ಅಪಾಯದಲ್ಲಿವೆ ಗ್ರಾಪಂ ಆಡಳಿತ ಸೌಧ

ಸೋರುತ್ತಿರುವ ಚಾವಣಿ, ಬಿರುಕುಬಿಟ್ಟ ಗೋಡೆ
Iron rods are visible on the roof of the Gram Panchayat building in Kaduru village, Rattihalli taluk.
ರಟ್ಟಿಹಳ್ಳಿ ತಾಲೂಕಿನ ಕಡೂರು ಗ್ರಾಮದ ಗ್ರಾಪಂ ಕಟ್ಟಡದ ಮೇಲ್ಛಾವಣಿಯ ಕಬ್ಬಿಣದ ಸರಳುಗಳು ಕಾಣಿಸುತ್ತಿರುವುದು.
Published on: 

ರಟ್ಟಿಹಳ್ಳಿ: ಗ್ರಾಮೀಣ ಆಡಳಿತದ ಬೆನ್ನೆಲುಬಾಗಿರುವ ಗ್ರಾಮ ಪಂಚಾಯಿತಿ ಕೇಂದ್ರಗಳು ಹಳ್ಳಿಗಳ ಅಭಿವೃದ್ಧಿಯ ಹೃದಯ ಭಾಗವಿದ್ದಂತೆ. ಗ್ರಾಮದ ಸ್ವಚ್ಛತೆ, ಕುಡಿಯುವ ನೀರು, ರಸ್ತೆ, ಬೀದಿದೀಪ ಸೇರಿದಂತೆ ಸಾರ್ವಜನಿಕರಿಗೆ ಅಗತ್ಯವಿರುವ ಮೂಲಸೌಕರ್ಯಗಳು ಇಲ್ಲಿಂದಲೇ ಆರಂಭವಾಗುತ್ತವೆ. ಆದರೆ, ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿ ಕಟ್ಟಡಗಳು ತೀವ್ರ ದುಸ್ಥಿತಿಗೆ ತಲುಪಿರುವುದು ಸ್ಥಳೀಯರಲ್ಲಿ ಬೇಸರ ಮೂಡಿಸಿದ್ದು, ಸಿಬ್ಬಂದಿ ಜೀವ ಭಯದ ವಾತಾವರಣದಲ್ಲಿ ಕೆಲಸ ನಿರ್ವಹಿಸುವಂತಾಗಿದೆ.

ತಾಲೂಕಿನ ಕಡೂರು, ಕುಡುಪಲಿ, ಹಳ್ಳೂರು, ಮೇದೂರು, ಕಣವಿಸಿದ್ದಗೇರಿ ಮತ್ತು ಹಿರೇಕಬ್ಬಾರ ಗ್ರಾಪಂ ಕಟ್ಟಡಗಳು ಸಂಪೂರ್ಣ ಶಿಥಿಲಾವಸ್ಥೆಗೆ ತಲುಪಿವೆ. ಇನ್ನು ಕೆಲ ಕಟ್ಟಡಗಳು ಸ್ಥಳಾವಕಾಶದ ಕೊರತೆ ಹಾಗೂ ನಿವೇಶನದ ಸಮಸ್ಯೆ ಎದುರಿಸುತ್ತಿವೆ. ೩೦ ರಿಂದ ೪೦ ವರ್ಷಗಳಷ್ಟು ಹಳೆಯದಾದ ಈ ಕಟ್ಟಡಗಳ ಗೋಡೆಗಳು ಬಿರುಕು ಬಿಟ್ಟಿದ್ದು, ಮೇಲ್ಛಾವಣಿ ಕುಸಿಯುವ ಹಂತಕ್ಕೆ ತಲುಪಿ ಅಸ್ಥಿಪಂಜರದಂತೆ ಗೋಚರಿಸುತ್ತಿವೆ. ಸೋರುತ್ತಿರುವ ಹಳೆಯ ಕಟ್ಟಡಗಳನ್ನು ತೆರವುಗೊಳಿಸಿ ನೂತನ ಕಟ್ಟಡ ನಿರ್ಮಿಸಬೇಕು ಎಂಬುದು ಗ್ರಾಮಸ್ಥರ ಪ್ರಮುಖ ಆಗ್ರಹವಾಗಿದೆ.

೪೩ ವರ್ಷಗಳಷ್ಟು ಹಳೆಯದಾದ ಕಡೂರು ಗ್ರಾಪಂ ಕಟ್ಟಡದ ಮೇಲ್ಛಾವಣಿ ಸಿಮೆಂಟ್ ಬಹುತೇಕ ಕಿತ್ತುಹೋಗಿದೆ. ತುಕ್ಕು ಹಿಡಿದ ಕಬ್ಬಿಣದ ಸರಳುಗಳು ಹೊರಗೆ ಕಾಣುತ್ತಿದ್ದು, ಸಿಮೆಂಟ್ ಚಕ್ಕೆಗಳು ಆಗಾಗ ಕಳಚಿ ಬೀಳುತ್ತಿವೆ. ಕುಡುಪಲಿ ಗ್ರಾಪಂ ಕಟ್ಟಡವು ಸದ್ಯ ಶಿಥಿಲಾವಸ್ಥೆ ತಲುಪಿದೆ. ಕಟ್ಟಡ ಸೋರುತ್ತಿದ್ದ ಕಾರಣ ಮೇಲ್ಭಾಗದಲ್ಲಿ ಸಣ್ಣ ಪ್ರಮಾಣದ ಕೊಠಡಿ ನಿರ್ಮಿಸಲಾಗಿತ್ತು. ಆದರೀಗ ಅದೂ ಸೋರುತ್ತಿದ್ದು, ತಾತ್ಕಾಲಿಕವಾಗಿ ತಗಡಿನ ಶೀಟ್ ಅಳವಡಿಸಲಾಗಿದೆ. ಹಳ್ಳೂರು ಗ್ರಾಪಂ ಕಟ್ಟಡದ ಮೇಲ್ಛಾವಣಿಯೂ ಬಿರುಕು ಬಿಟ್ಟು ಕಬ್ಬಿಣದ ಸರಳುಗಳು ಕಾಣುತ್ತಿವೆ.

