ಗ್ರಾಮಸ್ಥರ ಹಲವು ದಶಕಗಳ ಕನಸು ನನಸು

ಘಟ್ಟಿರಡ್ಡಿಹಾಳ-ಅಳವಂಡಿ ರಸ್ತೆ, ಸೇತುವೆ ಕಾಮಗಾರಿ ಪೂರ್ಣ. ವಾರದೊಳಗೆ ಉದ್ಘಾಟನೆ ಸಿದ್ಧತೆ
Bridge
ಅಳವಂಡಿ-ಘಟ್ಟಿರಡ್ಡಿಹಾಳ ರಸ್ತೆ ಮಧ್ಯದ ಹಿರೇಹಳ್ಳಕ್ಕೆ ಸೇತುವೆ ನಿರ್ಮಾಣವಾಗಿರುವುದು. shreekantha
Published on

ವಿಜಯವಾಣಿ ಸುದ್ದಿಜಾಲ ಅಳವಂಡಿ

ಗ್ರಾಮಸ್ಥರ ಹಲವು ದಶಕಗಳ ಬೇಡಿಕೆಯಾದ ಘಟ್ಟಿರಡ್ಡಿಹಾಳ-ಅಳವಂಡಿ ಮಾರ್ಗ ಮಧ್ಯದ ಹಳ್ಳಕ್ಕೆ ಸೇತುವೆ ಹಾಗೂ ರಸ್ತೆ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು ಉದ್ಘಾಟನೆಗೆ ಸಿದ್ಧಗೊಂಡಿದೆ.

ಘಟ್ಟಿರಡ್ಡಿಹಾಳ ಕೊಪ್ಪಳ ತಾಲೂಕಿನ ಕಟ್ಟಕಡೆಯ ಗ್ರಾಮವಾಗಿದ್ದು, 1500 ಜನಸಂಖ್ಯೆ ಹೊಂದಿದೆ. ತಾಲೂಕು ಕೇಂದ್ರದಿಂದ 40 ಕಿಮೀ, ಅಳವಂಡಿಯಿಂದ 6 ಕಿ.ಮೀ. ದೂರ ಹೊಂದಿದೆ. ಗ್ರಾಮಸ್ಥರು ಜಿಲ್ಲಾ ಕೇಂದ್ರ ಕೊಪ್ಪಳಕ್ಕೆ ತೆರಳಲು 6 ಕಿಮೀ ದೂರದ ಮುಂಡರಗಿಗೆ ತೆರಳಿ ಸಂಚರಿಸಬೇಕಿತ್ತು. ಅಳವಂಡಿಗೆ 12 ಕೀಮಿ ಸುತ್ತಿ ಬಳಸಿ ಬರಬೇಕಿತ್ತು. ಸೇತುವೆ-ರಸ್ತೆ ನಿರ್ಮಾಣದಿಂದ ಈ ತಾಪತ್ರವೀಗ ತಪ್ಪಿದೆ.

ROAD
ಸಂಚಾರಕ್ಕೆ ಸಿದ್ಧವಾಗಿರುವ ರಸ್ತೆ.shreekantha

ಘಟ್ಟಿರಡ್ಡಿಹಾಳ ಮಾರ್ಗ ಮಧ್ಯ ಹಿರೇಹಳ್ಳವಿದ್ದು ಇದರಲ್ಲಿ ಯಾವಾಗಲೂ ನೀರಿರುವ ಕಾರಣ ವಾಹನ ಸಂಚಾರ ಕಷ್ಟವಾಗಿತ್ತು. ಇದಲ್ಲದೇ ಇನ್ನೆರಡು ಸಣ್ಣ ಹಳ್ಳಗಳಿದ್ದು ಮಳೆಗಾಲದಲ್ಲಿ ತುಂಬಿ ಹರಿವ ಕಾರಣ ಮುಂಡರಗಿಗೆ ಹೋಗಿಯೇ ಜಿಲ್ಲಾ ಕೇಂದ್ರ ತಲುಪಬೇಕಿತ್ತು. ಇದೇ ರಸ್ತೆಗೆ ಹೊಂದಿಕೊಂಡು ಸಾವಿರಾರು ಎಕರೆ ಕೃಷಿ ಭೂಮಿ ಇದ್ದು, ಮಳೆಗಾಲದಲ್ಲಿ ಕೃಷಿ ಟುವಟಿಕೆಗೆ ಹಿನ್ನೆಡೆಯಾಗುತ್ತಿತ್ತು. ಈ ಎಲ್ಲ ಸಮಸ್ಯೆಗೆ ಇದೀಗ ಮುಕ್ತಿ ಸಿಕ್ಕಂತಾಗಿದೆ.

