ಮನೆಯಿಂದ ಹೊರಗೆ ಕಾಲಿಟ್ರೆ ಸಿಕ್ಕಿಬೀಳೋದು ಗ್ಯಾರೆಂಟಿ: ಕಮಿಷನರ್ ಭಾಸ್ಕರ್ ರಾವ್ ನೋಡ್ತಿದ್ದಾರೆ ಹುಷಾರ್!

drone new
Published on

ಬೆಂಗಳೂರು: ಕರೊನಾ ಹರಡುವುದನ್ನು ತಡೆಯಲು ದೇಶಾದ್ಯಂತ ಲಾಕ್​ಡೌನ್ ಘೊಷಿಸಿದರೂ ರಾಜಧಾನಿ ಬೆಂಗಳೂರಿನಲ್ಲಿ ಮಾತ್ರ ಜನರ ಓಡಾಟ ಹೆಚ್ಚಾಗುತ್ತಿದೆ. ಎಲ್ಲೆಂದರಲ್ಲಿ ಓಡಾಡುವರನ್ನು ಪತ್ತೆ ಹಚ್ಚಲು ಪೊಲೀಸರು ಡ್ರೋನ್ ಕ್ಯಾಮರಾ ಮೊರೆ ಹೋಗಿದ್ದಾರೆ. ಅನಗತ್ಯವಾಗಿ ಓಡಾಡುತ್ತಿದ್ದರೆ ಪೊಲೀಸರ ಕೈಗೆ ನೀವು ಸಿಕ್ಕಿಬೀಳುವುದು ನಿಶ್ಚಿತ.

ಸಾರ್ವಜನಿಕರಿಗೆ ಎಚ್ಚರಿಕೆ ಸಂದೇಶ ರವಾನಿಸಲು ಹಾಗೂ ನಗರದಲ್ಲಿ ಜನ ಹೊರಗೆ ಬರುವುದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ನಗರ ಪೊಲೀಸ್ ಇಲಾಖೆ ಸಹಯೋಗದಲ್ಲಿ ಭಾರತೀಯ ವಿಜ್ಞಾನ ಸಂಸ್ಥೆ ವಿಶೇಷ ಡ್ರೋನ್ ಅಭಿವೃದ್ಧಿಪಡಿಸಿದೆ. ಈ ಡ್ರೋನ್ ಕ್ಯಾಮರಾ ಕಾರ್ಯಾಚರಣೆಗೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಮಂಗಳವಾರ ಚಾಲನೆ ನೀಡಿದರು.

ಡ್ರೋನ್ ವಿಶೇಷತೆ ಏನು?: 3 ಕೆ.ಜಿ ತೂಕವಿರುವ ಡ್ರೋನ್​ಗೆ ಜಿಪಿಎಸ್ ಅಳವಡಿಸಲಾಗಿದೆ. ವಿಶೇಷ ಕ್ಯಾಮರಾ ಜತೆಗೆ ಹೊಯ್ಸಳ ಧ್ವನಿಪೆಟ್ಟಿಗೆಯನ್ನು ಇದರಲ್ಲಿ ಜೋಡಿಸಲಾಗಿದೆ. ಒಂದೂವರೆ ಕಿ.ಮೀ ವ್ಯಾಪ್ತಿಯವರೆಗೂ ಡ್ರೋನ್ ಸುತ್ತಾಡಲಿದ್ದು, ಜನ ಗುಂಪುಗೂಡಿರುವ ಪ್ರದೇಶಗಳ ದೃಶ್ಯಾವಳಿ ಸೆರೆ ಹಿಡಿದು ಪೊಲೀಸರಿಗೆ ಸಂದೇಶ ರವಾನಿಸುತ್ತದೆ. ಇದರ ಸಹಾಯದಿಂದ ಒಂದೇ ಪ್ರದೇಶದಲ್ಲಿ ಕುಳಿತುಕೊಂಡು ಪೊಲೀಸ್ ಸಿಬ್ಬಂದಿ ಒಂದೂವರೆ ಕಿ.ಮೀ ವ್ಯಾಪ್ತಿಯ ಜಾಗದ ಮೇಲೆ ನಿಗಾ ಇಡಬಹುದು. ಜತೆಗೆ ಪೊಲೀಸರು ಕುಳಿತ ಜಾಗದಿಂದಲೇ ಮೈಕ್ ಮೂಲಕ ಜನರಿಗೆ

