ಟಿಎಪಿಸಿಎಂಎಸ್‌ಗೆ ಕಾಂಗ್ರೆಸ್‌ನ 8, ಎನ್‌ಡಿಎ 4 ಅಭ್ಯರ್ಥಿಗಳು ಆಯ್ಕೆ

ಶೇ.92.73 ಮತದಾನ
ಟಿಎಪಿಸಿಎಂಎಸ್ ಚುನಾವಣೆಯಲ್ಲಿ ಅಧಿಕಾರಿಗಳು ಕರ್ತವ್ಯ ಲೋಪ ಮಾಡಿದ್ದಾರೆಂದು ಆರೋಪಿಸಿ ಎನ್‌ಡಿಎ ಮೈತ್ರಿ ಕೂಟದ ನಾಯಕರು ಪ್ರತಿಭಟನೆ ಮಾಡಿಸಿದರು. ಮಾಜಿ ಸಚಿವ ಡಿ.ಸಿ.ತಮ್ಮಣ್ಣ, ಮನ್‌ಮುಲ್ ನಿರ್ದೇಶಕ ಎಸ್.ಪಿ.ಸ್ವಾಮಿ ಸೇರಿದಂತೆ ಇತರರು ಇದ್ದರು.
ಟಿಎಪಿಸಿಎಂಎಸ್ ಚುನಾವಣೆಯಲ್ಲಿ ಅಧಿಕಾರಿಗಳು ಕರ್ತವ್ಯ ಲೋಪ ಮಾಡಿದ್ದಾರೆಂದು ಆರೋಪಿಸಿ ಎನ್‌ಡಿಎ ಮೈತ್ರಿ ಕೂಟದ ನಾಯಕರು ಪ್ರತಿಭಟನೆ ಮಾಡಿಸಿದರು. ಮಾಜಿ ಸಚಿವ ಡಿ.ಸಿ.ತಮ್ಮಣ್ಣ, ಮನ್‌ಮುಲ್ ನಿರ್ದೇಶಕ ಎಸ್.ಪಿ.ಸ್ವಾಮಿ ಸೇರಿದಂತೆ ಇತರರು ಇದ್ದರು.
Published on: 

ಮದ್ದೂರು: ಟಿಎಪಿಸಿಎಂಎಸ್‌ಗೆ ಭಾನುವಾರ ನಡೆದ ನಿರ್ದೇಶಕ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ 8 ಅಭ್ಯರ್ಥಿಗಳು ಹಾಗೂ ಎನ್‌ಡಿಎ ಮೈತ್ರಿ ಕೂಟದ ಬೆಂಬಲಿತ 4 ಅಭ್ಯರ್ಥಿಗಳು ನೂತನ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.

ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಬೆಳಗ್ಗೆಯಿಂದ ಸಂಜೆಯವರೆಗೆ ನಡೆದ ಮತದಾನದಲ್ಲಿ ಒಟ್ಟು ಶೇ.92.73 ಮತದಾನ ನಡೆದಿದ್ದು ಬಳಿಕ ರಾತ್ರಿ 9.30 ರವರೆಗೆ ಮತ ಎಣಿಕೆ ಕಾರ್ಯ ನಡೆದಿತ್ತು.

