ಉಜ್ಜಯಿನಿ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವ

ಇಂದು, ನಾಳೆ ಬೇಲೂರಿನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ
ಧರ್ಮಜಾಗೃತಿ ಮಹೋತ್ಸವ
ಬೇಲೂರಿನಲ್ಲಿ ನಡೆಯಲಿರುವ ಅಡ್ಡಪಲ್ಲಕ್ಕಿ ಮಹೋತ್ಸವ, ಇಷ್ಟಲಿಂಗ ಮಹಾಪೂಜೆ, ಧರ್ಮ ಜಾಗೃತಿ ಸಮಾವೇಶ, ಶಿವದೀಕ್ಷಾ ಕಾರ್ಯಕ್ರಮಕ್ಕೆ ವೇದಿಕೆ ನಿರ್ಮಾಣವಾಗಿರುವುದು.
Published on: 

ಬೇಲೂರು: ಪಂಚ ಪೀಠಗಳಲ್ಲಿ ಒಂದಾದ ಉಜ್ಜಯಿನಿ ಸದ್ಧರ್ಮ ಸಿಂಹಾಸನಾಧೀಶ್ವರ ಶ್ರೀ 1008 ಜಗದ್ಗುರು ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರ ಅಡ್ಡಪಲ್ಲಕ್ಕಿ ಮಹೋತ್ಸವ, ಇಷ್ಟಲಿಂಗ ಮಹಾಪೂಜೆ, ಧರ್ಮಜಾಗೃತಿ ಸಮಾವೇಶ, ಶಿವದೀಕ್ಷಾ, ಶ್ರೀ ವೀರಭದ್ರೇಶ್ವರರ ಜಯಂತ್ಯುತ್ಸವಕ್ಕೆ ಪಟ್ಟಣ ಸಿದ್ದಗೊಂಡಿದೆ.

ಸೆ.30 ರಿಂದ ಅಕ್ಟೋಬರ್ 1ರವರೆಗೆ ಪಟ್ಟಣದ ವೀರಶೈವ ಕಲ್ಯಾಣ ಮಂಟಪದಲ್ಲಿ ಜಗದ್ಗುರುಗಳ ಅಡಪಲ್ಲಕ್ಕಿ ಹಾಗೂ ಧರ್ಮಜಾಗೃತಿ ಮಹೋತ್ಸವ ನಡೆಯಲಿದ್ದು, ಬುಧವಾರ ಬೆಳಗ್ಗೆ 6 ಗಂಟೆಯಿಂದ ಗಂಗಾ ಪೂಜೆ, ಗೋಪೂಜೆ, ನಂದಾ ದೀಪಾರಾಧನೆ, ಮಹಾ ಸಂಕಲ್ಪ, ಗಣಪತಿ ಪೂಜೆ, ಸ್ವಸ್ತಿ ಪುಣ್ಯಾಹವಾಚನ, ನಾಂದಿ ಸಮಾರಾಧನೆ, ಪಂಚಗವ್ಯ ಪ್ರಾಶನ, ರಕ್ಷಾ ಬಂಧನ, 9.15ಕ್ಕೆ ಧರ್ಮ ಧ್ವಜಾರೋಹಣ, 10.30 ಗಂಟೆಗೆ ಅಂಕುರಾರೋಪಣ, ಮಂಟಪ ದೇವತಾ ಪ್ರತಿಷ್ಠೆ, ಪಂಚಕಲಶ, ಉಮಾಮಹೇಶ್ವರ ಕಲಶ ಆರಾಧನೆ, ದೀಕ್ಷಾಂಗ ಹೋಮ ನಡೆಯಲಿದೆ.

ಮಧ್ಯಾಹ್ನ 1 ಗಂಟೆಗೆ ಉಜ್ಜಯಿನಿ ಜಗದ್ಗುರುಗಳ ಆಗಮನ, ಪುರ ಪ್ರವೇಶದೊಂದಿಗೆ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವವು ಜಾನಪದ ಕಲಾತಂಡ, ಮಂಗಳವಾದ್ಯ, ಪೂರ್ಣ ಕುಂಭಗಳೊಂದಿಗೆ ಸ್ವಾಗತಿಸಲಾಗುವುದು. ಸಂಜೆ 6 ಗಂಟೆಗೆ ಧರ್ಮ ಜಾಗೃತಿ ಸಮಾವೇಶ ಜರುಗಲಿದೆ. ವೀರಶೈವ ಲಿಂಗಾಯತ ಜಂಗಮ ಪುರೋಹಿತ ಅರ್ಚಕರ ಕ್ಷೇಮಾಭಿವೃದ್ಧಿ ಟ್ರಸ್ಟ್ ಉದ್ಘಾಟನೆಗೊಳ್ಳಲಿದ್ದು, ನಂತರ ಧರ್ಮಜಾಗೃತಿ ಸಮಾವೇಶ ನಡೆಯಲಿದೆ.

ಅ.1ರಂದು ಬೆಳಗ್ಗೆ 4.30ಕ್ಕೆ ಗಂಟೆಗೆ ಶಿವದೀಕ್ಷಾ ವಟುಗಳಿಗೆ ಚಿಕ್ಕಮಗಳೂರು ಶಂಕರದೇವರ ಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರಿಂದ ಅಂಗ-ಲಿಂಗ ಸಂಸ್ಕಾರ ಮಂತ್ರೋಪದೇಶ, ಪಾದೋದಕ, ಪ್ರಸಾದ, ಶುಭಾಶೀರ್ವಾದವಿದೆ. 8 ಗಂಟೆಯಿಂದ ಉಜ್ಜಯಿನಿ ಜಗದ್ಗುರುಗಳ ಇಷ್ಟಲಿಂಗ ಮಹಾಪೂಜೆ, ಶಿವಾಚಾರ್ಯರಿಂದ ಧರ್ಮೋಪದೇಶ, ಶುಭಾಶೀರ್ವಾದ ಸಂದೇಶವಿದೆ. ಕಾರ್ಯಕ್ರಮವನ್ನು ಯಶಸ್ವಿಯಾಗಿ ನೆರವೇರಿಸಲು ಎಲ್ಲ ಸಿದ್ಧತೆಯನ್ನು ಜಯಂತ್ಯುತ್ಸವ ಹಾಗೂ ಪ್ರಚಾರ ಸಮಿತಿ ಕೈಗೊಂಡಿದೆ.

ಬೇಲೂರಿನಲ್ಲಿ ಇದೇ ಪ್ರಥಮ ಬಾರಿಗೆ ಶ್ರೀ 1008 ಜಗದ್ಗುರು ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರ ಅಡ್ಡಪಲ್ಲಕ್ಕಿ ಮಹೋತ್ಸವ, ಇಷ್ಟಲಿಂಗ ಮಹಾಪೂಜೆ, ಧರ್ಮಜಾಗೃತಿ ಸಮಾವೇಶ ನಡೆಯುತ್ತಿರುವುದು ಸಂತಸ. ಭಕ್ತರು ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ಉದ್ಯಮಿ ಬಿ.ಪಿ.ಮಂಜುನಾಥ್ ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net