

ಮಡಿಕೇರಿ
ದೇಶದಲ್ಲಿ ಜರುಗುತ್ತಿರುವ ಜನಸಂಖ್ಯಾ ಪಲ್ಲಟ ಮತ್ತು ಸ್ಥಳೀಯ ಉದ್ಯೋಗಾವಕಾಶಗಳ ಮೇಲಿನ ಪರಿಣಾಮಗಳ ಕುರಿತು ಪ್ರತಿಯೊಬ್ಬರೂ ಧ್ವನಿ ಎತ್ತಬೇಕಾದ ಅಗತ್ಯವಿದೆ ಎಂದು ನವದೆಹಲಿಯ ಪ್ರಸಾರ ಭಾರತಿ ಕನ್ಸಲ್ಟೆಂಟ್ ಭರತ್ ಭೂಷಣ್ ಹೇಳಿದರು. ಅಕ್ರಮ ಬಾಂಗ್ಲಾ ವಲಸಿಗರ ಗಡಿಪಾರಿಗೆ ಆಗ್ರಹಿಸಿ ಕೊಡಗು ಸುರಕ್ಷಾ ಆಂದೋಲನ ಸಮಿತಿ ವತಿಯಿಂದ ಇಲ್ಲಿನ ಹಳೇ ಖಾಸಗಿ ಬಸ್ ನಿಲ್ದಾಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಜನಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಾಮಾಜಿಕ ಹಾಗೂ ಜನಸಂಖ್ಯಾ ಪಲ್ಲಟಗಳ ಕುರಿತು ಮಾತನಾಡಲು ಸಾಂಪ್ರದಾಯಿಕವಾಗಿ ಜನ ಹಿಂಜರಿಯುತ್ತಿದ್ದಾರೆ. ನಾವು ಮಾತನಾಡಿದರೆ ಕೋಮುವಾದಿ ಎಂದು ಕರೆಯುತ್ತಾರೆ ಎಂಬ ಭಯದಿಂದ ಅನೇಕರು ಮೌನವಾಗಿದ್ದಾರೆ. ದೇಶ ಮತ್ತು ಸಮಾಜದ ಹಿತದೃಷ್ಟಿಯಿಂದ ಈ ಭಯವನ್ನು ತೊರೆದು ಸತ್ಯವನ್ನು ಎತ್ತಿಹಿಡಿಯುವ ಅಭ್ಯಾಸ ಮಾಡಿಕೊಳ್ಳಬೇಕಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ 2024ರ ಆಗಸ್ಟ್ 15ರಂದು ಕೆಂಪುಕೋಟೆಯಿAದ ಮಾತನಾಡುತ್ತಾ, ಯೋಜಿತ ರೀತಿಯಲ್ಲಿ ದೇಶದ ಜನಸಂಖ್ಯಾ ಬದಲಾವಣೆ ನಡೆಯುತ್ತಿರುವ ಕುರಿತು ಕಳವಳ ವ್ಯಕ್ತಪಡಿಸಿದ್ದರು. ಈ ಕುರಿತು ಅಧ್ಯಯನ ನಡೆಸಿ ವರದಿ ಸಲ್ಲಿಸಲು ಜಸ್ಟಿಸ್ ನಾವ್ಲೆಕರ್ ಸಮಿತಿಯನ್ನು ರಚಿಸಲಾಗಿದೆ.
