

ಮುನಿರಾಬಾದ್: ಹುಲಿಗಿಯ ಪ್ರಸಿದ್ಧ ಸುಕ್ಷೇತ್ರ ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನದಲ್ಲಿ ದಸರಾ ಮಹೋತ್ಸವದ ಸಂಭ್ರಮ ಕಳೆಗಟ್ಟಿದ್ದು, ಹಬ್ಬದ ವಾತಾವರಣ ಮನೆಮಾಡಿದೆ. ದೇವಸ್ಥಾನದ ಆವರಣ ವರ್ಣರಂಜಿತ ವಿದ್ಯುತ್ ದೀಪಾಲಂಕಾರಗಳಿಂದ ಕಂಗೊಳಿಸುತ್ತಿದೆ.
ದಸರಾ ಪ್ರಯುಕ್ತ ನವರಾತ್ರಿಯ ಒಂಬತ್ತೂ ದಿನಗಳ ಕಾಲ ಜಗನ್ಮಾತೆಗೆ ಪ್ರತಿದಿನ ಬೆಳಗಿನ ಜಾವ ಸುಪ್ರಭಾತ ಸೇವೆ, ವಿಶೇಷ ಪೂಜೆ ಹಾಗೂ ಮಹಾನೈವೇದ್ಯ ಹಾಗೂ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲು ದೇವಾಲಯದ ಆಡಳಿತ ಮಂಡಳಿ ಸಕಲ ಸಿದ್ಧತೆ ಕೈಗೊಂಡಿದೆ. ನವರಾತ್ರಿಯ ಮೊದಲ ದಿನ ಅ.11ರಂದು ದೇವಸ್ಥಾನದಲ್ಲಿ ಶಾಸ್ತ್ರೋಕ್ತವಾಗಿ ಘಟಸ್ಥಾಪನೆ ನೆರವೇರಲಿದೆ. ಉತ್ಸವದ ಪ್ರತಿ ದಿನವೂ ಶ್ರೀ ಹುಲಿಗೆಮ್ಮ ದೇವಿಗೆ ವಿವಿಧ ಅವತಾರಗಳಲ್ಲಿ ವಿಶೇಷ ಅಲಂಕಾರ, ಮಹಾಮಂಗಳಾರತಿ ಸೇವೆ ಹಾಗೂ ಚಂಡಿಕಾ ಯಾಗಗಳು ಜರುಗಲಿದ್ದು, ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡಿ ದರ್ಶನ ಪಡೆಯಲಿದ್ದಾರೆ.
ದಸರಾ ಮಹೋತ್ಸವ ನಿಮಿತ್ತ ಭರತನಾಟ್ಯ, ಜಾನಪದ ನೃತ್ಯ, ಭಜನೆ ಹಾಗೂ ಸಂಗೀತ ಕಾರ್ಯಕ್ರಮಗಳು ಜರುಗಲಿವೆ. ಜತೆಗೆ ಮಹಿಳೆಯರಿಗಾಗಿ ರಂಗೋಲಿ ಸ್ಪರ್ಧೆ, ಜಿಲ್ಲಾಮಟ್ಟದ ಬಾಲಕ-ಬಾಲಕಿಯರ ಕಬಡ್ಡಿ ಪಂದ್ಯಾವಳಿ, ರಾಜ್ಯಮಟ್ಟದ ಪುರುಷ ಮತ್ತು ಮಹಿಳೆಯರ ಮುಕ್ತಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿ ಹಾಗೂ ಕ್ರಿಕೆಟ್ ಪಂದ್ಯಾವಳಿಗಳನ್ನು ಆಯೋಜಿಸಲಾಗಿದೆ.