

ಮಂಗಳೂರು ದಸರಾಕ್ಕೆ ಕ್ಷಣಗಣನೆ ಆರಂಭಗೊಂಡಿದೆ. ನಗರದಲ್ಲಿ ಮೂರ್ತಿಗಳ ರಚನೆ, ವಿದ್ಯುತ್ ದೀಪ ಅಳವಡಿಕೆ, ಸ್ವಚ್ಛತೆ ಸೇರಿದಂತೆ ಸಿದ್ದತೆಗಳು ಭರದಿಂದ ನಡೆಯುತ್ತಿದೆ.
ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ನವರಾತ್ರಿ ಮಹೋತ್ಸವ ‘ಮಂಗಳೂರು ದಸರಾ’ ಎಂದು ಪ್ರಸಿದ್ಧಿ ಪಡೆದಿದೆ. ಕ್ಷೇತ್ರದ ನವೀಕರಣದ ರೂವಾರಿ, ಕೇಂದ್ರದ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ಅವರ ಮಾರ್ಗದರ್ಶನ ಮತ್ತು ನೇತೃತ್ವದಲ್ಲಿ ದಸರಾ ಮಹೋತ್ಸವ ನಡೆಯಲಿದೆ. ಉಳಿದಂತೆ ನಗರದ ವ್ಯಾಪ್ತಿಯಲ್ಲಿ ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನ, ಕುದ್ರೋಳಿ ಭಗವತೀ ಕ್ಷೇತ್ರ, ಉರ್ವ ಮಾರಿಯಮ್ಮ ದೇವಸ್ಥಾನ, ಬೋಳಾರ ಹಳೆ ಕೋಟೆ ಮಾರಿಯಮ್ಮ ದೇವಸ್ಥಾನ ಸಹಿತ ವಿವಿಧ ದೇಗುಲಗಳಲ್ಲಿ ನವರಾತ್ರಿ ಆಚರಣೆ ನಡೆಯಲಿದೆ.
ಕುದ್ರೋಳಿ ಕ್ಷೇತ್ರದಲ್ಲಿ ಅ.11ರಿಂದ 21ರವರೆಗೆ ನವರಾತ್ರಿ ಸಂಭ್ರಮ ನಡೆಯಲಿದ್ದು, ವಿಶೇಷ, ವಿಭಿನ್ನ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಕಾರ್ಯ ಕಲಾಪಗಳ ಮೂಲಕ ಕ್ಷೇತ್ರವು ಎಲ್ಲರ ಗಮನ ಸೆಳೆಯಲಿದೆ. ವೈಭವದ ದಸರಾ ಆಚರಣೆಗೆ ಸಿದ್ಧತೆಗಳು ಈಗಾಗಲೇ ನಡೆಯುತ್ತಿದ್ದು, ನವರಾತ್ರಿ ವೇಳೆಯಲ್ಲಿ ಪೂಜಿಸಲ್ಪಡುವ ಶ್ರೀ ಶಾರದಾ ಮಾತೆ ಹಾಗೂ ನವದುರ್ಗೆಯರ ಮೂರ್ತಿಗಳ ರಚನೆ ಕೆಲಸಗಳು ಕ್ಷೇತ್ರದಲ್ಲಿ ಪ್ರಗತಿಯಲ್ಲಿದೆ. ಅದೇರೀತಿ ದರ್ಬಾರ್ ಮಂಟಪದ ಕೆಲಸವೂ ಭರದಿಂದ ಸಾಗುತ್ತಿದೆ. ಕ್ಷೇತ್ರಕ್ಕೆ, ಸುತ್ತಮುತ್ತಲಿನ ಪ್ರದೇಶಕ್ಕೆ ಪೈಂಟಿಂಗ್ ಕೆಲಸ ನಡೆಯುತ್ತಿದೆ. ಸ್ವರ್ಣ ಬಣ್ಣದಿಂದ ಕುದ್ರೋಳಿ ಕ್ಷೇತ್ರ ಕಂಗೊಳಿಸಲಿದೆ.
ಮಂಗಳೂರು ದಸರಾವನ್ನು ಮುಖ್ಯಮಂತ್ರಿಗಳು ಉದ್ಘಾಟಿಸಲಿದ್ದು, ಹಬ್ಬದ ಪ್ರಯುಕ್ತ ಈ ಬಾರಿ ಮಹಿಳಾ ದಸರಾ, ಮಕ್ಕಳ ದಸರಾ, ಮುದ್ದು ಶಾರದೆ ಮತ್ತು ನವದುರ್ಗೆಯರು, ಕಿನ್ನಿಪಿಲಿ, ಮ್ಯಾರಥಾನ್, ಕವಿಗೋಷ್ಠಿಗಳು, ಸಾಂಸ್ಕೃತಿಕ ವೈಭವ ಮುಂತಾದ ಚಟುವಟಿಕೆಗಳು ಗಮನಸೆಳೆಯಲಿದೆ.