ಕಾಫಿ ತೋಟಗಳಲ್ಲಿ ಕಾರ್ಯನಿರ್ವಹಿಸುವ ಸ್ಥಳೀಯ ಕಾರ್ಮಿಕರಿಗೆ ಉದ್ಯೋಗಾವಕಾಶಗಳು ಕೈ ತಪ್ಪುತ್ತಿದ್ದು, ಬಾಂಗ್ಲಾದೇಶಿ ಕಾರ್ಮಿಕರ ಸಂಖ್ಯೆ ಹೆಚ್ಚಾಗುತ್ತಿದೆ. ಇದು ಕೇವಲ ಉದ್ಯೋಗದ ಸಮಸ್ಯೆಯಷ್ಟೇ ಅಲ್ಲದೆ, ಭವಿಷ್ಯದ ಭದ್ರತೆ ಮತ್ತು ಕಾನೂನು ಸುವ್ಯವಸ್ಥೆಯ ಮೇಲೆಯೂ ಪರಿಣಾಮ ಬೀರಲಿದೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾರ್ವಜನಿಕರು ಹಾಗೂ ಸಂಘ-ಸAಸ್ಥೆಗಳು ಮುಂದಾಗಬೇಕಿದೆ. ಸ್ಥಳೀಯರು ಕಾರ್ಮಿಕ ಸಂಘಟನೆಗಳನ್ನು ರಚಿಸಿ, ದಾಖಲೆಗಳೊಂದಿಗೆ ತಮ್ಮ ಸುತ್ತಮುತ್ತ ನಡೆಯುತ್ತಿರುವ ಘಟನೆಗಳನ್ನು ಜಸ್ಟಿಸ್ ನಾವ್ಲೆಕರ್ ಸಮಿತಿ, ಜಿಲ್ಲಾಧಿಕಾರಿಗಳು ಹಾಗೂ ಸರ್ಕಾರಕ್ಕೆ ತಲುಪಿಸಬೇಕು. ತೋಟಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಸೂಕ್ತ ತನಿಖೆ ಮತ್ತು ಎನ್‌ಆರ್‌ಸಿ ಮಾದರಿಯ ದೃಢೀಕರಣ ಕಡ್ಡಾಯಗೊಳಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯ ಬಿಜೆಪಿ ವಕ್ತಾರ ಹೆಚ್.ಎನ್. ಚಂದ್ರಶೇಖರ್ ಮಾತನಾಡಿ, ದೇಶದ ಭದ್ರತೆ, ಸಾಂಸ್ಕೃತಿಕ ಪರಂಪರೆ ಹಾಗೂ ಸ್ಥಳೀಯ ನಿವಾಸಿಗಳ ಹಕ್ಕುಗಳನ್ನು ರಕ್ಷಿಸಲು ಪ್ರತಿಯೊಬ್ಬ ನಾಗರಿಕನೂ ಜಾಗೃತನಾಗಬೇಕಾದ ಅಗತ್ಯವಿದೆ. ಜಗತ್ತಿನ ಇತಿಹಾಸದಲ್ಲಿ ಬಂದ 36 ನಾಗರಿಕತೆಗಳಲ್ಲಿ 35 ನಾಗರಿಕತೆಗಳು ಕಾಲಕ್ರಮೇಣ ನಾಶವಾಗಿವೆ. ಆದರೆ ಭಾರತೀಯ ಹಾಗೂ ಹಿಂದೂ ಸಂಸ್ಕೃತಿ ಸಾವಿರಾರು ವರ್ಷಗಳ ಆಕ್ರಮಣಗಳು, ಸವಾಲುಗಳು ಮತ್ತು ಸಂಘರ್ಷಗಳನ್ನು ಎದುರಿಸಿ ಇಂದಿಗೂ ಜೀವಂತವಾಗಿ ಉಳಿದುಕೊಂಡಿದೆ. ರಾಜಮನೆತನಗಳು ಮತ್ತು ಸೈನ್ಯಗಳು ಪತನಗೊಂಡರೂ, ಭಾರತದ ಆತ್ಮವಾಗಿದ್ದ ದೇಶಭಕ್ತಿ, ಆಧ್ಯಾತ್ಮಿಕ ಚಿಂತನೆಗಳು ಹಾಗೂ ಸಾಧು-ಸಂತರ ಮಾರ್ಗದರ್ಶನವೇ ಈ ಸಂಸ್ಕೃತಿಯನ್ನು ರಕ್ಷಿಸಿದೆ. ದೇಶದ ಒಳಗಡೆ ಅಕ್ರಮವಾಗಿ ನುಸುಳುತ್ತಿರುವ ಹಾಗೂ ವಲಸೆ ಬರುವ ಶಕ್ತಿಗಳಿಂದ ದೇಶೀಯ ಹಿತಾಸಕ್ತಿಗಳಿಗೆ ಧಕ್ಕೆಯಾಗುತ್ತಿದೆ. ಸ್ಥಳೀಯ ಮೂಲನಿವಾಸಿಗಳು, ಗಿರಿಜನರು ಹಾಗೂ ವಿವಿಧ ಸಮುದಾಯಗಳ ಹಕ್ಕುಗಳನ್ನು ರಕ್ಷಿಸಲು ಪ್ರತಿಯೊಬ್ಬರೂ ಜಾಗೃತರಾಗಬೇಕು. ಸಣ್ಣಪುಟ್ಟ ಸ್ವಾರ್ಥಕ್ಕಾಗಿ ಅಥವಾ ಆಮಿಷಗಳಿಗೆ ಒಳಗಾಗಿ ಸ್ಥಳೀಯ ಹಿತಾಸಕ್ತಿಗಳನ್ನು ಬಲಿಗೊಡಬಾರದು.