ಬಹು ದಶಕಗಳ ಗ್ರಾಮಸ್ಥರ ಕನಸನ್ನು ಶಾಸಕ ರಾಘವೇಂದ್ರ ಹಿಟ್ನಾಳ ನನಸು ಮಾಡಿದ್ದು, ಕಲ್ಯಾಣ ಪಥ ಯೋಜನೆ 2024-25 ಅಡಿಯಲ್ಲಿ ಸೇತುವೆ ನಿರ್ಮಾಣಕ್ಕೆ 2.44 ಕೋಟಿ., ರಸ್ತೆ ನಿರ್ಮಾಣಕ್ಕೆ 4.26 ಕೋಟಿ ರೂ. ಮಂಜೂರು ಮಾಡಿ ಕಾಮಗಾರಿ ಪೂರ್ಣಗೊಳಿಸಿದ್ದರಿಂದ ಗ್ರಾಮಸ್ಥರಲ್ಲಿ ಸಂಭ್ರಮ ಮನೆ ಮಾಡಿದೆ.

ಸೇತುವೆ ಹಾಗೂ ರಸ್ತೆ ನಿರ್ಮಾಣದಿಂದ ಹೊಬಳಿ ಕೇಂದ್ರಕ್ಕೆ ತೆರಳುವವರಿಗೆ ಅನೂಕೂಲ ಆಗಲಿದೆ. ಅಲ್ಲದೇ ಜಿಲ್ಲಾ ಕೇಂದ್ರ ಕೊಪ್ಪಳಕ್ಕೆ ತೆರಳುವವರಿಗೆ 12 ಕೀಮಿ ಕಡಿಮೆ ಆಗಲಿದೆ. ಸರ್ಕಾರಿ ಕಚೇರಿ ಕೆಲಸ, ವಾಣಿಜ್ಯ ವಹಿವಾಟು, ಶಿಕ್ಷಣ ಮುಂತಾದ ಕಾರ್ಯಗಳಿಗೆ ತೆರಳುವವರಿಗೆ ತುಂಬಾ ಅನೂಕೂಲ ಆಗಲಿದೆ.

ರಸ್ತೆ, ಸೇತುವೆ ನಿರ್ಮಾಣದಿಂದ ಕೊಪ್ಪಳ ಹಾಗೂ ಅಳವಂಡಿಗೆ ತೆರಳುವವರಿಗೆ 12 ಕಿ.ಮೀ. ಕಡಿಮೆಯಾಗಲಿದೆ. ನಾನಾ ಕಾರಣ ಜಿಲ್ಲಾ ಕೇಂದ್ರಕ್ಕೆ ನಿತ್ಯ ಹೋಗಿ ಬರುವವರಿಗೆ ತುಂಬಾ ಅನುಕೂಲವಾಗಲಿದೆ. ಮಳೆಗಾಲದಲ್ಲೂ ನಿಶ್ಚಿಂತೆಯಿಂದ ಕೃಷಿ ಚಟುವಟಿಕೆ ಕೈಗೊಳ್ಳಲು ರೈತರಿಗೆ ಪ್ರಯೋಜನವಾಗಿದೆ. ಬಸವರಾಜ ಡಂಬಳ, ಗ್ರಾಮಸ್ಥ ಘಟ್ಟಿರಡ್ಡಿಹಾಳ

ಘಟ್ಟಿರಡ್ಡಿಹಾಳ-ಅಳವಂಡಿ ರಸ್ತೆ ಹಾಗೂ ಸೇತುವೆ ನಿರ್ಮಾಣ ಕಾರ್ಯ ಮುಗಿದಿದ್ದು ವಾರದಲ್ಲಿ ಉದ್ಘಾಟನೆ ಮಾಡಲಾಗುವುದು. ಈ ಮಾರ್ಗದಲ್ಲಿ ಬಸ್ ಸಂಚಾರ ಪ್ರಾರಂಭಿಸಿ ಗ್ರಾಮಸ್ಥರಿಗೆ ಅನುಕೂಲ ಮಾಡಿಕೊಡಲಾಗುವುದು. ರಾಘವೇಂದ್ರ ಹಿಟ್ನಾಳ, ಕೊಪ್ಪಳ ಶಾಸಕ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net