sheep: ಕುರಿಗಳಿಗೆ ಆಹಾರ, ನೀರಿನ ‘ಬರ’

ಗಜೇಂದ್ರಗಡ ತಾಲೂಕಿನ ಶಾಂತಗೇರಿ ಗ್ರಾಮದಲ್ಲಿ ಆಹಾರ ಅರಸಿ ಹೊರಟಿರುವ ಕುರಿಗಳು.
ಗಜೇಂದ್ರಗಡ ತಾಲೂಕಿನ ಶಾಂತಗೇರಿ ಗ್ರಾಮದಲ್ಲಿ ಆಹಾರ ಅರಸಿ ಹೊರಟಿರುವ ಕುರಿಗಳು.
Published on

ಪ್ರಮುಖ ಮುಖ್ಯಾಂಶಗಳು

  • ಕೈಕೊಟ್ಟ ಮುಂಗಾರು ಮಳೆ
  • ಬತ್ತಿದ ಕೆರೆ, ಹೊಂಡಗಳು ಆತಂಕದಲ್ಲಿ ಕುರಿಗಾಹಿಗಳು
  • ನೀರಿಗಾಗಿ ಕಿಲೋಮೀಟರ್‌ಗಟ್ಟಲೆ ಅಲೆದಾಡುವ
ಮಂಜುನಾಥ ಕುದರಿಕೋಟಿ ಗಜೇಂದ್ರಗಡ
ತಾಲೂಕಿನಲ್ಲಿ ಮಳೆ ಕೊರತೆಯಿಂದಾಗಿ ಕೃಷಿ ಹೊಂಡಗಳು, ಹಳ್ಳಗಳು ಹಾಗೂ ಕೆರೆಗಳು ಬತ್ತಿಹೋಗಿದ್ದು, ಕುರಿಗಾಹಿಗಳ ಬದುಕು ಸಂಕಷ್ಟಕ್ಕೆ ಸಿಲುಕಿದೆ.
ಮುಂಗಾರು ಸಮಯದಲ್ಲಿ ದೂರದ ಊರುಗಳಿಂದ ಸಾವಿರಾರು ಕುರಿಗಳು (sheep) ಈ ಭಾಗಕ್ಕೆ ಆಗಮಿಸುತ್ತವೆ. ಸಾಮಾನ್ಯವಾಗಿ ಸುಮಾರು ಒಂದರಿಂದ ಎರಡು ತಿಂಗಳ ಕಾಲ ಹೆಸರು ಬೆಳೆಯನ್ನು ಅವಲಂಬಿಸಿ ಕುರಿಗಾಹಿಗಳು ತಮ್ಮ ಜೀವನ ಸಾಗಿಸುತ್ತಾರೆ. ಆದರೆ ಈ ಬಾರಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ ಪರಿಣಾಮ ಕೃಷಿ ಹೊಂಡಗಳು ಹಾಗೂ ಜಲಮೂಲಗಳು ಬತ್ತಿಹೋಗಿವೆ. ಇದರಿಂದ ಕುರಿ-ಮೇಕೆಗಳಿಗೆ ಕುಡಿಯುವ ನೀರು ಹಾಗೂ ಆಹಾರ ಒದಗಿಸುವುದು ಕುರಿಗಾಹಿಗಳಿಗೆ ದೊಡ್ಡ ಸವಾಲಾಗಿದೆ.
ಜತೆಗೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಬಿಸಿಲಿನ ತಾಪದಿಂದ ಕುರಿ-ಮೇಕೆಗಳು ನೀರು ಮತ್ತು ಮೇವಿಗಾಗಿ ಪರದಾಡುವಂತಾಗಿದೆ. ಜತೆಗೆ ಆರೋಗ್ಯ ಸಮಸ್ಯೆಗಳು ಹೆಚ್ಚುತ್ತಿದ್ದು, ಗರ್ಭಿಣಿ ಕುರಿಗಳಲ್ಲಿ ಗರ್ಭಪಾತ ಹೆಚ್ಚುತ್ತಿವೆ. ಮರಿ ಹಾಕಿದ ಕುರಿಗಳಲ್ಲಿ ಹಾಲಿನ ಉತ್ಪಾದನೆಯು ಕ್ಷೀಣಿಸುತ್ತಿದ್ದು ಕುರಿಗಾಹಿಗಳ ಆತಂಕಕ್ಕೆ ಕಾರಣವಾಗಿದೆ. ಜಾನುವಾರುಗಳ ಮೇಲೂ ಬಿಸಿಲಿನ ತೀವ್ರ ಪರಿಣಾಮ ಕಂಡುಬರುತ್ತಿದ್ದು ಕುರಿ, ಮೇಕೆಗಳು ನೆರಳಿನಲ್ಲಿಯೇ ಆಶ್ರಮ ಪಡೆಯುತ್ತಿವೆ. ದೂರದ ಪ್ರದೇಶಗಳಿಗೆ ಕುರಿಗಳನ್ನು ಕರೆದೊಯ್ದು ನೀರು ಮತ್ತು ಆಹಾರ ಹುಡುಕಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು, ಕುರಿಗಾಹಿಗಳ ಶ್ರಮ ಹಾಗೂ ಆರ್ಥಿಕ ಹೊರೆಯೂ ಹೆಚ್ಚಾಗಿದೆ.
ಮಳೆ ಕೊರತೆಯಿಂದ ಉಂಟಾಗಿರುವ ಈ ಸಂಕಷ್ಟದಿಂದ ಕುರಿಗಾಹಿಗಳನ್ನು ಹಾಗೂ ಅವರ ಜಾನುವಾರುಗಳನ್ನು ರಕ್ಷಿಸಲು ಕುಡಿಯುವ ನೀರು, ಮೇವು ಮತ್ತು ಅಗತ್ಯ ಪಶುವೈದ್ಯಕೀಯ ಸೇವೆಗಳನ್ನು ತುರ್ತಾಗಿ ಒದಗಿಸಬೇಕು ಎಂಬುದು ಕುರಿಗಾಹಿಗಳ ಆಗ್ರಹವಾಗಿದೆ.
"

