ಅಕ್ಟೋಬರ್ 31ರವರೆಗೆ ಇರಲಿದೆ ಮೈಸೂರು ದಸರಾ ದೀಪಾಲಂಕಾರ


ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿರುವ ಸಾಂಸ್ಕೃತಿಕ ನಗರಿ ಮೈಸೂರು
ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿರುವ ಸಾಂಸ್ಕೃತಿಕ ನಗರಿ ಮೈಸೂರು
Published on: 

ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವ ಅದ್ಧೂರಿಯಾಗಿ ಮುಕ್ತಾಯಗೊಂಡಿದೆ. ಆದರೆ, ದಸರಾ ಸಂಭ್ರಮಕ್ಕೆ ಕಿರೀಟವಿಟ್ಟಂತಿರುವ ವಿದ್ಯುತ್ ದೀಪಾಲಂಕಾರದ ಸೊಬಗು ಇನ್ನೂ ಮುಂದುವರಿಯಲಿದೆ. ಅರಮನೆಗಳ ನಗರಿಯನ್ನು ಬೆಳಕಿನ ಲೋಕವನ್ನಾಗಿಸಿರುವ ವರ್ಣರಂಜಿತ ದೀಪಾಲಂಕಾರವನ್ನು ಅ.31ರವರೆಗೆ ವೀಕ್ಷಿಸಲು ಅವಕಾಶವಿದ್ದು, ಮೈಸೂರಿಗರು ಹಾಗೂ ಪ್ರವಾಸಿಗರು ಇನ್ನೂ ಹಲವು ದಿನಗಳ ಕಾಲ ಬೆಳಕಿನ ವೈಭವವನ್ನು ಕಣ್ತುಂಬಿಕೊಳ್ಳಬಹುದು.

ದಸರಾ ಸಂದರ್ಭದಲ್ಲಿ ದೇಶ-ವಿದೇಶಗಳಿಂದ ಲಕ್ಷಾಂತರ ಪ್ರವಾಸಿಗರು ಮೈಸೂರಿಗೆ ಆಗಮಿಸುವುದರಿಂದ ನಗರದ ಪ್ರಮುಖ ರಸ್ತೆಗಳಲ್ಲಿ ವಾಹನ ದಟ್ಟಣೆ ಹೆಚ್ಚಾಗುತ್ತದೆ. ಇದರಿಂದ ದೀಪಾಲಂಕಾರ ವೀಕ್ಷಿಸಲು ಬಯಸುವ ಎಲ್ಲರಿಗೂ ಅನುಕೂಲಕರವಾಗಿ ಸಂಚರಿಸಲು ಸಾಧ್ಯವಾಗುವುದಿಲ್ಲ. ಇದೀಗ ದಸರಾ ಮಹೋತ್ಸವ ಮುಕ್ತಾಯಗೊಂಡಿರುವುದರಿಂದ ವಾಹನ ದಟ್ಟಣೆ ಕಡಿಮೆಯಾಗುವ ನಿರೀಕ್ಷೆಯಿದ್ದು, ಅ.31ರೊಳಗೆ ತಮಗೆ ಅನುಕೂಲವಾದ ದಿನದಂದು ಕುಟುಂಬದವರು ಹಾಗೂ ಸ್ನೇಹಿತರೊಂದಿಗೆ ನಗರ ಪ್ರದಕ್ಷಿಣೆ ಹಾಕುತ್ತಾ ವಿದ್ಯುತ್ ದೀಪಾಲಂಕಾರದ ಸೊಬಗನ್ನು ಆಸ್ವಾದಿಸಬಹುದು.

ಈ ಬಾರಿಯ ದಸರಾ ಸಂಭ್ರಮಕ್ಕೆ ವಿದ್ಯುತ್ ದೀಪಗಳ ವೈಭವ ವಿಶೇಷ ಮೆರುಗು ನೀಡಿದೆ. ಲಕ್ಷಾಂತರ ದೀಪಗಳ ಬೆಳಕಿನಲ್ಲಿ ಮೈಸೂರು ಕಂಗೊಳಿಸುತ್ತಿದ್ದು, ರಸ್ತೆಯುದ್ದಕ್ಕೂ ಹರಡಿರುವ ಬಣ್ಣಬಣ್ಣದ ಬೆಳಕು, ವೃತ್ತಗಳಲ್ಲಿ ಅರಳಿರುವ ಕಲಾತ್ಮಕ ವಿನ್ಯಾಸಗಳು ಹಾಗೂ ವಿವಿಧ ಪರಿಕಲ್ಪನೆಗಳ ಆಕೃತಿಗಳು ನೋಡುಗರನ್ನು ಮಂತ್ರಮುಗ್ಧಗೊಳಿಸುತ್ತಿವೆ. ರಾತ್ರಿ ಹೊತ್ತಿನಲ್ಲಿ ಬೆಳಕಿನಿಂದ ಕಂಗೊಳಿಸುವ ನಗರವನ್ನು ನೋಡಿದಾಗ ಸ್ವರ್ಗವೇ ಧರೆಗಿಳಿದ ಅನುಭವವಾಗುತ್ತದೆ.

