

ಬೆಟ್ಟದಪುರ: ಪಿರಿಯಾಪಟ್ಟಣ ತಾಲೂಕಿನ ಗಡಿಗ್ರಾಮ, ಕಾವೇರಿ ನದಿ ತಟಕ್ಕೆ ಹೊಂದಿಕೊಂಡಿರುವ ಚಾಮರಾಯನಕೋಟೆ ಗ್ರಾಮದಲ್ಲಿ ತಲೆತಲಾಂತರಗಳಿಂದ ನಡೆದುಕೊಂಡು ಬರುತ್ತಿರುವ ಅಪರೂಪದ ಸ್ವರ್ಣಗೌರಿ ಆರಾಧನೆಗೆ ಗುರುವಾರ ಸಂಪನ್ನಗೊಂಡಿತು.
ಶ್ರೀ ವಿಶ್ವಕರ್ಮ ಸಮುದಾಯದ ಗೌರಿ ಕುಟುಂಬದವರು ಹಾಗೂ ಗ್ರಾಮಸ್ಥರ ಸಹಕಾರದಿಂದ ದೇಗುಲದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಸ್ವರ್ಣಗೌರಿ ದೇವಿ ಹಾಗೂ ಗಣೇಶ ಮೂರ್ತಿಗಳಿಗೆ ಬುಧವಾರ ಸಂಜೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಶೇಷ ಪೂಜಾ ಕೈಂಕರ್ಯ ನೆರವೇರಿದವು. ಗೌರಿ ಹಬ್ಬದ ಸಂದರ್ಭದಲ್ಲಿ ಆರಂಭಗೊಂಡಿದ್ದ ಈ ಧಾರ್ಮಿಕ ಆಚರಣೆ ಸುಮಾರು 27 ದಿನಗಳ ಕಾಲ ವಿಜೃಂಭಣೆಯಿಂದ ನಡೆದಿದ್ದು, ಪ್ರತಿದಿನ ದೇವಿಗೆ ವಿಶೇಷ ಪೂಜೆ, ಅಲಂಕಾರ ಹಾಗೂ ಧಾರ್ಮಿಕ ಕೈಂಕರ್ಯ ನೆರವೇರಿಸಲಾಯಿತು.
ಲೋಕಕಲ್ಯಾಣಕ್ಕಾಗಿ ಗೌರಿ ವ್ರತ:
ವಿಶ್ವಕರ್ಮ ಸಮುದಾಯದ ಗೌರಿ ಕುಟುಂಬದವರು ತಲೆತಲಾಂತರಗಳಿಂದ ಲೋಕಕಲ್ಯಾಣ, ಗ್ರಾಮದ ಒಳಿತಿಗಾಗಿ ಸ್ವರ್ಣಗೌರಿ ವ್ರತವನ್ನು ಆಚರಿಸಿಕೊಂಡು ಬರುತ್ತಿದ್ದಾರೆ. ಗೌರಿ-ಗಣೇಶ ಹಬ್ಬದ ಸಂದರ್ಭದಲ್ಲಿ ದೇವಿಯನ್ನು ಪ್ರತಿಷ್ಠಾಪಿಸಿ, ವಿಶೇಷ ಪೂಜೆಗಳನ್ನು ನೆರವೇರಿಸುವುದು ಈ ಸಂಪ್ರದಾಯದ ಪ್ರಮುಖ ಭಾಗವಾಗಿದೆ. ಮಹಾಲಯ ಅಮಾವಾಸ್ಯೆಗೆ ಮೂರು ದಿನ ಮುನ್ನ ದೇವಿಯ ಮೂರ್ತಿಯನ್ನು ವಿಜೃಂಭಣೆಯಿಂದ ಮೆರವಣಿಗೆ ಮೂಲಕ ಕೊಂಡೊಯ್ದು ಕಾವೇರಿ ನದಿಯಲ್ಲಿ ವಿಸರ್ಜಿಸುವುದು ಇಲ್ಲಿನ ವಿಶೇಷ ಆಚರಣೆಯಾಗಿದೆ. ಗೌರಿ ಪ್ರತಿಷ್ಠಾಪನೆಯಿಂದ ವಿಸರ್ಜನೆಯವರೆಗೂ ಗ್ರಾಮದಲ್ಲಿ ಹಬ್ಬದ ವಾತಾವರಣ ಮನೆ ಮಾಡಿರುತ್ತದೆ.