ಕೊಡಗಿನ ಮೂಲನಿವಾಸಿ ಸಮುದಾಯಗಳು ಸೌಹಾರ್ದತೆಯಿಂದ ಬದುಕಿ ಇಡೀ ಜಗತ್ತಿಗೆ ಮಾದರಿಯಾಗಿದ್ದವು. ಆದರೆ ಇತ್ತೀಚಿನ ದಿನಗಳಲ್ಲಿ ಉಂಟಾಗುತ್ತಿರುವ ಸಾಮಾಜಿಕ ವ್ಯತ್ಯಾಸಗಳು ಹಾಗೂ ಅಕ್ರಮ ಚಟುವಟಿಕೆಗಳನ್ನು ತಡೆಯಲು ಡಿಜಿಟಲ್ ಮಾಧ್ಯಮ, ಜ್ಞಾನ ಮತ್ತು ಕಾನೂನಾತ್ಮಕ ವೇದಿಕೆಗಳನ್ನು ಬಳಸಿಕೊಂಡು ಹೋರಾಟ ನಡೆಸಬೇಕು ಎಂದರು.
ಮಾಜಿ ಸೇನಾಧಿಕಾರಿ ಕ್ಯಾ. ಬಿದ್ದಂಡ ನಾಣಿ ನಾಣಯ್ಯ ಮಾತನಾಡಿ, ಭಾರತದ ಭದ್ರತೆ, ಸಾರ್ವಭೌಮತ್ವ ಮತ್ತು ಶಾಂತಿಗೆ ಧಕ್ಕೆ ತರುತ್ತಿರುವ ಅಕ್ರಮ ಬಾಂಗ್ಲಾದೇಶಿ ವಲಸಿಗರ ಒಳನುಸುಳುವಿಕೆ ಹಾಗೂ ಅವರ ಅಕ್ರಮ ಚಟುವಟಿಕೆಗಳ ವಿರುದ್ಧ ಸಾರ್ವಜನಿಕರು ಹಾಗೂ ಸ್ಥಳೀಯರು ತೀವ್ರ ಜಾಗೃತಿ ವಹಿಸಬೇಕು. ವೀರರು ಹಾಗೂ ಶೂರರ ತ್ಯಾಗದಿಂದ ಲಭಿಸಿದ ಸ್ವಾತಂತ್ರ‍್ಯ ಮತ್ತು ಸಂವಿಧಾನವನ್ನು ರಕ್ಷಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯವಾಗಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ದೇಶಾದ್ಯಂತ ಹಾಗೂ ಕೊಡಗಿನ ತೋಟ, ಕೈಗಾರಿಕಾ ಕೇಂದ್ರಗಳು ಮತ್ತು ಮನೆಗಳಲ್ಲಿ ಕೆಲಸದ ನೆಪದಲ್ಲಿ ಸಾವಿರಾರು ಅಕ್ರಮ ಬಾಂಗ್ಲಾ ವಲಸಿಗರು ಆಶ್ರಯ ಪಡೆಯುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ವಲಸಿಗರು ಆರಂಭದಲ್ಲಿ ಸ್ಥಳೀಯ ಏಜೆಂಟರು ಮತ್ತು ಸಂಘಟನೆಗಳ ನೆರವಿನಿಂದ ಒಳನುಸುಳಿ, ಮಾಲೀಕರ ವಿಶ್ವಾಸಗಳಿಸಿ ಫುಟ್‌ಹೋಲ್ಡ್ ನಿರ್ಮಿಸಿಕೊಳ್ಳುತ್ತಾರೆ. ತರುವಾಯ ನಕಲಿ ಆಧಾರ್, ಪಾನ್ ಕಾರ್ಡ್, ವೋಟರ್ ಐಡಿ ಮತ್ತು ಚಾಲನಾ ಪರವಾನಗಿಗಳನ್ನು ಪಡೆದುಕೊಂಡು ಕಳ್ಳತನ, ವಂಚನೆ ಹಾಗೂ ಸ್ಥಳೀಯ ಬೆಳೆಗಳಾದ ಕಾಫಿ, ಅಡಿಕೆ, ಕಾಳುಮೆಣಸು ಅಕ್ರಮ ಮಾರಾಟ ದಂಧೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ.
