ವಿಜಯವಾಣಿ ಸುದ್ದಿಜಾಲ ಗಂಗಾವತಿ
ಗದಾಯುದ್ಧ ಕಾವ್ಯಭಾಗದ ದುರ್ಯೋಧನ ವಿಲಾಪ ಒಂದು ವಿಶಿಷ್ಟ ಭಾಗವಾಗಿದ್ದು, ವರ್ತಮಾನಕ್ಕೆ ಹಿಡಿದ ಕನ್ನಡಿ ಎಂದು ಶ್ರೀರಾಮನಗರ ಸಿಎನ್‌ಆರ್ ಸರ್ಕಾರಿ ಪದವಿ ಕಾಲೇಜು ಪ್ರಾಚಾರ್ಯ ಡಾ. ಸುಂಕೇಶ್ವರ ಕರಿಗೂಳಿ ಹೇಳಿದರು.
ಎಸ್‌ಕೆಎನ್‌ಜಿ ಸರ್ಕಾರಿ ಪದವಿ ಕಾಲೇಜಿನಲ್ಲಿ ಕನ್ನಡ ಅಧ್ಯಯನ ವಿಭಾಗ, ಐಕ್ಯೂಎಸಿ ವಿಭಾಗದಿಂದ ಬುಧವಾರ ಹಮ್ಮಿಕೊಂಡಿದ್ದ ಹಳೆಗನ್ನಡ ಮರು ಓದು ಕಾರ್ಯಕ್ರಮದಲ್ಲಿ ಮಾತನಾಡಿದರು. ಮಹಾಕವಿ
ರನ್ನ ವಿರಚಿತ ಗದಾಯುದ್ಧ ವಿಶಿಷ್ಟ ಕಾವ್ಯವಾಗಿದ್ದು, ದುರ್ಯೋಧನ ವ್ಯಕ್ತಿತ್ವದಲ್ಲಿನ ಗುಣಾತ್ಮಕ ವಿಚಾರಗಳನ್ನು ರನ್ನ ರೋಚಕವಾಗಿ ಚಿತ್ರಿಸಿದ್ದಾರೆ. ಯುದ್ಧ ಭೂಮಿಯ ಚಿತ್ರಣ ಕಣ್ಮುಂದೆ ಬರುವಂತೆ ರಚಿಸಲಾಗಿದೆ. ಕವಿಯ ದೃಷ್ಟಿ-ಸಷ್ಟಿಯ ವಿರಾಟ್ ರೂಪವನ್ನು ನೋಡಬೇಕೆಂದರೆ ರನ್ನನ ಗದಾಯುದ್ಧ ಓದಬೇಕು. ಒಬ್ಬ ವ್ಯಕ್ತಿ ಅಸಹಾಯಕ ಸ್ಥಿತಿತಲುಪಿದಾಗ ಆತನಿಂದ ಹೊಮ್ಮುವ ಭಾವನೆಗಳನ್ನು ಹದಯಸ್ಪರ್ಶಿಯಾಗಿ ಕಟ್ಟಿಕೊಟ್ಟಿದ್ದಾರೆ ಎಂದರು.
ಕನ್ನಡ ವಿಭಾಗದ ಮುಖ್ಯಸ್ಥೆ ಡಾ.ಮುಮ್ತಾಜ್‌ಬೇಗಂ ಮಾತನಾಡಿ, ಗದಾಯುದ್ಧ ಮಹತ್ವದ ಕಾವ್ಯವಾಗಿದ್ದು, ಓದು ಜ್ಞಾನದ ವೈಶಾಲ್ಯ ತಿಳಿಸಲಿದೆ. ಹಳೆಗನ್ನಡ ಕಾವ್ಯಗಳ ಮಾನವೀಯ ಸಂವೇದನೆಗಳನ್ನು ಇಂದಿನ ತಲೆಮಾರಿಗೆ ತಲುಪಿಸುವ ಉದ್ದೇಶ ಹೊಂದಿದೆ ಎಂದರು.
ಪ್ರಾಚಾರ್ಯ ಡಾ.ಶಿವರಾಜ್ ಗುರಿಕಾರ್ ಕಾರ್ಯಕ್ರಮ ಉದ್ಘಾಟಿಸಿದರು. ಐಕ್ಯೂಎಸಿ ಸಂಚಾಲಕ ಉಮಾಕಾಂತ ಅವರೆಡ್ಡಿ, ಉಪನ್ಯಾಸಕ ಗುಂಡೂರು ಪವನ್ ಕುಮಾರ ಮಾತನಾಡಿದರು.
ಪ್ರಾಧ್ಯಾಪಕರಾದ ಡಾ.ಜೆ.ಎಂ. ಶಿಲ್ಪಾ, ಡಾ.ಅನ್ನಪೂರ್ಣಾ ಗುಡದೂರು, ರವಿ ಹಾದಿಮನಿ, ಸ್ವಾತಿ, ಡಾ.ನರಸಿಂಹ, ಡಾ.ಬಸವರಾಜ, ಡಾ.ಸೃಷ್ಟಿ, ಡಾ.ಮಣಿಕಠ ಹಂಗಳ, ಡಾ.ಬಸವರಾಜ ಗೌಡನಭಾವಿ, ಪಾಗುಂಡಪ್ಪ, ಡಾ.ಉಷಾರಾಣಿ, ಬಾಲಪ್ಪ ಬಡಿಗೇರ್, ಡಾ.ಲಕ್ಷ್ಮೀಬಾಯಿ ಇತರರಿದ್ದರು.