ವಿದೇಶಿ ಅತಿಥಿಗಳಿಲ್ಲದೆ ಕಳೆಗುಂದಿದ ಐತಿಹಾಸಿಕ ಕೆರೆ

ನೀರಿನಿಂದ ಕಂಗೊಳಿಸುತ್ತಿರುವ ಗುತ್ತಲ ಜಲಮೂಲ
A view of the historic 'Doddakere' (large lake) in Guttala.
ಗುತ್ತಲದ ಐತಿಹಾಸಿಕ ದೊಡ್ಡ ಕೆರೆಯ ದೃಶ್ಯ.
Published on: 

ಗುತ್ತಲ: ಪ್ರತಿವರ್ಷ ಚಳಿಗಾಲ ಆರಂಭವಾಗುತ್ತಿದ್ದಂತೆ ದೂರದ ದೇಶಗಳಿಂದ ಸಾವಿರಾರು ಕಿಲೋಮೀಟರ್ ಪ್ರಯಾಣಿಸಿ ಗುತ್ತಲದ ಐತಿಹಾಸಿಕ ದೊಡ್ಡ ಕೆರೆಗೆ ಆಗಮಿಸುತ್ತಿದ್ದ ವಿದೇಶಿ ಹಕ್ಕಿಗಳ ಕಲರವ ಈ ಬಾರಿ ಕೇಳಿಬರುತ್ತಿಲ್ಲ.

ಕೆರೆಯಲ್ಲಿ ಅಪಾರ ಪ್ರಮಾಣದ ನೀರು ಸಂಗ್ರಹವಾಗಿದ್ದರೂ, ನೀರಿನ ಮೇಲೆ ತೇಲಾಡುವ ಹಕ್ಕಿಗಳ ಸಾಲುಗಳಾಗಲಿ, ಕೆರೆಯ ಅಂಗಳದಲ್ಲಿ ಹಾರಾಡುವ ಪಕ್ಷಿಗಳ ಚಿಲಿಪಿಲಿಯಾಗಲಿ ಕಾಣಸಿಗುತ್ತಿಲ್ಲ. ಪರಿಣಾಮವಾಗಿ, ವಿಶಾಲ ಕೆರೆ ತುಂಬಿದ್ದರೂ ತನ್ನ ನೈಸರ್ಗಿಕ ಸೌಂದರ್ಯದ ಪ್ರಮುಖ ಆಕರ್ಷಣೆಯನ್ನೇ ಕಳೆದುಕೊಂಡಂತಾಗಿದೆ.

ಪ್ರತಿ ಚಳಿಗಾಲದಲ್ಲಿ ಗುತ್ತಲದ ದೊಡ್ಡ ಕೆರೆ ವಿದೇಶಿ ಪಕ್ಷಿಗಳಿಗೆ ತಾತ್ಕಾಲಿಕ ವಾಸಸ್ಥಾನವಾಗುತ್ತಿತ್ತು. ಬೆಳಗಿನ ಜಾವ ಕೆರೆಯ ಮೇಲೆ ಹಾರಾಡುವ ಹಾಗೂ ನೀರಿನಲ್ಲಿ ಗುಂಪುಗುಂಪಾಗಿ ಈಜಾಡುವ ಹಕ್ಕಿಗಳ ದೃಶ್ಯ ಸ್ಥಳೀಯರಿಗೆ, ಪಕ್ಷಿ ವೀಕ್ಷಕರಿಗೆ ಮತ್ತು ಛಾಯಾಗ್ರಾಹಕರಿಗೆ ಮನಮೋಹಕ ಅನುಭವ ನೀಡುತ್ತಿತ್ತು. ಆದರೆ, ಈ ಬಾರಿ ಕೆರೆ ಸಮೃದ್ಧವಾಗಿದ್ದರೂ ವಿದೇಶಿ ಹಕ್ಕಿಗಳ ಆಗಮನ ನಿರೀಕ್ಷಿತ ಮಟ್ಟದಲ್ಲಿಲ್ಲ. ಇದರಿಂದ ಕೆರೆಯ ಪರಿಸರದಲ್ಲಿನ ಬದಲಾವಣೆಗಳೇ ಪಕ್ಷಿಗಳ ವಲಸೆಗೆ ಅಡ್ಡಿಯಾಗಿವೆಯೇ ಅಥವಾ ಅವು ಬೇರೆಡೆಗೆ ಮುಖ ಮಾಡಿವೆಯೇ ಎಂಬ ಪ್ರಶ್ನೆ ಸ್ಥಳೀಯರಲ್ಲಿ ಮೂಡಿದೆ.

