ಮಣಿಲದಲ್ಲಿ ಬೋನಿಗೆ ಬಿದ್ದ ಅಪರೂಪದ ಕರಿಚಿರತೆ

ಎರಡು ವರ್ಷ ಪ್ರಾಯದ ಗಂಡು ಚಿರತೆ
 ಶಿರ್ಲಾಲಿನಲ್ಲಿ ಬೋನಿಗೆ ಬಿದ್ದ ಕರಿಚಿರತೆ.
ಶಿರ್ಲಾಲಿನಲ್ಲಿ ಬೋನಿಗೆ ಬಿದ್ದ ಕರಿಚಿರತೆ.
Published on: 

ಬೆಳ್ತಂಗಡಿ: ತಾಲೂಕಿನ ಶಿರ್ಲಾಲು ಗ್ರಾಮದ ಮಣಿಲದಲ್ಲಿ ಅರಣ್ಯ ಇಲಾಖೆ ಇರಿಸಿದ್ದ ಬೋನಿನಲ್ಲಿ ಅಪರೂಪದ ಕರಿಚಿರತೆಯೊಂದು ಸೆರೆಯಾಗಿದೆ. ಪದ್ಮನಾಭ ಅವರ ಮನೆ ಸಮೀಪ ಅರಣ್ಯ ಇಲಾಖೆ ಬೋನು ಇರಿಸಿದ್ದು, ಶನಿವಾರ ಚಿರತೆ ಬೋನಿಗೆ ಬಿದ್ದಿದೆ.

ಮಣಿಲ ಪರಿಸರದಲ್ಲಿ ಚಿರತೆ ಸಂಚಾರ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಕೆಲವು ದಿನಗಳ ಹಿಂದೆ ಪದ್ಮನಾಭ ಅವರ ಮನೆ ಸಮೀಪ ಬೋನು ಇರಿಸಿತ್ತು. ಶನಿವಾರ ಸುಮಾರು ಎರಡು ವರ್ಷ ಪ್ರಾಯದ ಗಂಡು ಚಿರತೆ ಬೋನಿನಲ್ಲಿ ಸೆರೆಯಾಗಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದರು.

ಸಾಮಾನ್ಯವಾಗಿ ಚಿರತೆಗಳು ಮೈಮೇಲೆ ಹಳದಿ ಅಥವಾ ಕಂದು ಬಣ್ಣದ ಕಪ್ಪುಚುಕ್ಕೆ ಹೊಂದಿರುತ್ತವೆ. ಆದರೆ ಕಪ್ಪು ಬಣ್ಣದ ಚಿರತೆಗಳು ಅಪರೂಪವಾಗಿ ಕಾಣಿಸಿಕೊಳ್ಳುತ್ತವೆ. ಚಿರತೆ ಆರೋಗ್ಯವಾಗಿದ್ದು, ಪಶುವೈದ್ಯರಿಂದ ಆರೋಗ್ಯ ತಪಾಸಣೆ ನಡೆಸಿದ ಬಳಿಕ ಸುರಕ್ಷಿತವಾಗಿ ಸಂರಕ್ಷಿತಾರಣ್ಯಕ್ಕೆ ಬಿಡಲಾಗುವುದು ಎಂದು ವೇಣೂರು ವಲಯ ಅರಣ್ಯಾಧಿಕಾರಿ ಭರತ್ ಯು.ಜಿ. ತಿಳಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಅಳದಂಗಡಿ ಶಾಖೆ ಉಪವಲಯ ಅರಣ್ಯಾಧಿಕಾರಿ ಹರಿಪ್ರಸಾದ್, ಗಸ್ತು ವನಪಾಲಕ ಮಂಜುನಾಥ್ ಬಿ.ಎಸ್., ಅರಣ್ಯ ವೀಕ್ಷಕರಾದ ವೆಂಕಪ್ಪ ನಾಯ್ಕ, ಪೂವಪ್ಪ ನಾಯ್ಕ, ಸ್ಥಳೀಯರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net