ಪಾಕಿಸ್ತಾನ ಗಡಿಯಲ್ಲಿ ಅತ್ಯಾಧುನಿಕ ಬೇಲಿ ಮತ್ತು ಭದ್ರತಾ ವ್ಯವಸ್ಥೆ ಇರುವುದರಿಂದ ಅಲ್ಲಿಂದ ಬರುವ ಉಗ್ರವಾದವನ್ನು ತಡೆಯಲಾಗುತ್ತಿದೆ. ಆದರೆ ಬಾಂಗ್ಲಾದೇಶ ಗಡಿಯಲ್ಲಿ ಸೂಕ್ತ ತಡೆಗೋಡೆ ಇಲ್ಲದಿರುವುದನ್ನು ಹಾಗೂ ಕೆಲವು ರಾಜಕೀಯ ಹಿತಾಸಕ್ತಿಗಳನ್ನು ದುರುಪಯೋಗಪಡಿಸಿಕೊಂಡು ಇವರು ದೇಶದ ಪ್ರತಿಯೊಂದು ರಾಜ್ಯಕ್ಕೂ ವ್ಯಾಪಿಸುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಕೊಡಗು ಸುರಕ್ಷ ಆಂದೋಲನ ಸಮಿತಿ ಸಂಯೋಜಕ ಕುಕ್ಕೇರ ಅಜಿತ್ ಮಾತನಾಡಿ, ದೇಶದ ಆಂತರಿಕ ಸುರಕ್ಷತೆಗಾಗಿ ರಾಜ್ಯ ಮತ್ತು ಕೇಂದ್ರ ಸರಕಾರಗಳು ಮತ್ತಷ್ಟು ಕಠಿಣ ಕಾನೂನು ಜಾರಿಗೊಳಿಸಬೇಕೆಂಬುವುದು ಬಹುತೇಕ ಸಾರ್ವಜನಿಕರ ಆಗ್ರಹವಾಗಿದೆ. ದೇಶದೊಳಗೆ ಅಕ್ರಮವಾಗಿ ನುಸುಳಿರುವ ಎರಡು ಕೋಟಿಯಷ್ಟು ಅಕ್ರಮ ಬಾಂಗ್ಲಾ ವಲಸಿಗರು ಈಗಾಗಲೇ ಅಕ್ರಮವಾಗಿ ಮಾಡಿಸಿಕೊಂಡಿರುವ ಆಧಾರ್ ಕಾರ್ಡ್, ವೋಟರ್ ಐ.ಡಿ., ರೇಷನ್ ಕಾರ್ಡ್, ಪಾನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಬ್ಯಾಂಕ್ ಖಾತೆ, ಅಕ್ರಮ ಆಸ್ತಿಪಾಸ್ತಿ ಇತ್ಯಾದಿಗಳೆಲ್ಲವುಗಳ ಮುಟ್ಟುಗೋಲಿಗೆ ಸರ್ಕಾರ ಕಾರ್ಯಪಡೆ ರಚಿಸಬೇಕು. ನಮ್ಮ ದೇಶದ ಬಡಜನತೆಯನ್ನು ಬಡತನರೇಖೆಯಿಂದ ಮೇಲೆತ್ತಲು ಸರ್ಕಾರಗಳು ನೀಡುತ್ತಿರುವ ಉಚಿತ ರೇಷನ್, ಉಚಿತ ಬಸ್ ಪಾಸ್ ,ಉಚಿತ ಪೆನ್‌ಷನ್, ಉಚಿತ ಆಸ್ಪತ್ರೆ ಸೌಲಭ್ಯಗಳು ಸೇರಿದಂತೆ ಇನ್ನಿತರ ಜನಕಲ್ಯಾಣ ಯೋಜನೆಗಳ ಲಾಭಗಳನ್ನು ಅಕ್ರಮ ಬಾಂಗ್ಲಾವಲಸಿಗರು ಪಡೆಯುವುದನ್ನು ತಡೆಗಟ್ಟಬೇಕು. ಭಾರತೀಯರು ಕಟ್ಟುವ ತೆರಿಗೆ ಹಣದಿಂದ ಆರಂಭಿಸಿರುವ ಯೋಜನೆಗಳ ಲಾಭವನ್ನು ಅಕ್ರಮ ಬಾಂಗ್ಲಾ ವಲಸಿಗರು ದೋಚಲು ಅವಕಾಶ ನೀಡಬಾರದು. ಅದಕ್ಕಾಗಿ ಅಕ್ರಮ ಬಾಂಗ್ಲಾ ವಲಸಿಗರನ್ನು ಕೂಡಲೇ ಈ ದೇಶದಿಂದ ಹೊರಗಟ್ಟಬೇಕು. ಜಿಲ್ಲೆಯಲ್ಲಿರುವ ಕಾರ್ಮಿಕರ ಕೊರತೆಯನ್ನು ನೀಗಿಸಲು ಸರ್ಕಾರ ಕಾರ್ಮಿಕ ಇಲಾಖೆಯ ಮೂಲಕ ಕೊಡಗು ಹಾಗೂ ಜಿಲ್ಲೆಯ ಸುತ್ತಮುತ್ತಲಿನ ಜಿಲ್ಲೆಗಳು ಹಾಗೂ ವಿವಿಧ ರಾಜ್ಯಗಳ ಕಾರ್ಮಿಕ ಇಲಾಖೆಗಳೊಂದಿಗೆ ಸಮನ್ವಯತೆ ಸಾಧಿಸಿ ಅಲ್ಲಿನ ನಿರುದ್ಯೋಗಿ ಕಾರ್ಮಿಕರಿಗೆ ಕೊಡಗು ಜಿಲ್ಲೆಯ ವಿವಿಧ ಭಾಗಗಳ ಅಗತ್ಯಕ್ಕೆ ತಕ್ಕಂತೆ ಕಾರ್ಮಿಕರ ಪೂರೈಕೆ ಮಾಡಲು ವ್ಯವಸ್ಥಿತ ಯೋಜನೆ ರೂಪಿಸಬೇಕು ಎಂದರು.
ಮಾಜಿ ಸ್ಪೀಕರ್ ಕೆ.ಜಿ. ಬೋಪಯ್ಯ, ಜಿ.ಪಂ. ಮಾಜಿ ಅಧ್ಯಕ್ಷ ಶಾಂತೆಯAಡ ರವಿಕುಶಾಲಪ್ಪ, ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ, ಪ್ರಮುಖರಾದ ರಾಬಿನ್ ದೇವಯ್ಯ, ಆರ್.ಕೆ. ಚಂದ್ರ ಮತ್ತಿತರರು ಇದ್ದರು.
ಸಭಾ ಕಾರ್ಯಕ್ರಮಕ್ಕೂ ಮೊದಲು ಗಾಂಧಿ ಮೈದಾನದಿಂದ ಹಳೇ ಖಾಸಗಿ ಬಸ್ ನಿಲ್ದಾಣ ತನಕ ಜಾಗೃತಿ ಜಾಥಾ ನಡೆಯಿತು.