

ವಿಜಯವಾಣಿ ಸುದ್ದಿಜಾಲ ಪುತ್ತೂರು ಗ್ರಾಮಾಂತರ ವಿದ್ಯಾರ್ಥಿಗಳ ಸಂಖ್ಯೆ ತೀರಾ ಇಳಿಮುಖಗೊಂಡಿದ್ದರಿಂದ ಇನ್ನೇನು ಇನ್ನೇನು ಮುಚ್ಚಿ ಬಿಡುವುದೆಂದು ತೀರ್ಮಾನಗೊಂಡಿದ್ದ ಶತಮಾನೋತ್ಸವ ಆಚರಿಸಿದ್ದ ಕಾವು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಗಣನೀಯ ಏರಿದ್ದು, ಹಠಾತ್ ಬದಲಾವಣೆಯಿಂದ ಶಾಲೆಯು ಜಿಲ್ಲೆಗೆ ಮಾದರಿಯಾಗಿದೆ. ದ.ಕ ಜಿಲ್ಲೆಯಲ್ಲಿ ಎರಡು ಪ್ರೌಢಶಾಲೆ ಮಂಜೂರಾಗಿದ್ದು, ಪುತ್ತೂರು ಹಾಗೂ ಬೆಳ್ತಂಗಡಿ ತಾಲ್ಲೂಕಿನ ತಲಾ ಒಂದು ಶಾಲೆ ಆಯ್ಕೆಯಾಗಿದೆ. ರಾಜ್ಯದಲ್ಲಿ ಒಟ್ಟು 100 ಪ್ರಾಥಮಿಕ ಶಾಲೆಗಳಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ 8ನೇ ತರಗತಿ ಆರಂಭಗೊಳ್ಳಲಿದ್ದು, ಈ ಪಟ್ಟಿಯಲ್ಲಿ ಕಾವು ಶಾಲೆಯೂ ಆಯ್ಕೆಯಾಗಿದೆ. 2005ರಲ್ಲಿ ಮಕ್ಕಳ ದಾಖಲಾತಿ ಸಂಖ್ಯೆ ತೀರಾ ಕುಸಿದಿದ್ದರಿಂದ ಹಾಗೂ ಗ್ರಾಮೀಣ ಭಾಗದಲ್ಲಿ ಆರಂಭಗೊಂಡ ಖಾಸಗಿ ಶಾಲೆಗಳ ಭರಾಟೆಯಿಂದ ಕಾವು ಶಾಲೆಗೆ ಕಾರ್ಯನಿರ್ವಹಣೆಗೆ ಭಾರಿ ಹೊಡೆತ ಬಿದ್ದಿತ್ತು. ಈ ಸಂದರ್ಭ ರಾಜಕೀಯ ಮುಖಂಡ ಹಾಗೂ ಸಾಮಾಜಿಕ ಧುರೀಣ ಕಾವು ಹೇಮನಾಥ ಶೆಟ್ಟಿ ಶಾಲೆಯ ಉಳಿವಿಗೆ ಪಣತೊಟ್ಟಿದ್ದು, ಶಾಲೆಯನ್ನೇ ದತ್ತು ಪಡೆದು ಪುನಶ್ಚೇತನ ಕಾರ್ಯಕ್ಕೆ ಮುಂದಾಗಿದ್ದರು. ಸರ್ಕಾರದ ಅನುದಾನಗಳಿಂದ ಕಾವು ಶಾಲೆಗೆ ಸುಸಜ್ಜಿತ ಮೂಲಸೌಕರ್ಯಗಳನ್ನೂ ಕಲ್ಪಿಸಿಕೊಟ್ಟಿದ್ದಾರೆ. ಶಾಲೆಯ ಕೊಠಡಿಗಳ ಕೊರತೆ ನಿವಾರಿಸಲಾಗಿದೆ. ವಿದ್ಯಾರ್ಥಿಗಳನ್ನು ಕರೆತರಲು ಬಸ್ ವ್ಯವಸ್ಥೆ ಕೂಡ ಮಾಡಿದ್ದು, ಬಸ್ ವ್ಯವಸ್ಥೆ ಹೊಂದಿರುವ ಜಿಲ್ಲೆಯ ಮೊದಲ ಸರ್ಕಾರಿ ಶಾಲೆ ಇದಾಗಿದೆ. ಪ್ರಥಮ ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆ ರಾಜ್ಯ ಸರ್ಕಾರ ಅನುಮತಿ ನೀಡದಿದ್ದರೂ ಸ್ವತಃ ಹೇಮನಾಥ ಶೆಟ್ಟಿ ಅವರೇ ಮುತುವರ್ಜಿ ವಹಿಸಿ ಕಾವು ಶಾಲೆಯಲ್ಲಿ ಆಂಗ್ಲಮಾಧ್ಯಮದ ಎಲ್ಕೆಜಿ, ಯುಕೆಜಿ ತರಗತಿ ಆರಂಭಿಸಿದ್ದು, ಪುತ್ತೂರು ತಾಲೂಕಿನಲ್ಲೇ ಇದು ಪ್ರಥಮ. ಬಳಿಕ ಶಾಲಾ ದಾಖಲಾತಿಯಲ್ಲಿ ಗಣನೀಯ ಏರಿಕೆಯಾಗಿದ್ದು, 10 ವರ್ಷಗಳ ಭಾರಿ ಪ್ರಯತ್ನದ ಫಲವಾಗಿ 450 ವಿದ್ಯಾರ್ಥಿಗಳು ಪ್ರಸಕ್ತ ವರ್ಷ ದಾಖಲಾಗಿದ್ದಾರೆ.
