ಎಸ್ಪಿ ಸಾಹಿಲ್ ಬಾಗ್ಲಾ ಹೇಳಿಕೆ

ಎಸ್ಪಿ ಸಾಹಿಲ್ ಬಾಗ್ಲಾ ಹೇಳಿಕೆ ಶ್ರೀ ವಿದ್ಯಾನಿಕೇತನ ಸೈನಿಕ್ ಕೋಚಿಂಗ್ ಅಕಾಡೆಮಿ ಅಭ್ಯರ್ಥಿಗಳಿಗೆ ಕಿಟ್ ವಿತರಣೆ
ಗಂಗಾವತಿ ತಾಲೂಕು ವಡ್ಡರಹಟ್ಟಿಯ ಶ್ರೀ ವಿದ್ಯಾನಿಕೇತನ ಇಂಟರ್ ನ್ಯಾಷನಲ್ ಸ್ಕೂಲ್‌ನಲ್ಲಿ ಶನಿವಾರ ಶ್ರೀ ವಿದ್ಯಾನಿಕೇತನ ಸಮೂಹ ಶಿಕ್ಷಣ ಸಂಸ್ಥೆಯ ಸೈನಿಕ್ ಕೋಚಿಂಗ್ ಅಕಾಡೆಮಿ ತರಬೇತಿಗೆ ಆಯ್ಕೆಯಾದವರಿಗೆ ಕಿಟ್ ವಿತರಿಸಲಾಯಿತು. ಎಸ್ಪಿ ಸಾಹಿಲ್ ಬಾಗ್ಲಾ, ಸಮೂಹ ಶಿಕ್ಷಣ ಸಂಸ್ಥೆ ಅಧ್ಯಕ್ಷ ನೆಕ್ಕಂಟಿ ಸೂರಿಬಾಬು, ಡಿವೈಎಸ್ಪಿ ಜೆ.ಎಸ್.ನ್ಯಾಮಗೌಡರ್ ಇತರರಿದ್ದರು.
ಗಂಗಾವತಿ ತಾಲೂಕು ವಡ್ಡರಹಟ್ಟಿಯ ಶ್ರೀ ವಿದ್ಯಾನಿಕೇತನ ಇಂಟರ್ ನ್ಯಾಷನಲ್ ಸ್ಕೂಲ್‌ನಲ್ಲಿ ಶನಿವಾರ ಶ್ರೀ ವಿದ್ಯಾನಿಕೇತನ ಸಮೂಹ ಶಿಕ್ಷಣ ಸಂಸ್ಥೆಯ ಸೈನಿಕ್ ಕೋಚಿಂಗ್ ಅಕಾಡೆಮಿ ತರಬೇತಿಗೆ ಆಯ್ಕೆಯಾದವರಿಗೆ ಕಿಟ್ ವಿತರಿಸಲಾಯಿತು. ಎಸ್ಪಿ ಸಾಹಿಲ್ ಬಾಗ್ಲಾ, ಸಮೂಹ ಶಿಕ್ಷಣ ಸಂಸ್ಥೆ ಅಧ್ಯಕ್ಷ ನೆಕ್ಕಂಟಿ ಸೂರಿಬಾಬು, ಡಿವೈಎಸ್ಪಿ ಜೆ.ಎಸ್.ನ್ಯಾಮಗೌಡರ್ ಇತರರಿದ್ದರು.
Published on: 

ಗಂಗಾವತಿ: ನಿಗದಿತ ಗುರಿ ಸಾಧನೆಗೆ ದೃಢಸಂಕಲ್ಪ ಮತ್ತು ಪರಿಶ್ರಮ ಮುಖ್ಯ ಎಂದು ಎಸ್ಪಿ ಸಾಹಿಲ್ ಬಾಗ್ಲಾ ಹೇಳಿದರು.

ವಡ್ಡರಹಟ್ಟಿಯ ಶ್ರೀ ವಿದ್ಯಾನಿಕೇತನ ಇಂಟರ್ ನ್ಯಾಷನಲ್ ಸ್ಕೂಲ್‌ನಲ್ಲಿ ಶ್ರೀ ವಿದ್ಯಾನಿಕೇತನ ಸಮೂಹ ಶಿಕ್ಷಣ ಸಂಸ್ಥೆಯ ಸೈನಿಕ ಕೋಚಿಂಗ್ ಅಕಾಡೆಮಿ ತರಬೇತಿಗೆ ಆಯ್ಕೆಯಾದ ಯುವಕರಿಗೆ ತರಬೇತಿ ಸಲಕರಣೆಗಳ ಕಿಟ್ ಶನಿವಾರ ಉಚಿತವಾಗಿ ವಿತರಿಸಿ ಮಾತನಾಡಿದರು.

ಯುವಕರಿಗೆ ಅಗ್ನಿವೀರ ತರಬೇತಿ ನೀಡುತ್ತಿರುವ ವಿದ್ಯಾನಿಕೇತನ ಸಂಸ್ಥೆಯ ಸಾಮಾಜಿಕ ಕಾಳಜಿ ಶ್ಲಾಘನೀಯ. ಯುವಕರಲ್ಲಿ ಶಿಸ್ತು, ದೇಶಭಕ್ತಿ ಹಾಗೂ ಸಾಧನೆಯ ಮನೋಭಾವ ಬೆಳೆಸುವ ಅಗತ್ಯವಿದೆ. ತರಬೇತಿ ಸಂದರ್ಭದಲ್ಲಿ ಸಮಯಪಾಲನೆಗೆ ಆದ್ಯತೆ ನೀಡಿ, ನಿಷ್ಠೆ ಹಾಗೂ ಶ್ರದ್ಧೆಯಿಂದ ಅಭ್ಯಾಸ ಮಾಡಬೇಕು ಎಂದರು.

