್.ಬಾಲಕೃಷ್ಣ, ಪದಾಧಿಕಾರಿಗಳಾದ ಗುರುಬಸಪ್ಪ, ಬೋಗಾದಿ ಸಿದ್ದೇಗೌಡ, ಪ್ಯಾಲೇಸ್ ಬಾಬು, ಎಲ್.ಐ.ಸಿ.ಸಿದ್ದಪ್ಪ, ಗೋವಿಂದರಾಜು, ಬೀಡ ಬಾಬು, ಹೊನಕೆರೆ ಸ್ವಾಮಿ, ಕಾವೇರಮ್ಮ, ಮಾಲಿನಿ, ರಮೇಶ್, ಗೋಪಿ, ಚಿನ್ನಪ್ಪ, ಶಿವೇಗೌಡ ಇದ್ದರು.