ಪಕ್ಷಿವಿಜ್ಞಾನಿಗಳ ಪ್ರಕಾರ, ವಲಸೆ ಹಕ್ಕಿಗಳು ಜಲಮೂಲಗಳನ್ನು ಆಯ್ಕೆ ಮಾಡಿಕೊಳ್ಳುವಾಗ ಕೇವಲ ನೀರಿನ ಪ್ರಮಾಣವನ್ನಷ್ಟೇ ಗಮನಿಸುವುದಿಲ್ಲ. ಬದಲಾಗಿ, ಅಲ್ಲಿ ದೊರೆಯುವ ಆಹಾರ (ಮೀನು, ಕೀಟಗಳು, ಜಲಚರಗಳು ಮತ್ತು ಜಲಸಸ್ಯಗಳು), ವಿಶ್ರಾಂತಿಗೆ ಅನುಕೂಲಕರ ವಾತಾವರಣ ಹಾಗೂ ಮಾನವ ಹಸ್ತಕ್ಷೇಪವಿಲ್ಲದ ಸುರಕ್ಷಿತ ನೆಲೆಯನ್ನೂ ಪರಿಗಣಿಸುತ್ತವೆ.

ಕೆರೆ ಸಂಪೂರ್ಣ ಭರ್ತಿಯಾಗಿದ್ದರೂ, ಆಳವಿಲ್ಲದ (ತಗ್ಗು) ನೀರಿನ ಪ್ರದೇಶಗಳು ಕಡಿಮೆಯಾದರೆ ಕೆಲವು ಜಾತಿಯ ಹಕ್ಕಿಗಳಿಗೆ ಆಹಾರ ಹುಡುಕುವುದು ಕಷ್ಟವಾಗುತ್ತದೆ. ಜತೆಗೆ, ಆಹಾರ ಸರಪಳಿಯಲ್ಲಿನ ವ್ಯತ್ಯಾಸ, ನೀರಿನ ಗುಣಮಟ್ಟ ಕುಸಿತ, ಜಲಸಸ್ಯಗಳ ನಾಶ, ಹೆಚ್ಚುತ್ತಿರುವ ಮಾನವ ಚಟುವಟಿಕೆ ಹಾಗೂ ಶಬ್ದ ಮಾಲಿನ್ಯವೂ ಹಕ್ಕಿಗಳ ವಾಸ್ತವ್ಯಕ್ಕೆ ಅಡ್ಡಿಯಾಗುವ ಸಾಧ್ಯತೆಯಿದೆ. ಇತ್ತೀಚಿನ ವರ್ಷಗಳಲ್ಲಿ ಗದಗ ಜಿಲ್ಲೆಯ ಮಾಗಡಿ ಕೆರೆ ಸೇರಿದಂತೆ ರಾಜ್ಯದ ಇತರ ಜಲಮೂಲಗಳಲ್ಲೂ ವಲಸೆ ಹಕ್ಕಿಗಳ ಆಗಮನದಲ್ಲಿ ಏರಿಳಿತ ಕಂಡುಬಂದಿದೆ.

ಎಲ್ಲಿಂದ ಹಕ್ಕಿಗಳು ಬರುತ್ತಿದ್ದವು?: ಚಳಿಗಾಲದಲ್ಲಿ ಉತ್ತರ ಗೋಳಾರ್ಧದ ಅತ್ಯಂತ ಶೀತ ಪ್ರದೇಶಗಳಾದ ಮಂಗೋಲಿಯಾ, ಸೈಬೀರಿಯಾ, ಮಧ್ಯ ಏಷ್ಯಾ, ಯುರೋಪ್ ಹಾಗೂ ಉತ್ತರ ಧ್ರುವ ಪ್ರದೇಶಗಳಿಂದ ಅನೇಕ ಜಾತಿಯ ಪಕ್ಷಿಗಳು ಆಹಾರ ಮತ್ತು ಬೆಚ್ಚಗಿನ ಹವಾಮಾನ ಅರಸಿ ಭಾರತಕ್ಕೆ ವಲಸೆ ಬರುತ್ತವೆ. ಉತ್ತರ ಕರ್ನಾಟಕದ ಮಾಗಡಿ ಕೆರೆ, ಹಾವೇರಿಯ ಹೆಗ್ಗೇರಿ, ಗುತ್ತಲದ ದೊಡ್ಡಕೆರೆ ಹಾಗೂ ಗಳಗನಾಥದ ವರದಾ-ತುಂಗಭದ್ರಾ ಸಂಗಮ ಪ್ರದೇಶ ಇವುಗಳ ಪ್ರಮುಖ ನೆಲೆಗಳಾಗಿವೆ. ಹಿಂದಿನ ವರ್ಷಗಳಲ್ಲಿ ಮಂಗೋಲಿಯಾದ `ಬಾರ್-ಹೆಡೆಡ್ ಗೂಸ್' ಸೇರಿದಂತೆ ಸಾವಿರಾರು ಪಕ್ಷಿಗಳು ಗುತ್ತಲ ಕೆರೆಗೆ ಬಂದು ತಿಂಗಳುಗಟ್ಟಲೆ ಬೀಡುಬಿಡುತ್ತಿದ್ದವು. ಈ ಬಾರಿ ಅವುಗಳ ಅನುಪಸ್ಥಿತಿಗೆ ನಿಖರ ಕಾರಣ ತಿಳಿಯಲು ವೈಜ್ಞಾನಿಕ ಅಧ್ಯಯನದ ಅಗತ್ಯವಿದೆ.

