

ಹುಬ್ಬಳ್ಳಿ: ಅಖಿಲ ಭಾರತ ಕಾಂಗ್ರೆಸ್ ಸಮಿತಿಯ (ಎಐಸಿಸಿ) ನೂತನ ಕಾರ್ಯದರ್ಶಿಯಾಗಿ ನೇಮಕಗೊಂಡಿರುವ ವಿಧಾನ ಪರಿಷತ್ ಸದಸ್ಯ ಎಫ್.ಎಚ್. ಜಕ್ಕಪ್ಪನವರ ಅವರನ್ನು ವಿದ್ಯಾನಗರ ಬ್ಲಾಕ್ ಕಾಂಗ್ರೆಸ್ ಸಮತಿಯಿಂದ ಸನ್ಮಾನಿಸಲಾಯಿತು.
ಹುಬ್ಬಳ್ಳಿ- ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ರಾಬರ್ಟ್ ದದ್ದಾಪುರಿ ಮಾತನಾಡಿ, ಪಕ್ಷಕ್ಕೆ ಎಫ್.ಎಚ್. ಜಕ್ಕಪ್ಪನವರ ಅವರು ಸಲ್ಲಿಸಿರುವ ನಿಸ್ವಾರ್ಥ ಸೇವೆ, ನಿಷ್ಠೆ ಹಾಗೂ ಸಂಘಟನಾ ಚಾತುರ್ಯವನ್ನು ಗುರುತಿಸಿ ಹೈಕಮಾಂಡ್ ಮಹತ್ವದ ಜವಾಬ್ದಾರಿ ನೀಡಿದೆ. ರಾಷ್ಟ್ರಮಟ್ಟದಲ್ಲಿ ಅವರಿಗೆ ಸಿಕ್ಕಿರುವ ಈ ಸ್ಥಾನಮಾನವು ಕಾರ್ಯಕರ್ತರಲ್ಲಿ ಹೊಸ ಉತ್ಸಾಹ ತುಂಬಿದೆ. ಪಕ್ಷವನ್ನು ತಳಮಟ್ಟದಿಂದ ಇನ್ನಷ್ಟು ಬಲಪಡಿಸಲು ಸಹಕಾರಿಯಾಗಲಿದೆ ಎಂದರು.
ಮಹಾನಗರ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ರಜತ್ ಉಳ್ಳಾಗಡ್ಡಿಮಠ, ದಶಕಗಳಿಂದ ಜನಸಾಮಾನ್ಯರೊಂದಿಗೆ ಬೆರೆತು, ಪಕ್ಷದ ಸಿದ್ಧಾಂತಗಳನ್ನು ಜನರಿಗೆ ತಲುಪಿಸುವಲ್ಲಿ ಜಕ್ಕಪ್ಪನವರ ಅವರ ಪಾತ್ರ ಮಹತ್ವದ್ದಾಗಿದೆ. ಹೊಸ ಜವಾಬ್ದಾರಿಯನ್ನು ಅವರು ಅತ್ಯಂತ ಯಶಸ್ವಿಯಾಗಿ ನಿಭಾಯಿಸಲಿದ್ದಾರೆ. ಮುಂಬರುವ ದಿನಗಳಲ್ಲಿ ಅವರ ಮಾರ್ಗದರ್ಶನದಲ್ಲಿ ಪಕ್ಷವು ಮತ್ತಷ್ಟು ಬಲಿಷ್ಠವಾಗಿ ಹೊರಹೊಮ್ಮಲಿದೆ ಎಂದು ಅಭಿಪ್ರಾಯಪಟ್ಟರು.
ಪಾಲಿಕೆ ಸದಸ್ಯರಾದ ಸುವರ್ಣ ಕಲಕುಂಟ್ಲ, ಎಸ್. ಸೆಂಥಿಲಕುಮಾರ್, ಇಕ್ಬಾಲ್ ನವಲೂರ, ಸಾದಿಕ್ ಯಕ್ಕುಂಡಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಉಪಾಧ್ಯಕ್ಷ ಪ್ರೇಮನಾಥ ಚಿಕ್ಕತುಂಬಳ, ಸೆಂಟ್ರಲ್ ಕ್ಷೇತ್ರದ ಅಧ್ಯಕ್ಷ ಸಂಗಮೇಶ್ವರ ಗೌರಕ್ಕನವರ, ಮಣಿಕಂಠ ಗುಡಿಯಾಳ, ನಾಗರಾಜ ಬಾಕಳೆ, ಸಂತೋಷ ನಾಯಕ, ಶಾನು ಕಟ್ಟಿಮನಿ, ಸಿದ್ಧಾರ್ಥ, ಸಚಿನ್ ಮಿಶ್ರಿಕೋಟಿ, ಸುಜಲ್ ರತನ್, ಪಕ್ಷದ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.