ನಾವು 2-3 ತಿಂಗಳವರೆಗೆ ಈ ಪ್ರದೇಶದಲ್ಲಿ ನೂರಾರು ಕುರಿಗಳನ್ನು ಮೇಯಿಸಿಕೊಂಡು ಜೀವನ ಸಾಗಿಸುತ್ತೇವೆ. ಪ್ರತಿ ವರ್ಷ ನಮಗೆ ಯಾವುದೇ ತೊಂದರೆ ಇರದೇ ಕುರಿಗಳಿಗೆ ಆಹಾರ ಮತ್ತು ನೀರು ಇರುತ್ತಿತ್ತು. ಆದರೆ, ಈ ವರ್ಷ ಬರಗಾಲ ಇರುವುದರಿಂದ ಕೆರೆ ಕಟ್ಟೆಗಳು ಬತ್ತಿವೆ. ನೀರಿಗಾಗಿ ಕಿಲೋಮೀಟರ್‌ಗಟ್ಟಲೆ ಹುಡುಕುತ್ತ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಸ್ಥಳೀಯರು ಸಂಬಂಧ ಪಟ್ಟ ಅಧಿಕಾರಿಗಳು ಕುರಿಗಳಿಗೆ ಆಹಾರ ಹಾಗೂ ನೀರಿನ ತೊಟ್ಟಿಗಳನ್ನು ಒದಗಿಸಿ ಕುರಿಗಾಹಿಳಿಗೆ ನೆರವಾಗಬೇಕು.

— ಶೇಖಪ್ಪ ಮಾಲಿಪಾಟೀಲ, ನಿಪ್ಪಾಣಿ ಕುರಿಗಾಹಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net