ನಾಗದೇವನಿಗೆ ಹಾಲೂಣಿಸಿದ ತಾಯಂದಿರು

ತಾಲೂಕಿನ ಹಿರೇಸಿಂದೋಗಿಯಲ್ಲಿ ಮಹಿಳೆಯರು ನಾಗದೇವರಿಗೆ ನಾಗರ ಪಂಚಮಿ ನಿಮಿತ್ತ ಹಾಲೆರೇದರು.
ತಾಲೂಕಿನ ಹಿರೇಸಿಂದೋಗಿಯಲ್ಲಿ ಮಹಿಳೆಯರು ನಾಗದೇವರಿಗೆ ನಾಗರ ಪಂಚಮಿ ನಿಮಿತ್ತ ಹಾಲೆರೇದರು.
Published on

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾದ್ಯಂತ ನಾಗರ ಪಂಚಮಿ ಜೋರು

ಕೊಪ್ಪಳ : ಮಹಿಳೆಯರು ಸಂಭ್ರಮದಿಂದ ಆಚರಿಸುವ ಪ್ರಮುಖ ಹಬ್ಬಗಳಲ್ಲಿ ಒಂದಾದ ನಾಗರ ಪಂಚಮಿ ಹಬ್ಬವನ್ನು ಕೊಪ್ಪಳ ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಭಾನುವಾರ ಭಕ್ತಿಭಾವ ಹಾಗೂ ಸಡಗರದಿಂದ ಆಚರಿಸಲಾಯಿತು. ನಾಗರ ಕಟ್ಟೆ, ದೇವಸ್ಥಾನಗಳು ಹಾಗೂ ವಿವಿಧೆಡೆ ಪ್ರತಿಷ್ಠಾಪಿಸಲಾಗಿದ್ದ ನಾಗದೇವರಿಗೆ ಮಹಿಳೆಯರು ಹಾಲೆರೆದು ಪೂಜೆ ಸಲ್ಲಿಸಿದರು.

ಮುಂಗಾರು ಬಿತ್ತನೆ ಸೇರಿದಂತೆ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ರೈತ ಕುಟುಂಬಗಳಿಗೆ ಈ ಸಂದರ್ಭದಲ್ಲಿ ಕೊಂಚ ಬಿಡುವು ದೊರೆಯುತ್ತದೆ. ಇಂತಹ ಸಮಯದಲ್ಲಿ ಬರುವ ದೊಡ್ಡ ಹಬ್ಬ ನಾಗರ ಪಂಚಮಿಯಾಗಿದ್ದು, ಮಹಿಳೆಯರು ವಿಶೇಷ ಉತ್ಸಾಹದಿಂದ ಆಚರಿಸುತ್ತಾರೆ. ಮೂರು ದಿನಗಳ ಕಾಲ ನಡೆಯುವ ಹಬ್ಬದಲ್ಲಿ ಮೊದಲ ದಿನ ರೊಟ್ಟಿ ಪಂಚಮಿ ಆಚರಿಸಲಾಗುತ್ತದೆ. ನಂತರದ ದಿನ ನಾಗಪ್ಪನಿಗೆ ಹಾಲೆರೆದು ಪೂಜೆ ಸಲ್ಲಿಸುವ ಮೂಲಕ ನಾಗರ ಪಂಚಮಿ ಆಚರಿಸಲಾಗುತ್ತದೆ.
ಹಬ್ಬದ ಹಿನ್ನೆಲೆಯಲ್ಲಿ ಮಹಿಳೆಯರು ಹಲವು ದಿನಗಳ ಹಿಂದಿನಿಂದಲೇ ಪೂರ್ವ ತಯಾರಿ ಮಾಡಿಕೊಂಡು, ವಿವಿಧ ಬಗೆ ಸಿಹಿ ತಿಂಡಿಗಳು ಹಾಗೂ ಉಂಡಿ ತಯಾರಿಕೆಗೆ ಬೇಕಾದ ಪದಾರ್ಥಗಳನ್ನು ಸಂಗ್ರಹಿಸಿಕೊಂಡು, ಮನೆಯಲ್ಲಿಯೇ ಸಾಂಪ್ರದಾಯಿಕ ತಿಂಡಿಗಳನ್ನು ಸಿದ್ಧಪಡಿಸಿದರು. ಭಾನುವಾರ ಬೆಳಗ್ಗೆಯೇ ವಿಶೇಷ ಅಡುಗೆ ತಯಾರಿಸಿ ದೇವರಿಗೆ ನೈವೇದ್ಯ ಅರ್ಪಿಸಿದರು.
ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಮಹಿಳೆಯರು ಗುಂಪು ಗುಂಪಾಗಿ ನಾಗರ ಕಟ್ಟೆ ಹಾಗೂ ದೇವಸ್ಥಾನಗಳಿಗೆ ತೆರಳಿ, ಕೊಬ್ಬರಿ ಬಟ್ಟಲಿನಲ್ಲಿ ಹಾಲು ತೆಗೆದುಕೊಂಡು ನಾಗಪ್ಪನಿಗೆ ಹಾಲೆರೆದು, ಹೂವು, ಅರಿಶಿನ-ಕುಂಕುಮ ಅರ್ಪಿಸಿ ಪೂಜೆ ಸಲ್ಲಿಸಿದರು. ನನ್ನ ಪಾಲು, ಮಗನ ಪಾಲು, ತಂದೆ&ತಾಯಿ ಪಾಲು ಎಂದು ಮಕ್ಕಳೊಂದಿಗೆ ನಾಗದೇವರಿಗೆ ಹಾಲು ಅರ್ಪಿಸಿದ ತಾಯಂದಿರು ಹಬ್ಬದ ಸಂಭ್ರಮ ಹಂಚಿಕೊಂಡರು.
ನಗರದ ವಿವಿಧ ಬಡಾವಣೆಗಳು ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ನಾಗರ ಕಲ್ಲುಗಳಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಮಹಿಳೆಯರು ಹೊಸ ಬಟ್ಟೆ ಧರಿಸಿ, ಕುಟುಂಬ ಸಮೇತರಾಗಿ ಪೂಜಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು. ಕೆಲವೆಡೆ ಭಜನೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳೂ ನಡೆದವು.
ನಾಗರ ಪಂಚಮಿ ಕೇವಲ ಧಾರ್ಮಿಕ ಆಚರಣೆಯಾಗಿರದೆ, ಗ್ರಾಮೀಣ ಜನಜೀವನದ ಸಂಪ್ರದಾಯ, ನಂಬಿಕೆ ಹಾಗೂ ಕುಟುಂಬದ ಸದಸ್ಯರನ್ನು ಒಗ್ಗೂಡಿಸುವ ಹಬ್ಬವಾಗಿದೆ. ಕೃಷಿ ಕೆಲಸದ ನಡುವೆ ದೊರೆಯುವ ಬಿಡುವಿನ ಸಮಯದಲ್ಲಿ ಮಹಿಳೆಯರು ಸಾಂಪ್ರದಾಯಿಕವಾಗಿ ಈ ಹಬ್ಬವನ್ನು ಸಡಗರದಿಂದ ಆಚರಿಸುವ ಮೂಲಕ ತಮ್ಮ ಸಂಸತಿ ಹಾಗೂ ಆಚರಣೆಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುತ್ತಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net