ಮಹಿಳೆಯರಿಂದ ಬಾಗಿನ ಅರ್ಪಣೆ:
ಗೌರಿ ಹಬ್ಬದ ಸಂದರ್ಭದಲ್ಲಿ ಗ್ರಾಮದ ಮಹಿಳೆಯರು ಭಕ್ತಿಭಾವದಿಂದ ದೇವಿಗೆ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸುವುದು ಇಲ್ಲಿನ ಆಚರಣೆಯ ಮತ್ತೊಂದು ವಿಶೇಷತೆ. ಅರಿಶಿಣ, ಕುಂಕುಮ, ಬಳೆ, ಬಾಚಣಿಗೆ, ಕನ್ನಡಿ ಸೇರಿದಂತೆ ಮುತ್ತೈದೆಯ ಸಂಕೇತವಾಗಿರುವ ವಿವಿಧ ವಸ್ತುಗಳನ್ನು ಬಾಗಿನದಲ್ಲಿ ಇಟ್ಟು ದೇವಿಗೆ ಸಮರ್ಪಿಸಲಾಗುತ್ತದೆ. ಕುಟುಂಬದ ಸೌಭಾಗ್ಯ, ಆರೋಗ್ಯ, ನೆಮ್ಮದಿ ಹಾಗೂ ಸಮೃದ್ಧಿಗಾಗಿ ಮಹಿಳೆಯರು ಪ್ರಾರ್ಥಿಸಿ ದೇವಿಯ ಆಶೀರ್ವಾದ ಪಡೆಯುತ್ತಾರೆ.
ಬುಧವಾರ ರಾತ್ರಿ ಅರ್ಚಕ ಸುಬ್ರಹ್ಮಣ್ಯ ಅವರ ನೇತೃತ್ವದಲ್ಲಿ ದೇವರಿಗೆ ವಿಶೇಷ ಅಲಂಕಾರ, ಪೂಜೆ ಹಾಗೂ ಮಹಾಮಂಗಳಾರತಿ ನೆರವೇರಿತು. ಗ್ರಾಮದ ಮಹಿಳೆಯರು ಸೇರಿದಂತೆ ಅಪಾರ ಸಂಖ್ಯೆಯ ಭಕ್ತರು ದೇವಿಗೆ ಪೂಜೆ ಸಲ್ಲಿಸಿ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು.
ಧಾನ್ಯದ ಪುಡಿಯಿಂದ ದೇವಿಯ ಮೂರ್ತಿ:
ಇಲ್ಲಿನ ಸ್ವರ್ಣಗೌರಿ-ಗಣೇಶ ಆರಾಧನೆಯ ಮತ್ತೊಂದು ವಿಶೇಷವೆಂದರೆ ದೇವಿ ಮತ್ತು ಗಣೇಶನ ಮೂರ್ತಿಗಳನ್ನು ಗ್ರಾಮದ ಶಿಲ್ಪಿಗಳಾದ ಸಿ.ಟಿ. ನಾಗರಾಜು ಹಾಗೂ ಮಂಜುನಾಥ್ ಅವರು ಸ್ವತಃ ತಯಾರಿಸುವುದು. ವಿವಿಧ ಧಾನ್ಯಗಳ ಪುಡಿಯನ್ನು ಬಳಸಿ ಮೂರ್ತಿಗಳನ್ನು ನಿರ್ಮಿಸಿ, ಸಂಪ್ರದಾಯಬದ್ಧವಾಗಿ ಅಲಂಕರಿಸಿ ಪ್ರತಿಷ್ಠಾಪಿಸಲಾಗುತ್ತದೆ. ಹೀಗಾಗಿ ಇದು ಕೇವಲ ಧಾರ್ಮಿಕ ಆಚರಣೆಯಾಗಿರದೆ, ಗ್ರಾಮದ ಸಾಂಪ್ರದಾಯಿಕ ಕಲೆ, ಭಕ್ತಿ ಹಾಗೂ ಪೂರ್ವಜರಿಂದ ಬಂದ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ವಿಶಿಷ್ಟ ಪರಂಪರೆಯಾಗಿದೆ.
ವೀರಗಾಸೆ, ಚಂಡೆ ವಾದ್ಯದೊಂದಿಗೆ ಮೆರವಣಿಗೆ:
ಗುರುವಾರ ಬೆಳಗ್ಗೆ ಸ್ವರ್ಣಗೌರಿ ಹಾಗೂ ಗಣೇಶ ಮೂರ್ತಿಗಳನ್ನು ವಿಶೇಷವಾಗಿ ಅಲಂಕರಿಸಲಾದ ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಲಾಯಿತು. ಬಳಿಕ ವೀರಗಾಸೆ ಹಾಗೂ ಚಂಡೆ ವಾದ್ಯದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಭವ್ಯ ಮೆರವಣಿಗೆ ನಡೆಯಿತು. ಮೆರವಣಿಗೆ ಸಾಗುವ ಮಾರ್ಗದುದ್ದಕ್ಕೂ ಭಕ್ತರು ದೇವಿಯ ದರ್ಶನ ಪಡೆದು ಪೂಜೆ ಸಲ್ಲಿಸಿ, ತಮ್ಮ ಕುಟುಂಬದ ಒಳಿತಿಗಾಗಿ ಹಾಗೂ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು. ಬಳಿಕ ಸ್ವರ್ಣಗೌರಿ ಹಾಗೂ ಗಣೇಶ ಮೂರ್ತಿಗಳನ್ನು ಕಾವೇರಿ ನದಿಯಲ್ಲಿ ಧಾರ್ಮಿಕ ವಿಧಿವಿಧಾನಗಳೊಂದಿಗೆ ವಿಸರ್ಜನೆ ಮಾಡಲಾಯಿತು. ಈ ವೇಳೆ ಭಕ್ತರು ಭಕ್ತಿಗೀತೆ ಹಾಗೂ ಘೋಷಣೆಗಳೊಂದಿಗೆ ದೇವಿಗೆ ಭಾವಪೂರ್ಣ ಬೀಳ್ಕೊಡುಗೆ ನೀಡಿದರು.
