ಕುಷ್ಟಗಿ-ಬೆಂಗಳೂರು ರೈಲು ಓಡಿಸಿ

ಕೇಂದ್ರ ಸಚಿವಗೆ ಸಂಸದ ರಾಜಶೇಖರ ಹಿಟ್ನಾಳ ಪತ್ರ
ರಾಜಶೇಖರ ಹಿಟ್ನಾಳ
ರಾಜಶೇಖರ ಹಿಟ್ನಾಳ
Published on: 

ಕುಷ್ಟಗಿ: ಕುಷ್ಟಗಿ ಕೇಂದ್ರ ಸ್ಥಳದಿಂದ ಬೆಂಗಳೂರಿಗೆ ರೈಲು ಸಂಚಾರ ಆರಂಭಿಸಬೇಕೆಂದು ಸಂಸದ ರಾಜಶೇಖರ ಹಿಟ್ನಾಳ ಅವರು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.

ಕೊಪ್ಪಳ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ಕುಷ್ಟಗಿ ಕೇಂದ್ರಕ್ಕೆ ಹೊಸದಾಗಿ ರೈಲು ಮಾರ್ಗ ನಿರ್ಮಿಸಿ ನಿತ್ಯ ಕುಷ್ಟಗಿ-ಹುಬ್ಬಳ್ಳಿ ರೈಲು ಸಂಪರ್ಕ ಕಲ್ಪಿಸಿರುವುದು ಸಂತೋಷದ ವಿಚಾರ. ಕುಷ್ಟಗಿ ಹಿಂದುಳಿದ ಪ್ರದೇಶವಾಗಿದ್ದು, 371ಜೆ ವ್ಯಾಪ್ತಿಗೆ ಒಳಪಡುತ್ತದೆ. ಗ್ರಾಮೀಣ ಪರಿಸರದಿಂದ ಕೂಡಿದ್ದು ನಿತ್ಯ ಸಾವಿರಾರು ಜನ ಕೆಲಸಕ್ಕಾಗಿ ಸುತ್ತಲಿನ ನಗರ ಪ್ರದೇಶಗಳಿಗೆ ಸಂಚರಿಸುತ್ತಾರೆ.

ಒಂದು ವರದಿಯಂತೆ ಪ್ರತಿ ನಿತ್ಯ ಬೆಂಗಳೂರಿಗೆ ಸರಾಸರಿ 650 ರಿಂದ 700 ಜನರು ಪ್ರಯಾಣಿಸುತ್ತಿದ್ದು, ಬಡತನ ಮಧ್ಯೆ ಸಾರಿಗೆ ಮತ್ತು ಖಾಸಗಿ ಬಸ್ ಮೂಲಕ ಓಡಾಡುವುದು ದುಬಾರಿಯಾಗಿದೆ. ಆದ್ದರಿಂದ ಸಾಮಾನ್ಯ ಜನರ ಅನುಕೂಲಕ್ಕೆ ಹಾಗೂ ಅವರ ಬದುಕಿನ ಸ್ಥಿತಿ ಸುಧಾರಣೆಗೆ ಕುಷ್ಟಗಿಯಿಂದ ಬೆಂಗಳೂರು ಮಾರ್ಗವಾಗಿ ಮೈಸೂರಿಗೆ ನಿತ್ಯ ರೈಲು ಸಂಚಾರದ ಸೌಲಭ್ಯ ಕಲ್ಪಿಸಿಕೊಡುವುದು ಅವಶ್ಯವಾಗಿದೆ.

ಇದು ಸದ್ಯಕ್ಕೆ ಕಷ್ಟಸಾಧ್ಯವೆನಿಸಿದಲ್ಲಿ ಹುಬ್ಬಳ್ಳಿ, ಸೊಲ್ಲಾಪುರ, ವಿಜಯಪುರ, ಸಿಂಧನೂರ ಕೇಂದ್ರಗಳಿಂದ ಬೆಂಗಳೂರಿಗೆ ಸಂಚರಿಸುತ್ತಿರುವ ಯಾವುದಾದರೂ ರೈಲಿಗೆ ಲಿಂಕ್ ಕಲ್ಪಿಸಿ ಅನುಕೂಲ ಮಾಡಿಕೊಡಬೇಕೇಂದು ಸಂಸದ ಹಿಟ್ನಾಳ್ ಪತ್ರದಲ್ಲಿ ಮನವಿ ಮಾಡಿದ್ದಾರೆ. ಸ್ಥಳೀಯ ರೈಲ್ವೆ ಹೋರಾಟ ಸಮಿತಿಯ ಮನವಿ ಮತ್ತು ಒತ್ತಡದ ಹಿನ್ನೆಲೆಯಲ್ಲಿ ಅ.22ರಂದು ರಾಜ್ಯ ರೈಲ್ವೆ ಸಚಿವ ವಿ.ಸೋಮಣ್ಣ ಹಾಗೂ ಹುಬ್ಬಳ್ಳಿಯ ರೈಲ್ವೆ ವಿಭಾಗೀಯ ವ್ಯವಸ್ಥಾಪಕರಿಗೂ ಪತ್ರ ಬರೆದಿದ್ದಾರೆ.

ಕೇಂದ್ರ ಸಚಿವರಿಗೆ ಸಂಸದ ರಾಜಶೇಖರ ಹಿಟ್ನಾಳ ಬರೆದ ಪತ್ರ.
ಕೇಂದ್ರ ಸಚಿವರಿಗೆ ಸಂಸದ ರಾಜಶೇಖರ ಹಿಟ್ನಾಳ ಬರೆದ ಪತ್ರ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net