ಮೇದೂರು ಗ್ರಾಪಂ ಕಟ್ಟಡ ತೀರ ಶಿಥಿಲಗೊಂಡಿದ್ದರಿಂದ ಅದನ್ನು ಈಗಾಗಲೇ ತೆರವುಗೊಳಿಸಲಾಗಿದೆ. ಕಳೆದ ೩ ವರ್ಷಗಳಿಂದ ಮಾಸಿಕ ೪ ಸಾವಿರ ರೂ. ಬಾಡಿಗೆ ನೀಡಿ ಖಾಸಗಿ ಕಟ್ಟಡದಲ್ಲಿ ಕಚೇರಿ ಕಾರ್ಯನಿರ್ವಹಿಸುತ್ತಿದೆ. ನೂತನ ಕಟ್ಟಡ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗಿಲ್ಲ. ಹಿರೇಕಬ್ಬಾರ ಗ್ರಾಪಂ ಕಟ್ಟಡವು ಖಾಸಗಿ ಜಾಗದಲ್ಲಿ ನಿರ್ಮಾಣವಾಗಿದ್ದು, ನಿವೇಶನದ ಹಕ್ಕುಪತ್ರದ ಸಮಸ್ಯೆಯನ್ನು ಅಕಾರಿಗಳು ಬಗೆಹರಿಸಬೇಕಾಗಿದೆ.

ಅನುದಾನದ ಕೊರತೆ: ಗ್ರಾಪಂಗಳ ನೂತನ ಕಟ್ಟಡ ನಿರ್ಮಾಣಕ್ಕೆ ವಿಬಿ ಜಿ ರಾಮ್ ಜಿ ಯೋಜನೆಯಡಿ ೨೦ ಲಕ್ಷ ರೂ. ವರೆಗೆ ಅನುದಾನ ಅವಕಾಶವಿದೆ. ಸಂಬಂಧಪಟ್ಟ ಮೇಲಽಕಾರಿಗಳು ಈ ಬಗ್ಗೆ ಮುತುವರ್ಜಿ ವಹಿಸಿ ಕಟ್ಟಡಗಳ ನವೀಕರಣ ಹಾಗೂ ನೂತನ ಕಟ್ಟಡ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಕಡೂರು ಗ್ರಾಪಂ ಕಟ್ಟಡ ಅತ್ಯಂತ ಹಳೆಯದಾಗಿದ್ದು, ಸಂಪೂರ್ಣ ಶಿಥಿಲಾವಸ್ಥೆ ತಲುಪಿದೆ. ಇದನ್ನು ತೆರವುಗೊಳಿಸಿ ಹೊಸ ಕಟ್ಟಡ ನಿರ್ಮಿಸಬೇಕು. ಅಽಕಾರಿಗಳು ನಿರ್ಲಕ್ಷ್ಯ ವಹಿಸದೆ ತಾಲೂಕಿನ ಎಲ್ಲ ಗ್ರಾಪಂಗಳ ಹಳೆಯ ಕಟ್ಟಡಗಳನ್ನು ಪರಿಶೀಲಿಸಬೇಕು. ಜನಪ್ರತಿನಿಽಗಳು ಅನುದಾನ ಒದಗಿಸಿ ಹೊಸ ಕಟ್ಟಡ ನಿರ್ಮಾಣಕ್ಕೆ ಅನುವು ಮಾಡಿಕೊಡಬೇಕು.
ದೇವರಾಜ ನಾಗಣ್ಣನವರ, ಮಾಜಿ ಸದಸ್ಯ, ಕಡೂರು ಗ್ರಾಪಂ
ತಾಲೂಕಿನ ಕಡೂರು ಸೇರಿದಂತೆ ವಿವಿಧ ಗ್ರಾಮ ಪಂಚಾಯಿತಿ ಕಟ್ಟಡಗಳ ಸದೃಢತೆ ಪರಿಶೀಲಿಸಿ, ಬಳಿಕ ತೆರವುಗೊಳಿಸುವ ಕ್ರಮ ಕೈಗೊಳ್ಳಲಾಗುವುದು. ನೂತನ ಕಟ್ಟಡ ನಿರ್ಮಾಣ ಕುರಿತು ಮೇಲಽಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಜರುಗಿಸಲಾಗುವುದು.
ರವಿ ಎನ್., ತಾಪಂ ಇಒ ರಟ್ಟಿಹಳ್ಳಿ