ಅಂತಿಮ ಫಲಿತಾಂಶದಂತೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾದ ರಾಘವ್, ಅಮೂಲ್ಯಾ ಜಗದೀಶ್, ಮರಿದೇವರು, ಎನ್.ಡಿ.ಶಿವಚರಣ್, ಪ್ರಕಾಶ್, ಲಕ್ಷ್ಮೀ, ಕೊಪ್ಪ ಕರಿಯಪ್ಪ, ಶಂಕರಲಿಂಗೇಗೌಡ (ಒಬ್ಬರು ಮಾತ್ರ ಅವಿರೋಧ) ಸೇರಿದಂತೆ ಕಾಂಗ್ರೆಸ್ ಬೆಂಬಲಿತ 8 ಹಾಗೂ ಎನ್‌ಡಿಐ ಮೈತ್ರಿಕೂಟದ ಅಭ್ಯರ್ಥಿಗಳಾದ ಸಿ.ಡಿ.ಸಂತೋಷ್, ಬಸವಚಾರಿ, ಚಂದ್ರನಾಯಕ, ಪಿ.ಕೆ.ಕಾವ್ಯಾ ಅವರು ಅಂತಿಮವಾಗಿ ಜಯಶೀಲರಾಗಿದ್ದಾರೆಂದು ಚುನಾವಣಾಧಿಕಾರಿ ತಹಸೀಲ್ದಾರ್ ಶಿವಕುಮಾರ್ ಬಿರಾದರ್ ಘೋಷಣೆ ಮಾಡಿದರು.

ಕಾಂಗ್ರೆಸ್ ಅಭ್ಯರ್ಥಿಗೆ ಡ್ರಾನಲ್ಲಿ ಒಲಿದ ಅದೃಷ್ಟ:

ಮತ ಎಣಿಕೆ ಕಾರ್ಯದಲ್ಲಿ ವಿಶೇಷ ಬೆಳವಣಿಯೊಂದು ನಡೆದು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾದ ಮರಿದೇವರು ಹಾಗೂ ಎನ್‌ಡಿಎ ಮೈತ್ರಿ ಕೂಟದ ಅಭ್ಯರ್ಥಿಯಾದ ವೈ.ಕೆ.ದ್ಯಾವಯ್ಯ ಅವರಿಗೆ ಕ್ರಮವಾಗಿ 870 ಮತಗಳು ಇಬ್ಬರಿಗೂ ಚಲಾವಣೆಗೊಂಡಿದ್ದರಿಂದ ಮತ ಎಣಿಕೆ ಕಾರ್ಯದ ಕೊನೆಯಲ್ಲಿ ನಡೆಸಲಾದ ಡ್ರಾನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮರಿದೇವರು ಜಯಗಳಿಸುವ ಮೂಲಕ ಅದೃಷ್ಟದ ನಗೆ ಬೀರಿದರು.

ಚುನಾವಣೆ ತೀವ್ರ ಪೈಪೋಟಿ ಹೊಂದಿದ್ದ ಹಿನ್ನೆಲೆಯಲ್ಲಿ ಎಸ್.ಪಿ.ಶೋಭಾರಾಣಿ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

ಫಲಿತಾಂಶ ಘೋಷಣೆ ಮಾಡದಂತೆ ಪ್ರತಿಭಟನೆ

ಮತ ಎಣಿಕೆ ಕಾರ್ಯ ಭಾನುವಾರ ರಾತ್ರಿ ಸುಮಾರು 9.30 ರ ವೇಳೆಗೆ ಅಂತಿಮಗೊಳ್ಳುತ್ತಿದ್ದಂತೆ ಫಲಿತಾಂಶಗಳನ್ನು ಚುನಾವಣಾಧಿಕಾರಿಗಳಾದ ಶಿವಕುಮಾರ್ ಬಿರಾದಾರ್ ಘೋಷಣೆ ಮಾಡಲು ಮುಂದಾದರು. ಈ ವೇಳೆ ಜೆಡಿಎಸ್ ಹಾಗೂ ಬಿಜೆಪಿ ಕಾರ್ಯಕರ್ತರು ಮಾಜಿ ಸಚಿವ ಡಿ.ಸಿ.ತಮ್ಮಣ್ಣ, ಮನ್‌ಮುಲ್ ನಿರ್ದೇಶಕ ಎಸ್.ಪಿ.ಸ್ವಾಮಿ ಅವರ ನೇತೃತ್ವದಲ್ಲಿ ಚುನಾವಣಾ ಕೇಂದ್ರದ ಮುಂದಿನ ಪೇಟೆ ಬೀದಿಯಲ್ಲಿ ಮಧ್ಯರಾತ್ರಿ 12 ಗಂಟೆಯವರೆಗೆ ನೂರಾರು ಸಂಖ್ಯೆಯಲ್ಲಿ ಜಮಾಯಿಸಿ ಹೈಕೋರ್ಟ್ ಆದೇಶ ಬರುವವರೆಗೂ ಫಲಿತಾಂಶವನ್ನು ಘೋಷಣೆ ಮಾಡದಂತೆ ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿ ಪ್ರತಿಭಟನೆ ನಡೆಸಿದರು.

ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಮಾತನಾಡಿ, ಭಾನುವಾರ ನಡೆದ ಟಿಎಪಿಸಿಎಂಎಸ್ ಚುನಾವಣೆಯಲ್ಲಿ ಅಧಿಕಾರಿಗಳು ಶಾಸಕರ ಕೈಗೊಂಬೆಗಳಂತೆ ವರ್ತಿಸಿದ್ದಾರೆ. ಚಲಾವಣೆಗೊಂಡಿರುವ 512 ಹೊಸ ಷೇರು ಮತದಾರರ ಎಣಿಕೆ ಕಾರ್ಯವನ್ನು ಇಂದು ಮಾಡಿಲ್ಲ. ಆದ್ದರಿಂದ ಫಲಿತಾಂಶನ್ನು ಈಗಲೇ ಘೋಷಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದ ಅವರು, ಹೈಕೋರ್ಟ್ ಆದೇಶ ಬಂದ ನಂತರ ಅದರ ಎಣಿಕೆ ಆದ ಮೇಲೆ ಒಟ್ಟಿಗೆ ಫಲಿತಾಂಶವನ್ನು ಪ್ರಕಟಿಸಬೇಕೆಂದರು.

ಮನ್‌ಮುಲ್ ನಿರ್ದೇಶಕ ಎಸ್.ಪಿ.ಸ್ವಾಮಿ ಮಾತನಾಡಿ, ಚುನಾವಣೆಯಲ್ಲಿ ಅಧಿಕಾರಿಗಳು ಸಾಕಷ್ಟು ಲೋಪಗಳನ್ನು ಮಾಡಿದ್ದು ಇದರ ವಿರುದ್ಧ ಕಾನೂನು ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಮತ ಎಣಿಕೆ ಕೇಂದ್ರದ ಮುಂದೆ ಎನ್‌ಡಿಎ ಮೈತ್ರಿಕೂಟದ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದರೂ ಬಿಗಿ ಪೊಲೀಸ್ ಬಂದೋಬಸ್ತ್ ನಡುವೆ ಬ್ಯಾರಿಕೇಡ್ ಹಾಕಿ ಅಂತಿಮ ಫಲಿತಾಂಶವನ್ನು ಚುನಾವಣಾಧಿಕಾರಿಗಳು ಪ್ರತಿರೋಧದ ನಡುವೆ ಘೋಷಿಸಿದರು.

ನಂತರ ಈ ಬಗ್ಗೆ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಚುನಾವಣಾಧಿಕಾರಿ ಶಿವಕುಮಾರ್ ಬಿರಾದರ್, ಹೈಕೋರ್ಟ್ ಆದೇಶದಂತೆ ಚಲಾವಣೆಗೊಂಡಿರುವ 512 ಹೊಸ ಷೇರುದಾರರ ಮತಗಳನ್ನು ಎಣಿಕೆ ನಡೆಸದೆ ಜಿಲ್ಲಾಧಿಕಾರಿ ಕಚೇರಿಯ ಖಜಾನೆಯಲ್ಲಿ ಡಿಸಿ ಅವರ ಆದೇಶದಂತೆ ಇರಿಸಲಾಗಿದ್ದು, ಚುನಾವಣಾ ಪ್ರಕ್ರಿಯೆಗಳನ್ನು ಕಾನೂನಿನ ನಿಯಮಾನುಸಾರವೇ ನಡೆಸಲಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net