ಡಿಸೆಂಬರ್ ಮೊದಲ ವಾರದಲ್ಲಿ ರೈತರ ಖಾತೆಗೆ 5000 ರೂ: ಸಚಿವ ಬಸವರಾಜ ರಾಯರಡ್ಡಿ

Gadag KDP Meeting
Published on: 

ಗದಗ: ಜಿಲ್ಲೆಯ 1.79 ಲಕ್ಷ ರೈತರಿಗೆ ಬರ ಪರಿಹಾರವಾಗಿ ಪ್ರತಿ ರೈತರ ಖಾತೆಗೆ 5000 ರೂ. ಜಮೆ ಮಾಡಲು ಸಿದ್ಧತೆ ನಡೆದಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ರಾಯರಡ್ಡಿ ಹೇಳಿದರು.

ಜಿಲ್ಲಾಡಳಿತ ಭವನದಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಚಿವರು, ಮೊದಲ ಹಂತವಾಗಿ ಜಿಲ್ಲೆಯ 59 ಸಾವಿರ ರೈತರ ಖಾತೆಗೆ 2500 ಪರಿಹಾರ ಜಮೆ ಆಗಿದೆ. ಡಿಸೆಂಬರ್ ಒಳಗಾಗಿ ಇನ್ನೂಳಿದ ಪರಿಹಾರ ಮೊತ್ತ ರೈತರ ಖಾತೆಗೆ ಜಮೆ ಮಾಡಲಾಗುವುದು ಎಂದು ತಿಳಿಸಿದರು.

ರಾಜ್ಯದಲ್ಲಿ ಬರದಿಂದಾಗಿ 60 ಸಾವಿರ ಕೋಟಿ ರೂ. ನಷ್ಟವಾಗಿದೆ. ಕೇಂದ್ರ ಸರ್ಕಾರವು ಎನ್ ಡಿ ಆರ್ ಎಫ್ ಮೂಲಕ ಬೆಳೆ ಪರಿಹಾರವನ್ನು ಆದಷ್ಟು ಬೇಗ ಬಿಡುಗಡೆ ಮಾಡುವಂತೆ ಆಗ್ರಹಿಸುತ್ತೇನೆ ಎಂದು ತಿಳಿಸಿದರು.


ಶಾಸಕ ಎಚ್.ಕೆ. ಪಾಟೀಲ ಮಾತನಾಡಿ, 2025-26 ನೇ ಸಾಲಿನ ಹಿಂಗಾರು ಹಂಗಾಮಿನ ಬೆಳೆ ವಿಮೆ ಪರಿಹಾರ ವಿತರಣೆಯಲ್ಲಿ ಗೊಂದಲ ಸೃಷ್ಟಿಯಾಗಿದೆ. ಗದಗ ಮುಂಡರಗಿ ಮತ್ತು ರೋಣ ತಾಲೂಕಿಗೆ ಇನ್ನೂ ಬೆಳೆ ವಿಮೆ ಪರಿಹಾರವೇ ಬಂದಿಲ್ಲ. ಬೆಳೆ ವಿಮೆ ಪರಿಹಾರ ಬಿಡುಗಡೆಗೆ ಉಸ್ತುವಾರಿ ಸಚಿವ ಬಸವರಾಜ ರಾಯರೆಡ್ಡಿ ಗಮನ ಹರಿಸಬೇಕು ಎಂದರು.

ಕೃಷಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿ 2025-26 ನೇ ಸಾಲಿನ ಹಿಂಗಾರು ಹಂಗಾಮಿನ ಬೆಳೆ ವಿಮೆ ಪರಿಹಾರದ 183 ಕೋಟಿ ರೂ. ನಲ್ಲಿ ಈ ವರೆಗೆ 50.8 ಕೋಟಿ ಮಾತ್ರ ಬಿಡುಗಡೆ ಆಗಿದೆ ಎಂದು ಮಾಹಿತಿ ನೀಡಿದರು. ಬರ ನಿರ್ವಹಣೆಗೆ ಅಂದಾಜು 30 ಕೋಟಿ ರೂ. ಜಿಲ್ಲೆಯ ಪಿಡಿ ಖಾತೆಗಳಲ್ಲಿ ಇರುವುದಾಗಿ ಜಿಲ್ಲಾಧಿಕಾರಿಗಳು ತಿಳಿಸಿದರು.