ನಾಡಹಬ್ಬದ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸುವ ಉದ್ದೇಶದಿಂದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ (ಸೆಸ್ಕ್) ಈ ಬಾರಿ ನಗರದಾದ್ಯಂತ ಅದ್ಧೂರಿ ವಿದ್ಯುತ್ ದೀಪಾಲಂಕಾರ ಮಾಡಿದೆ. ನಗರದ 123 ವೃತ್ತಗಳು ಹಾಗೂ 146 ಕಿ.ಮೀ. ಉದ್ದದ ರಸ್ತೆಗಳಲ್ಲಿ ದೀಪಗಳ ಅಲಂಕಾರ ಮಾಡಲಾಗಿದ್ದು, ಪ್ರಮುಖ ಸ್ಥಳಗಳಲ್ಲಿ 80ಕ್ಕೂ ಹೆಚ್ಚು ವಿಭಿನ್ನ ಕಲಾಕೃತಿಗಳನ್ನು ನಿರ್ಮಿಸಲಾಗಿದೆ.

ನಗರದ ಪ್ರಮುಖ ವೃತ್ತಗಳು ಹಾಗೂ ರಸ್ತೆಗಳು ಬೆಳಕಿನ ಚಿತ್ತಾರದಿಂದ ಕಂಗೊಳಿಸುತ್ತಿವೆ. ಕೆ.ಆರ್. ವೃತ್ತ, ಚಾಮರಾಜ ವೃತ್ತ, ಜಯಚಾಮರಾಜ ಒಡೆಯರ್ ವೃತ್ತ, ಗನ್‌ಹೌಸ್‌ ವೃತ್ತ, ರಾಮಸ್ವಾಮಿ ವೃತ್ತ, ದೇವರಾಜ ಅರಸು ರಸ್ತೆ ಜಂಕ್ಷನ್, ಬಾಬು ಜಗಜೀವನ ರಾಂ ವೃತ್ತ, ಜೆ.ಕೆ. ಮೈದಾನದ ಬಳಿಯ ವೃತ್ತ, ಸರ್ಕಾರಿ ಆಯುರ್ವೇದ ಆಸ್ಪತ್ರೆ ವೃತ್ತ, ಹಳೇ ಆರ್‌ಎಂಸಿ ವೃತ್ತ, ಎಲ್‌ಐಸಿ ವೃತ್ತ ಹಾಗೂ ದೊಡ್ಡಕೆರೆ ಮೈದಾನ ದೀಪಾಲಂಕಾರದ ಪ್ರಮುಖ ಆಕರ್ಷಣೆಯಾಗಿವೆ. ಇದಲ್ಲದೆ ದೇವರಾಜ ಅರಸು ರಸ್ತೆ, ಸಯ್ಯಜಿರಾವ್ ರಸ್ತೆ, ಬಿಎನ್ ರಸ್ತೆ, ಅಶೋಕ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಸಾಲುಸಾಲಾಗಿ ಅಲಂಕರಿಸಿರುವ ವಿದ್ಯುತ್ ದೀಪಗಳು ನಗರದ ಸೌಂದರ್ಯವನ್ನು ಇಮ್ಮಡಿಗೊಳಿಸಿವೆ.

ಈ ಬಾರಿಯ ದೀಪಾಲಂಕಾರದಲ್ಲಿ ಧಾರ್ಮಿಕ ನಂಬಿಕೆ, ನಾಡಿನ ಪರಂಪರೆ, ಪೌರಾಣಿಕ ಕಥಾನಕಗಳು ಹಾಗೂ ಸಮಕಾಲೀನ ವಿಷಯಗಳನ್ನು ಸುಂದರವಾಗಿ ಸಂಯೋಜಿಸಲಾಗಿದೆ. ನಾಡಿನ ಅಧಿದೇವತೆ ಚಾಮುಂಡೇಶ್ವರಿ ದೇವಿಯ ಭವ್ಯ ರೂಪ, ನವದುರ್ಗೆಯರ ವಿವಿಧ ಸ್ವರೂಪಗಳು, ರಾಜವಂಶಸ್ಥರ ಚಿತ್ರಣಗಳು ಹಾಗೂ ಪೌರಾಣಿಕ ಸನ್ನಿವೇಶಗಳು ವಿದ್ಯುತ್ ಕಲಾಕೃತಿಗಳ ಮೂಲಕ ಜೀವಂತವಾಗಿವೆ. ಒಂದೊಂದು ವೃತ್ತವೂ ಒಂದೊಂದು ಕಥೆಯನ್ನು ಹೇಳುವಂತೆ ರೂಪುಗೊಂಡಿದೆ. ದೇವಿಯ ವಿವಿಧ ರೂಪಗಳು ಭಕ್ತಿಭಾವ ಮೂಡಿಸಿದರೆ, ರಾಜವಂಶದ ಚಿತ್ರಣಗಳು ಮೈಸೂರಿನ ಐತಿಹಾಸಿಕ ಪರಂಪರೆಯನ್ನು ನೆನಪಿಸುತ್ತವೆ.