ಕೊಟ್ಟ ಮಾತಿನಂತೆ ಕಾವು ಸರ್ಕಾರಿ ಶಾಲೆಗೆ 8ನೇ ತರಗತಿ ಮಂಜೂರು ಮಾಡಿದ್ದೇನೆ. ಕಾವು ಶಾಲೆಯನ್ನು ಕಾವು ಹೇಮನಾಥ ಶೆಟ್ಟಿ ಹತ್ತು ವರ್ಷಗಳ ಹಿಂದೆ ದತ್ತುಪಡೆದು ಪಾಲಕರು ಹಾಗೂ ಯುವಕರ ತಂಡ ಕಟ್ಟಿ ಖಾಸಗಿ ಶಾಲೆಯ ಮಾದರಿಯಲ್ಲೇ ಅಭಿವದ್ಧಿಪಡಿಸಿದ್ದಾರೆ. ಒಂದೇ ಸೂರಿನಡಿ ಕನ್ನಡ ಹಾಗೂ ಆಂಗ್ಲ ಮಾಧ್ಯಮ ಶಿಕ್ಷಣ ಕಲ್ಪಿಸಲಾಗಿದೆ. ಉತ್ತಮ ಶಿಕ್ಷಕರ ತಂಡವೂ ಈ ಶಾಲೆಯಲ್ಲಿದ್ದು, ಪಾಲಕರೂ ದೊಡ್ಡ ಮಟ್ಟದಲ್ಲಿ ನೆರವಾಗಿದ್ದಾರೆ. ಅಶೋಕ್ಕುಮಾರ್ ರೈ, ಶಾಸಕ ನಾನು ಶಾಲೆ ದತ್ತು ಪಡೆದ ಬಳಿಕ ಪಾಲಕರು, ಹಳೇ ವಿದ್ಯಾರ್ಥಿಗಳು, ಸ್ಥಳೀಯ ಸಂಘ ಸಂಸ್ಥೆಗಳು, ದಾನಿಗಳ ಸಹಕಾರದಿಂದ ಅಭಿವೃದ್ಧಿ ಕೆಲಸಗಳು ನಡೆದಿವೆ. ಶತಮಾನ ಕಂಡ ಈ ಶಾಲೆಗೆ ಎಂಟನೇ ತರಗತಿ ಮಂಜೂರುಗೊಂಡಿರುವುದು ಗ್ರಾಮೀಣ ಭಾಗದ ಬಡವರ ಮಕ್ಕಳ ಪಾಲಿಗೆ ಸಹಕಾರಿ. ಶಾಸಕ, ಶಿಕ್ಷಣ ಇಲಾಖೆ ಸಹಕಾರ ಅವಿಸ್ಮರಣೀಯ. ಕಾವು ಹೇಮನಾಥ ಶೆಟ್ಟಿ ಸರ್ಕಾರಿ ಶಾಲೆಗೆ ಬಸ್ ವ್ಯವಸ್ಥೆ ಜಿಲ್ಲೆಯಲ್ಲೇ ಮೊದಲು ಸುಸಜ್ಜಿತ ಸೌಕರ್ಯಗಳ ಅಳವಡಿಕೆ ಸ್ಥಳೀಯ ಧುರೀಣ, ಪಾಲಕರ ಒಗ್ಗಟ್ಟಿನ ಶ್ರಮ