ಪಿಯು ಶಿಕ್ಷಣ ವ್ಯವಸ್ಥೆ ಸುಧಾರಿಸಿ:
ಶಾಸಕ ಎಸ್.ವಿ. ಸಂಕನೂರು ಮಾತನಾಡಿ, ಪಿಯು ಕಾಲೇಜಿನ ಫಲಿತಾಂಶದಲ್ಲಿ ಜಿಲ್ಲೆ ಕಳಪೆ ಗುಣಮಟ್ಟ ಸಾಧಿಸಿದೆ. ಕಳೆದ ಬಾರಿ ಸಭೆಯಲ್ಲಿ ಸೂಚಿಸಿದ ಅಂಶಗಳನ್ನು ಯಾವುದನ್ನು ಪಾಲಿಸಿಲ್ಲ. ಕಳಪೆ ಗುಣಮಟ್ಟದ ಪಿಯು ಕಾಲೇಜಗಳನ್ನು ಗುರುತಿಸಿ ಫಲಿತಾಂಶ ಉತ್ತಮಗೊಳಿಸಲು ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಫಲಿತಾಂಶ ಉತ್ತಮಗೊಳಿಸಲು 14 ಅಂಶಗಳ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಸಮಜಾಯಿಷಿ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಎಸ್ ವಿ ಸಂಕನೂರು ಅವರು ನಿಮ್ಮ ತರಬೇತಿ ಶಿಬಿರಗಳು ಪ್ರಯೋಜಕ್ಕೆ ಬಂದಿಲ್ಲ ಎಂದು ಹೇಳಿದರು.

ಈ ವೇಳೆ ಮಧ್ಯ ಪ್ರವೇಶಿಸಿದ ವಿಧಾನ ಸಭೆಯ ಸಭಾಧ್ಯಕ್ಷ ಜಿ.ಎಸ್. ಪಾಟೀಲ, ಜಿಲ್ಲೆಯಲ್ಲಿ ಸರ್ಕಾರಿ, ಅನುದಾನಿತ, ಅನುದಾನಿತ ಕಾಲೇಜುಗಳ ಪಟ್ಟಿ ಮಾಡಿ ಫಲಿತಾಂಶದಲ್ಲಿ ಅವುಗಳ ಸಾಧನೆಯ ವರದಿ ಸಲ್ಲಿಸುವಂತೆ ಸೂಚಿಸಿಸರು.

ಪಿಯು ಕಾಲೇಜಿನ ಫಲಿತಾಂಶ ಬಗ್ಗೆ ಶಾಸಕ ಎಚ್.ಕೆ. ಪಾಟೀಲ ಮಾತನಾಡಿ, ಪಿಯು ಫಲಿತಾಂಶದಲ್ಲಿ ಸಾಧನೆ ಮಾಡಿದ ಕಾಲೇಜುಗಳಲ್ಲಿ ಎನೆಲ್ಲ ಕ್ರಮಗಳನ್ನು ಕೈಗೊಂಡಿದ್ದಾರೆ ಎಂಬುದರ ಬಗ್ಗೆ ಪ್ರಯೋಗಾತ್ಮಕ ಅಂಶಗಳನ್ನು ಪರಿಶೀಲಿಸಿ, ಕಳಪೆ ಸಾಧನೆ ಮಾಡಿದ ಕಾಲೇಜುಗಳಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸೂಚಿಸಿದರು. ಪಿಯು ಕಾಲೇಜಿನಲ್ಲಿ ಖಾಲಿ ಹುದ್ದೆಗಳನ್ನು ಅತಿಥಿ ಶಿಕ್ಷಕರನ್ನು ನೇಮಿಸಿ ಭರ್ತಿ ಮಾಡಿಕೊಳ್ಳಬೇಕು ಎಂದು ಸೂಚಿಸಿದರು.