ಮೈಮುಲ್ ಮಾಜಿ ಅಧ್ಯಕ್ಷ ಪಿ.ಎಂ. ಪ್ರಸನ್ನ ಮಾತನಾಡಿ, ವಿಶ್ವಕರ್ಮ ಸಮುದಾಯದ ಭಕ್ತರು ಹಾಗೂ ಗ್ರಾಮಸ್ಥರು ಹಲವು ವರ್ಷಗಳಿಂದ ಒಗ್ಗಟ್ಟಿನಿಂದ ಗೌರಿ ವ್ರತ ಆಚರಿಸಿಕೊಂಡು ಬರುತ್ತಿರುವುದು ಗ್ರಾಮದ ಧಾರ್ಮಿಕ ಪರಂಪರೆಯ ಪ್ರತೀಕವಾಗಿದೆ. ಸ್ವರ್ಣಗೌರಿ ದೇವಿಯ ಅನುಗ್ರಹದಿಂದ ನಾಡಿನಲ್ಲಿ ಸಕಾಲಕ್ಕೆ ಮಳೆ-ಬೆಳೆ ಆಗಿ, ರೈತರು ಹಾಗೂ ಜನರು ಸುಖ-ಸಮೃದ್ಧಿಯಿಂದ ಬದುಕುವಂತಾಗಲಿ ಎಂದು ಆಶಿಸಿದರು.
ಅರ್ಚಕ ಸುಬ್ರಹ್ಮಣ್ಯ ಮಾತನಾಡಿ, ಸುಮಾರು 800 ವರ್ಷಗಳಿಂದ ನಮ್ಮ ಪೂರ್ವಜರು ಸ್ವರ್ಣಗೌರಿ ವ್ರತವನ್ನು ಆಚರಿಸಿಕೊಂಡು ಬಂದಿದ್ದಾರೆ. ಭಕ್ತರು ದೇವಿಯ ದರ್ಶನ ಪಡೆದು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸುತ್ತಾರೆ. ಈ ಪರಂಪರೆ ಮುಂದಿನ ಪೀಳಿಗೆಗೂ ಮುಂದುವರಿಯಬೇಕಾಗಿದೆ. ಗ್ರಾಮದಲ್ಲಿರುವ ಪುರಾತನ ದೇಗುಲಕ್ಕೆ ಜೀರ್ಣೋದ್ಧಾರದ ಅವಶ್ಯಕತೆ ಇದ್ದು, ಸಂಬಂಧಪಟ್ಟ ಜನಪ್ರತಿನಿಧಿಗಳು ಹಾಗೂ ಸರ್ಕಾರ ದೇಗುಲದ ಅಭಿವೃದ್ಧಿ ಮತ್ತು ಜೀರ್ಣೋದ್ಧಾರಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ಮನವಿ ಮಾಡಿದರು.
ಈ ವೇಳೆ ಸಿ.ಟಿ. ನಾಗರಾಜು, ಮಂಜುನಾಥ್, ಸಿ.ಎಸ್. ಕುಮಾರ, ಯೋಗೇಶ್, ಈಶ್ವರಾಚಾರ್, ಸಿ.ಎಂ. ಮಹೇಶ್, ದೇವರಾಜು, ಸಿ.ಪಿ. ಮಂಜು, ಹರೀಶ್, ಲೋಕೇಶ್, ಸಿ.ಜಿ. ನಟರಾಜು, ಮೋಹನ್, ಸಂಜಯ್, ಸಾಗರ್, ಸ್ವಾಮಾಚಾರಿ, ಮಲ್ಲೇಶಾಚಾರಿ, ಪ್ರಕಾಶಾಚಾರಿ ಸೇರಿದಂತೆ ಗೌರಿ ಕುಟುಂಬದವರು ಹಾಗೂ ಗ್ರಾಮಸ್ಥರು ಇದ್ದರು.