ತುರ್ತಾಗಿ ಆಗಬೇಕಿರುವ ಕ್ರಮಗಳೇನು?

ಗುತ್ತಲದ ದೊಡ್ಡ ಕೆರೆ ಕೇವಲ ನೀರಿನ ಸಂಗ್ರಹಾಗಾರವಲ್ಲ; ಅದು ಸ್ಥಳೀಯ ಜೀವವೈವಿಧ್ಯದ ಪ್ರಮುಖ ಭಾಗವಾಗಿದೆ. ಹಕ್ಕಿಗಳ ಸಂಖ್ಯೆ ಇಳಿಮುಖವಾಗಿರುವ ಕುರಿತು ಅರಣ್ಯ ಇಲಾಖೆ, ಪರಿಸರ ತಜ್ಞರು ಹಾಗೂ ಸಂಬಂಧಪಟ್ಟ ಅಽಕಾರಿಗಳು ಈ ಕೆಳಗಿನ ಕ್ರಮಗಳನ್ನು ಕೈಗೊಳ್ಳಬೇಕಿದೆ:

  • ಕಳೆದ ಐದು ವರ್ಷಗಳಲ್ಲಿ ಕೆರೆಗೆ ಆಗಮಿಸಿದ ವಲಸೆ ಹಕ್ಕಿಗಳ ಪ್ರಭೇದ ಮತ್ತು ಸಂಖ್ಯೆಯ ದತ್ತಾಂಶ ಸಂಗ್ರಹಿಸುವುದು.

  • ಕೆರೆಯ ನೀರಿನ ಗುಣಮಟ್ಟದ ವೈಜ್ಞಾನಿಕ ಪರೀಕ್ಷೆ ನಡೆಸುವುದು.

  • ಮೀನು, ಕೀಟಗಳು ಹಾಗೂ ಇತರ ಜಲಚರಗಳ ಲಭ್ಯತೆಯನ್ನು ಪರಿಶೀಲಿಸುವುದು.

  • ಕೆರೆಯ ಆಳ ಮತ್ತು ಆಳವಿಲ್ಲದ ಪ್ರದೇಶಗಳ ಸ್ಥಿತಿಗತಿ ಅಧ್ಯಯನ ಮಾಡುವುದು.

  • ಪಕ್ಷಿಗಳ ನೆಮ್ಮದಿಗೆ ಭಂಗ ತರುವ ಮಾನವ ಚಟುವಟಿಕೆ ಮತ್ತು ಮಾಲಿನ್ಯಕ್ಕೆ ಕಡಿವಾಣ ಹಾಕುವುದು.

  • ಪಕ್ಷಿ ವೀಕ್ಷಕರ ಸಹಕಾರದೊಂದಿಗೆ ನಿಯಮಿತವಾಗಿ ಪಕ್ಷಿ ಗಣತಿ ನಡೆಸುವುದು.

ಮರಳಲಿ ಹಕ್ಕಿಗಳ ಕಲರವ: ಐತಿಹಾಸಿಕ ಗುತ್ತಲ ಕೆರೆ ತನ್ನ ಗತವೈಭವವನ್ನು ಮರಳಿ ಪಡೆಯಬೇಕಾದರೆ, ಕೇವಲ ನೀರು ತುಂಬಿಸುವುದಷ್ಟೇ ಸಾಲದು; ಅದರ ನೈಸರ್ಗಿಕ ಪರಿಸರ ಮತ್ತು ಜೀವವೈವಿಧ್ಯವನ್ನೂ ಉಳಿಸಿಕೊಳ್ಳಬೇಕಿದೆ. ಈ ಬಾರಿ ಹಕ್ಕಿಗಳು ತಡವಾಗಿ ಬರುತ್ತಿವೆಯೇ ಅಥವಾ ವಲಸೆ ಮಾರ್ಗ ಬದಲಿಸಿವೆಯೇ ಎಂಬುದನ್ನು ಪತ್ತೆಹಚ್ಚಿ, ಕೆರೆಯನ್ನು ಮತ್ತೆ ವಲಸೆ ಹಕ್ಕಿಗಳ ಸ್ವರ್ಗವನ್ನಾಗಿಸಲು ಸಂಬಂಧಪಟ್ಟ ಇಲಾಖೆಗಳು ಹಾಗೂ ಪರಿಸರ ಪ್ರೇಮಿಗಳು ಕಾರ್ಯಪ್ರವೃತ್ತರಾಗಬೇಕಿದೆ.