ನರ್ಸರಿಯಿಂದ ನೌಕರಿವರೆಗೆ ಪರಿಕಲ್ಪನೆಯಡಿ ಮಕ್ಕಳ ಶಿಕ್ಷಣ ಹಾಗೂ ಯುವಕರ ಉದ್ಯೋಗಾವಕಾಶಗಳಿಗೆ ಒತ್ತು ನೀಡುತ್ತಿರುವುದು ಉತ್ತಮ ಕಾರ್ಯ. ಕೇಂದ್ರ ಸರ್ಕಾರದ ಅಗ್ನಿಪಥ್ ಯೋಜನೆಯಡಿ ಪ್ರತಿ ವರ್ಷ 200 ಅಗ್ನಿವೀರರನ್ನು ರೂಪಿಸುವ ಗುರಿಯೊಂದಿಗೆ ವಿದ್ಯಾರ್ಥಿಗಳಿಗೆ ಉಚಿತ ತರಬೇತಿ, ಪೌಷ್ಟಿಕ ಆಹಾರ ಹಾಗೂ ಅಗತ್ಯ ಸಲಕರಣೆಗಳ ಕಿಟ್ ಒದಗಿಸುತ್ತಿರುವುದು ಮಾದರಿಯಾಗಿದೆ ಎಂದು ತಿಳಿಸಿದರು.

ಶಿಕ್ಷಣ ಸಂಸ್ಥೆ ಅಧ್ಯಕ್ಷ ನೆಕ್ಕಂಟಿ ಸೂರಿಬಾಬು ಮಾತನಾಡಿ, 20 ವರ್ಷಗಳ ಹಿಂದೆ ಕೇವಲ 230 ವಿದ್ಯಾರ್ಥಿಗಳೊಂದಿಗೆ ಆರಂಭವಾದ ಸಂಸ್ಥೆ ಇಂದು ಹೆಮ್ಮರವಾಗಿ ಬೆಳೆದಿದೆ. ಈ ವರ್ಷ ಸಂಸ್ಥೆಯ 105 ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣಕ್ಕೆ ಆಯ್ಕೆಯಾಗಿದ್ದು, ಪಿಯು ವಿಜ್ಞಾನ ವಿಭಾಗದಲ್ಲಿ ಕಲ್ಯಾಣ ಕರ್ನಾಟಕದಲ್ಲಿ ಎರಡನೇ ಸ್ಥಾನ ಗಳಿಸಿದೆ. ನರ್ಸರಿಯಿಂದ ನೌಕರಿವರೆಗೆ ಯೋಜನೆಯಡಿ ಕ್ಯಾಂಪಸ್ ಸಂದರ್ಶನಗಳ ಮೂಲಕ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರತಿಷ್ಠಿತ ಸಂಸ್ಥೆಗಳಲ್ಲಿ ಉದ್ಯೋಗಾವಕಾಶ ಪಡೆದಿದ್ದಾರೆ. ಶಿಕ್ಷಣದ ಜತೆಗೆ ಈ ಭಾಗದ ಯುವಕರಿಗೆ ಉದ್ಯೋಗ ಕಲ್ಪಿಸುವುದು ಸಂಸ್ಥೆಯ ಸಂಕಲ್ಪ. ಅಗ್ನಿಪಥ್ ಯೋಜನೆಯಡಿ ಯುವಕರಿಗೆ ಉತ್ತಮ ಅವಕಾಶ ಕಲ್ಪಿಸುವ ಉದ್ದೇಶದಿಂದ ಗುಣಮಟ್ಟದ ತರಬೇತಿ ನೀಡಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಅಗತ್ಯವಾದ ಟ್ರ್ಯಾಕ್‌ಸೂಟ್, ಶೂ, ಜಿಮ್ ಸೌಲಭ್ಯ ಹಾಗೂ ಪೌಷ್ಟಿಕ ಆಹಾರ ಉಚಿತವಾಗಿ ಒದಗಿಸಲಾಗುತ್ತಿದೆ ಎಂದರು.

ಡಿವೈಎಸ್ಪಿ ಜೆ.ಎಸ್. ನ್ಯಾಮಗೌಡರ್, ಎನ್.ಆರ್.ಟ್ರಸ್ಟ್ ಅಧ್ಯಕ್ಷ ಎನ್.ಆರ್. ಶ್ರೀನಿವಾಸ, ಉದ್ಯಮಿ ಕೆ. ಪಂಪಾಪತಿ ಪಾಟೀಲ್, ಸಂಸ್ಥೆ ಉಪಾಧ್ಯಕ್ಷ ನೆಕ್ಕಂಟಿ ಆದರ್ಶ, ಎಂಡಿ ಡಾ. ಅಖಿಲಾ, ನಿರ್ದೇಶಕ ವೆಂಕಟಪತಿರಾಜು, ಪದವಿ ಕಾಲೇಜಿನ ಪ್ರಾಚಾರ್ಯ ಅಭಿಷೇಕ, ತರಬೇತುದಾರ ಹೈದರ್ ಅಲಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net