

ಹಾವೇರಿ: ಗಣೇಶ ವಿಸರ್ಜನಾ ಮೆರವಣಿಗೆಯಲ್ಲಿ ಡಿಜೆ ಬಳಕೆಗೆ ಪೊಲೀಸರು ಅನುಮತಿ ನಿರಾಕರಿಸಿದ್ದರಿಂದ ಆಕ್ರೋಶಗೊಂಡ ಯುವಕರು, ಮೆರವಣಿಗೆಯನ್ನು ಅರ್ಧದಲ್ಲೇ ಸ್ಥಗಿತಗೊಳಿಸಿ ಗಣಪತಿ ಮೂರ್ತಿಯನ್ನು ವಾಪಸ್ ತಂದು ಮರುಪ್ರತಿಷ್ಠಾಪಿಸಿದ ಘಟನೆ ಹಿರೇಕೆರೂರು ತಾಲೂಕಿನ ಚಿಕ್ಕೇರೂರು ಗ್ರಾಮದಲ್ಲಿ ( Haveri News ) ನಡೆದಿದೆ.
ಚಿಕ್ಕೇರೂರು ಗ್ರಾಮದ ಬನಶಂಕರಿ ಗಜಾನನ ಯುವಕ ಸಂಘದ ವತಿಯಿಂದ ಪ್ರತಿಷ್ಠಾಪಿಸಲಾಗಿದ್ದ ಗಣೇಶ ಮೂರ್ತಿಯ ವಿಸರ್ಜನಾ ಮೆರವಣಿಗೆ ಸೋಮವಾರ ರಾತ್ರಿ ಆರಂಭವಾಗಿತ್ತು. ಈ ವೇಳೆ ಮೆರವಣಿಗೆಯಲ್ಲಿ ಡಿಜೆ ಬಳಸಲು ಪೊಲೀಸರು ಅವಕಾಶ ನಿರಾಕರಿಸಿದ್ದಾರೆ. ಇದರಿಂದ ಯುವಕ ಸಂಘದ ಸದಸ್ಯರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆದು, ಕೆಲಕಾಲ ವಾಗ್ವಾದ ನಡೆದಿದೆ.
ಮೆರವಣಿಗೆಯಲ್ಲಿ ಡಿಜೆ ಬಳಕೆಗೆ ಅನುಮತಿ ನೀಡಲೇಬೇಕು ಎಂದು ಸಂಘದ ಸದಸ್ಯರು ಪಟ್ಟು ಹಿಡಿದಿದ್ದಾರೆ. ಆದರೆ, ಪೊಲೀಸರಿಂದ ಅನುಮತಿ ದೊರೆಯದ ಹಿನ್ನೆಲೆಯಲ್ಲಿ ಸುಮಾರು 600 ಮೀಟರ್‌ವರೆಗೆ ಸಾಗಿದ್ದ ಮೆರವಣಿಗೆಯನ್ನು ಅಲ್ಲಿಯೇ ಸ್ಥಗಿತಗೊಳಿಸಲಾಯಿತು. ಬಳಿಕ ಗಣಪತಿ ಮೂರ್ತಿಯನ್ನು ವಾಪಸ್ ತೆಗೆದುಕೊಂಡು ಬಂದು ಮರುಪ್ರತಿಷ್ಠಾಪನೆ ಮಾಡಲಾಗಿದೆ.
ಡಿಜೆ ಬಳಕೆಗೆ ಅನುಮತಿ ನೀಡುವವರೆಗೆ ಗಣೇಶ ಮೂರ್ತಿಯ ವಿಸರ್ಜನೆ ಮಾಡುವುದಿಲ್ಲ ಎಂದು ಸಂಘದ ಸದಸ್ಯರು ಪಟ್ಟು ಹಿಡಿದಿದ್ದಾರೆ. ಅಲ್ಲದೆ, ಡಿಜೆ ನಿರ್ಬಂಧ ಮುಂದುವರಿಸಿದರೆ ಚಿಕ್ಕೇರೂರು ಬಂದ್‌ಗೆ ಕರೆ ನೀಡುವುದಾಗಿ ಎಚ್ಚರಿಕೆ ನೀಡಿದ್ದಾರೆ. ಌಈ ಘಟನೆ ಹಂಸಭಾವಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.