ಗಂಗಾ ಕಲ್ಯಾಣ ಯೋಜನೆ:
ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆ ಬಾವಿ ಹಾಕಿಸಿಕೊಂಡ ಫಲಾನುಭವಿಗಳಿಗೆ ಟಿಸಿ ಹಾಕುವುದಿಲ್ಲ. ಆದರೆ, ಖಾಸಗಿ ವ್ಯಕ್ತಿಗಳು, ಯೋಜನೆಯೇತರರು ಕೊಳವೆ ಬಾವಿ ಹಾಕಿಸಿಕೊಳ್ಳುವರಿಗೆ ಟಿಸಿ ಅಳವಡಿಸಲು ತುರ್ತಾಗಿ ಅಂದಾಜು ಪಟ್ಟಿ ತಯಾರಿಸಿ ಟಿಸಿ ಹಾಕಿ ಕೊಡುತ್ತೀರಿ ಎಂದು ಶಾಸಕ ಚಂದ್ರು ಲಮಾಣಿ ಆರೋಪಿಸಿದರು. ಈ ವೇಳೆ ಶಾಸಕ ಎಚ್.ಕೆ. ಪಾಟೀಲ ಮಧ್ಯಪ್ರವೇಶಸಿ, ಗಂಗಾ ಕಲ್ಯಾಣ ಯೋಜನೆ ಯಶಸ್ವಿ ಯೋಜನೆ ಆಗಿದೆ. ಈ ಫಲಾನುಭವಿಗಳಿಗೆ ಅನ್ಯಾಯ ಆಗಬಾರದು. ಎರಡು ಮೂರು ದಿನಗಳ ಒಳಗಾಗಿ ಎಲ್ಲರಿಗೂ ಟಿಸಿ ಹಾಕಿಸಿಕೊಡಬೇಕು ಎಂದು ನಿರ್ದೇಶನ ನೀಡಿದರು.

ಗದಗ ನಗರದ ನೀರಿನ ಸಮಸ್ಯೆ ಬಗೆ ಹರಿಸಿ:
ಗದಗ ನಗರಕ್ಕೆ ನೀರು ಪೂರೈಕೆ ಸಮಸ್ಯೆ ಕುರಿತು ಚರ್ಚೆ ಆಯಿತು. 8 ರಿಂದ 10 ದಿನಗಳಿಗೆ ನೀರು ಪೂರೈಸಲಾಗುತ್ತಿದೆ ಎಂದು ನಗರಸಭೆ ಪೌರಾಯುಕ್ತರು ಮಾಹಿತಿ ನೀಡಿದರು. ಪ್ರತಿ ವಾರ್ಡಗಳಿಗೆ 15 ದಿನಕ್ಕಿಂತಲೂ ಅಧಿಕ ದಿನಗಳಿಗೆ ನೀರು ಪೂರೈಕೆ ಆಗುತ್ತಿದೆ ಎಂದು ಎಸ್. ವಿ. ಸಂಕನೂರು ಪ್ರತಿಕ್ರಿಯಿಸಿದರು. ಸಿಂಗಟಾಲೂರು ಬ್ಯಾರೇಜ್ ನಲ್ಲಿ ಪ್ರಸ್ತುತ 1.98 ಟಿಎಂಸಿ ನೀರಿದೆ. ಭದ್ರ ಡ್ಯಾಂ ನಿಂದ ಸಿಂಗಟಾಲೂರು ಬ್ಯಾರೇಜ್ ಗೆ ನೀರು ಬಿಡುಲು ಸರ್ಕಾರಕ್ಕೆ ಒತ್ತಾಯಿಸಲಾಗುವುದು ಎಂದು ಶಾಸಕ ಎಚ್.ಕೆ. ಪಾಟೀಲ ಹೇಳಿದರು. ನೀರಿನ ಟ್ಯಾಂಕರ್ ಪೂರೈಕೆ ಮಾಡಬೇಕು ಎಂದು ನಿರ್ದೇಶನ ನೀಡಿದರು.