ಧಾರ್ಮಿಕ ಹಾಗೂ ಸಾಂಸ್ಕೃತಿಕ ಪರಂಪರೆಗೆ ಮಾತ್ರ ಸೀಮಿತವಾಗದೆ, ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನೂ ಈ ಬಾರಿಯ ದೀಪಾಲಂಕಾರದಲ್ಲಿ ಬಿಂಬಿಸಲಾಗಿದೆ. ಶಕ್ತಿ, ಗೃಹಲಕ್ಷ್ಮೀ, ಯುವನಿಧಿ, ಗೃಹಜ್ಯೋತಿ ಹಾಗೂ ಅನ್ನಭಾಗ್ಯ ಯೋಜನೆಗಳನ್ನು ಪ್ರತಿಬಿಂಬಿಸುವ ವಿದ್ಯುತ್ ಕಲಾಕೃತಿಗಳು ಗಮನ ಸೆಳೆಯುತ್ತಿವೆ. ಪ್ರಜಾಸೇವೆ ಹಾಗೂ ಭಾರತ್ ಜೋಡೋ ಪರಿಕಲ್ಪನೆಗಳನ್ನೂ ಎಲ್‌ಇಡಿ ದೀಪಗಳ ಮೂಲಕ ಕಲಾತ್ಮಕವಾಗಿ ಪ್ರದರ್ಶಿಸಲಾಗಿದೆ.

ಎಲ್‌ಐಸಿ ವೃತ್ತದಲ್ಲಿ ಕೃಷ್ಣನ ರಥದ ವೈಭವ:

ಈ ಬಾರಿಯ ದೀಪಾಲಂಕಾರದಲ್ಲಿ ಎಲ್‌ಐಸಿ ವೃತ್ತದಲ್ಲಿ ನಿರ್ಮಿಸಿರುವ ಭಗವಾನ್ ಶ್ರೀಕೃಷ್ಣ ಹಾಗೂ ಅರ್ಜುನನ ರಥದ ಬೃಹತ್ ಮಾದರಿ ವಿಶೇಷ ಆಕರ್ಷಣೆಯಾಗಿದೆ. ಮಹಾಭಾರತದ ಪ್ರಸಿದ್ಧ ಸನ್ನಿವೇಶವನ್ನು ನೆನಪಿಸುವಂತೆ, ಶ್ರೀಕೃಷ್ಣನು ಅರ್ಜುನನ ರಥವನ್ನು ಮುನ್ನಡೆಸುತ್ತಿರುವ ದೃಶ್ಯವನ್ನು ವಿದ್ಯುತ್ ದೀಪಗಳ ಮೂಲಕ ಮನಮೋಹಕವಾಗಿ ರೂಪಿಸಲಾಗಿದೆ.

ದಸರಾ ಜಂಬೂಸವಾರಿ, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ವಿವಿಧ ಉತ್ಸವಗಳ ಸಂಭ್ರಮ ಮುಗಿದಿದ್ದರೂ, ವಿದ್ಯುತ್ ದೀಪಾಲಂಕಾರವು ಮೈಸೂರಿನ ಹಬ್ಬದ ವಾತಾವರಣವನ್ನು ಇನ್ನೂ ಜೀವಂತವಾಗಿರಿಸಿದೆ. ಹಬ್ಬದ ದಿನಗಳಲ್ಲಿ ಜನಸಂದಣಿಯಿಂದಾಗಿ ದೀಪಾಲಂಕಾರವನ್ನು ನೆಮ್ಮದಿಯಿಂದ ವೀಕ್ಷಿಸಲು ಸಾಧ್ಯವಾಗದವರಿಗೆ ಈಗ ಉತ್ತಮ ಅವಕಾಶ ದೊರೆತ್ತಿದೆ.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಇಂಧನ ಸಚಿಚ ಕೆ.ಜೆ.ಜಾರ್ಜ್ ಅವರ ಮಾರ್ಗದರ್ಶನದಲ್ಲಿ ದಸರಾ ವಿದ್ಯುತ್ ದೀಪಾಲಂಕಾರ ಮತ್ತು ಡ್ರೋನ್ ಶೋ ಅತ್ಯಂತ ಯಶಸ್ವಿಯಾಗಿ ಜನಮೆಚ್ಚುಗೆ ಗಳಿಸಿತು. ದಸರಾ ವಿದ್ಯುತ್ ದೀಪಾಲಂಕಾರ ಅ.31 ರವರೆಗೆ ಇರಲಿದ್ದು, ಪ್ರವಾಸಿಗರು ಹಾಗೂ ಸಾರ್ವಜನಿಕರು ಅಗತ್ಯ ಸುರಕ್ಷತಾ ನಿಯಮಗಳನ್ನು ಪಾಲಿಸಿ, ಆಕರ್ಷಕ ದೀಪಾಲಂಕಾರದ ಸೌಂದರ್ಯ ಕಣ್ತುಂಬಿಕೊಳ್ಳಿ.

ಎಂ.ಎಸ್. ಅರ್ಚನಾ, ವ್ಯವಸ್ಥಾಪಕ ನಿರ್ದೇಶಕರು, ಸೆಸ್ಕ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net