ಎಚ್ಚರಿಕೆ ಸಂದೇಶವನ್ನೂ ರವಾನಿಸಬಹುದಾಗಿದೆ. ಪೊಲೀಸರು ಡ್ರೋನ್ ಮೂಲಕವೇ ಸಾರ್ವಜನಿಕರಿಗೆ ಕರೊನಾ ಬಗ್ಗೆ ಸಲಹೆ ಸೂಚನೆಗಳನ್ನು ನೀಡಲು ಮುಂದಾಗಿದ್ದಾರೆ. ಸದ್ಯ ಈ ಡ್ರೋನ್ ಅನ್ನು ಐಐಎಸ್​ಸಿ ಸಿಬ್ಬಂದಿ ನಿರ್ವಹಿಸಲಿದ್ದಾರೆ. ಪೊಲೀಸರ ಕಣ್ತಪ್ಪಿಸಿ ಎಲ್ಲೆಂದರಲ್ಲಿ ಓಡಾಡುವವರು, ಗುಂಪಾಗಿ ಕುಳಿತುಕೊಂಡು ಹರಟೆ ಹೊಡೆಯುವವರು ಇನ್ನು ಎಚ್ಚರಾಗಿರುವುದು ಉತ್ತಮ.

ನಗರದ 109 ಠಾಣೆಗಳ ವ್ಯಾಪ್ತಿಗೆ ವಿಸ್ತರಿಸಲು ಚಿಂತನೆ: ಪ್ರಸ್ತುತ 12 ಡ್ರೋನ್ ಅಭಿವೃದ್ಧಿಪಡಿಸಲಾಗಿದ್ದು, ಮೊದಲ ಹಂತದಲ್ಲಿ ಶಿವಾಜಿನಗರ, ಕೆ.ಜಿ.ಹಳ್ಳಿ, ಗೋರಿಪಾಳ್ಯ, ಚಿಕ್ಕಪೇಟೆ ಸೇರಿ ನಗರದ ಸೂಕ್ಷ್ಮ ಪ್ರದೇಶಗಳಲ್ಲಿ ಕಾರ್ಯರೂಪಕ್ಕೆ ತರಲಾಗುವುದು. ಮೊದಲ ಹಂತದಲ್ಲಿ ಇದು ಯಶಸ್ವಿಯಾದ ನಂತರ ನಗರದ 109 ಠಾಣೆಗಳ ವ್ಯಾಪ್ತಿಯಲ್ಲೂ ಡ್ರೋನ್ ಬಳಸಲು ಚಿಂತನೆ ನಡೆಸಲಾಗಿದೆ ಎಂದು ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ವಿಜಯವಾಣಿಗೆ ತಿಳಿಸಿದ್ದಾರೆ.

ನಗರದಲ್ಲಿ ಜನರನ್ನು ನಿಯಂತ್ರಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆದರೂ, ಕೆಲವರು ಕಾನೂನು ಉಲ್ಲಂಘಿಸಿ ರಸ್ತೆಗಿಳಿಯುತ್ತಿದ್ದಾರೆ. ಇವರ ಮೇಲೆ ಕಣ್ಣಿಡಲು ಹಾಗೂ ಜನರಲ್ಲಿ ಕರೊನಾ ಬಗ್ಗೆ ಜಾಗೃತಿ ಮೂಡಿಸಲು ಡ್ರೋನ್ ಸಹಕಾರಿಯಾಗಲಿದೆ. ಈ ವ್ಯವಸ್ಥೆಯೊಂದಿಗೆ ಕೈ ಜೋಡಿಸಲು ಇಚ್ಚಿಸುವ ಖಾಸಗಿ ವ್ಯಕ್ತಿಗಳಿಗೂ ಈ ಕುರಿತು ಮಾಹಿತಿ ನೀಡಲಾಗಿದೆ. ಅವರು ಈ ವ್ಯವಸ್ಥೆಯೊಂದಿಗೆ ಕೈ ಜೋಡಿಸಲು ಮುಂದೆ ಬಂದರೆ, ಐಐಎಸ್​ಸಿ ತಂಡದ ಜತೆಗೂಡಿಸಲು ಚಿಂತನೆ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net