ಸಭೆಯಲ್ಲಿ ಶಾಸಕ‌ ಡಾ.‌ಚಂದ್ರು ಲಮಾಣಿ, ಎಸ್ ವಿ ಸಂಕನೂರ, ಬಿಬಿ ಅಸೂಟಿ, ಅಕ್ಬರ್ ಸಾಬ ಬಬರ್ಚಿ, ಜಿಲ್ಲಾಧಿಕಾರಿ ಸಿ ಎನ್ ಶ್ರೀಧರ, ಜಿಪಂ ಸಿಇಓ ಮುಕುಲ್ ಜೈನ್, ಎಸ್ಪಿ ಮಿಥುನ್ ಎಚ್ ಎನ್, ಡಿಸಿಎಪ್ ಸಂತೋಷ ಕುಮಾರ, ಎಡಿಸಿ ಡಾ. ದುರುಗೇಶ್ ಕೆ ಆರ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.



ಕೆಡೆಪಿ ಸೂಚನೆಗಳು
* ಸಮಾಜಕಲ್ಯಾಣ ಇಲಾಖೆಯಿಂದ ಸಲ್ಲಿಸಿದ ಹೆಚ್ಚುವರಿ ವಸತಿ ನಿಲಯ ಪ್ರಸ್ತಾವನೆಗಳಿಗೆ ಮತ್ತೊಮ್ಮೆ ಪ್ರಸ್ತಾವನೆ ಸಲ್ಲಿಸಬೇಕು.
* ಬರ ಹಿನ್ನೆಲೆ ಗೋಶಾಲೆ ನಿರ್ಮಿಸಲು ಜಿಲ್ಲಾ ಉಸ್ತುವಾರಿ ಸಚಿವರ ಸೂಚನೆ
* ಜಿಲ್ಲೆಯ ಅಧಿಕ ವಿದ್ಯುತ್ ಉತ್ಪಾದನೆ ಆಗುತ್ತಿದೆ. ಅದಕ್ಕಾಗಿ ಜಿಲ್ಲೆಯಲ್ಲಿ ವಿದ್ಯುತ್ ವ್ಯತ್ಯಯ ಮಾಡದಂತೆ ಕೆಡಿಪಿ ಸಭೆಯಲ್ಲಿ ಠರಾವು ನಿರ್ಣಯಿಸಿ ಸರ್ಕಾರಕ್ಕೆ ಒತ್ತಾಯಿಸುವ ನಿರ್ಣಯ ಕೈಗೊಳ್ಳಲು ತೀರ್ಮಾನಿಸಲಾಯಿತು.
* ಗಂಗಾ ಕಲ್ಯಾಣ ಯೋಜನೆಯಡಿ ಕೊಳೆವೆ ಬಾವಿ ಫಲಾನುಭವಿಗಳಿಗೆ ಟಿಸಿ ಕಡ್ಡಾಯ ಹಾಕಿ ವಿದ್ಯುತ್ ನೀಡಲು ನಿರ್ದೇಶನ.
* ಗಂಗಾ ಕಲ್ಯಾಣ ಯೋಜನೆಯಡಿ ಕೊರೆದ ಕೊಳವೆ ಬಾವಿಗೆ ಮೆಟಿರಿಯಲ್ ಹಣ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಒತ್ತಾಯಿಸಲು ತೀರ್ಮಾನ.
* ಕುಡಿಯುವ ನೀರಿಗೆ ಬಿಡುಗಡೆ ಆದ 21 ಕೋಟಿ ವಿಶೇಷ ಅನುದಾನವನ್ನು (importing reservoir) ಕೂಡಲೆ ಬಳಸಲು ಆಡಳಿತಾತ್ಮಕ ಕ್ರಮ ಕೈಕೊಳ್ಳಲು ಇಲಾಖೆಗೆ ಸೂಚನೆ