* ನಗರವೇ ಜಗಮಗಿಸಲಿದೆ
ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಮಂಗಳಾದೇವಿ ದೇವಸ್ಥಾನದಿಂದ ಮಾರ್ನಮಿಕಟ್ಟೆ, ಎ.ಬಿ. ಶೆಟ್ಟಿ ವೃತ್ತದಿಂದ ಮಂಕಿಸ್ಟ್ಯಾಂಡ್ ಕ್ರಾಸ್ ರಸ್ತೆ, ರಮಾಲಕ್ಷ್ಮಣ ಹಾಲ್-ಎಮ್ಮೆಕೆರೆ ರಸ್ತೆ-ಬೋಳಾರ ಮಾರಿಗುಡಿ ದೇವಸ್ಥಾನ-ಲೀವೆಲ್ ಜಂಕ್ಷನ್, ಬೋಳಾರ ಲೀವೆಲ್ ಜಂಕ್ಷನ್ ನಿಂದ ಗುಜ್ಜರಕೆರೆ, ಮಾರ್ಗನ್ಸ್ ಗೇಟ್-ಮಂಕಿಸ್ಟ್ಯಾಂಡ್ ರಸ್ತೆ-ಜೈಹಿಂದ್ ವೃತ್ತ ಮತ್ತು ಮಂಗಳಾದೇವಿ ಕ್ಷೇತ್ರದಿಂದ ಬೋಳಾರ ಮುಖ್ಯ ರಸ್ತೆ, ಬೋಳಾರ ಲೀವೆಲ್ ಜಂಕ್ಷನ್-ಬೋಳಾರ ಹಳೆಕೋಟೆ ದೇವಸ್ಥಾನ, ಮಂಗಳೂರು ವಿವಿ-ಕ್ಲಾಕ್ ಟವರ್-ಎ.ಬಿ. ಶೆಟ್ಟಿ ವೃತ್ತ, ಕುದ್ರೋಳಿ ದೇವಸ್ಥಾನ-ಗುರ್ಜಿ ಸರ್ಕಲ್-ನಾರಾಯಣಗುರು ವೃತ್ತ-ಲಾಲ್ ಬಾಗ್-ಪಿವಿಎಸ್-ಗೋವಿಂದ ಪೈ ವೃತ್ತ-ಹಂಪನಕಟ್ಟೆ ಸರ್ಕಲ್, ಹಂಪನಕಟ್ಟೆ ಸರ್ಕಲ್-ಜಿಎಸ್‌ಎಸ್ ರಸ್ತೆ-ಜ್ಯುವೆಲರಿ ಲೇನ್-ರಥಬೀದಿ ದೇವಸ್ಥಾನ-ಉಷಾಕಿರಣ ಹೋಟೆಲ್-ನ್ಯೂಚಿತ್ರ-ಕುದ್ರೋಳಿ ದೇವಸ್ಥಾನ, ಗೋವಿಂದ ಪೈ ವೃತ್ತ-ಡೊಂಗರಕೇರಿ ದೇವಸ್ಥಾನ-ನ್ಯೂಚಿತ್ರ, ಗೋವಿಂದ ಪೈ ವೃತ್ತ-ಮಹಾಮಾಯಿ ಕ್ಷೇತ್ರ-ರಥಬೀದಿ ದೇವಸ್ಥಾನ- ಶರವು ಕ್ಷೇತ್ರ, ನ್ಯೂಚಿತ್ರ-ಬಸವನಗುಡಿ-ಉಷಾಕಿರಣ ತನಕ ಪಾಲಿಕೆಯಿಂದ ದೀಪಾಲಂಕಾರಗೊಳಿಸಲಾಗುತ್ತದೆ.
ಬಾಕ್ಸ್
25 ಕಿ.ಮೀ. .. 1 ಕೋಟಿ ಬಲ್ಭ್ !
ಮಂಗಳೂರು ದಸರಾ ಹಿನ್ನೆಲೆಯಲ್ಲಿ ನಗರದ ಸುಮಾರು 25 ಕಿ.ಮೀ. ವ್ಯಾಪ್ತಿ ಸುಮಾರು 1 ಕೋಟಿಯಷ್ಟು ಬಲ್ಬ್ ಗಳಿಂದ ಕಂಗೊಳಿಸಲಿದೆ. ವಿವಿಧ ಮಾದರಿಯ ವಿನ್ಯಾಸದ ಮಿನಿಯೇಚರ್‌ಗಳಿಂದ ಅಲಂಕೃತಗೊಂಡ ದೇವಳದ ಗೋಪುರ, ಪೌಳಿಗಳನ್ನು ನವರಾತ್ರಿ ದಿನಗಳಲ್ಲಿ ರಾತ್ರಿ ವೇಳೆ ವೀಕ್ಷಿಸುವುದು ಆನಂದಮಯ. ವಿಶೇಷವಾಗಿ ದಸರಾ ಮೆರವಣಿಗೆ ನಡೆಯುವ ಸ್ಥಳದಲ್ಲಿ ವಿದ್ಯುತ್ ದೀಪಗಳು ಗಮನಸೆಳೆಯಲಿದೆ. ಮೆರವಣಿಗೆ ಸಾಗಿ ಬರುವ ರಸ್ತೆಯ ಇಕ್ಕೆಲಗಳಲ್ಲಿರುವ ಕಟ್ಟಡದವರು, ತಮ್ಮ ತಮ್ಮ ವ್ಯಾಪ್ತಿಯಲ್ಲಿ ವಿದ್ಯುತ್ ದೀಪಗಳ ಅಲಂಕಾರ ಮಾಡುತ್ತಾರೆ.
(ಕ್ವೋಟ್)
ಮಂಗಳೂರು ದಸರಾಗೆ ಸರ್ವ ಸಿದ್ದತೆಗಳು ನಡೆಯುತ್ತಿದೆ. ಈ ಬಾರಿಯ ದರ್ಬಾರ್ ಮಂಟಪ ವಿಶೇಷ ಮತ್ತು ವಿನೂತನವಾಗಿ ರಚನೆಗೊಳ್ಳಲಿದೆ. ಆ ಕೆಲಸವೂ ಸಾಗುತ್ತಿದ್ದು, ನಗರವನ್ನು ವಿದ್ಯುದ್ಧೀಪಾಲಂಕಾರಗೊಳಿಸಲಾಗುತ್ತಿದೆ. ಶ್ರೀ ಕುದ್ರೋಳಿ ಕ್ಷೇತ್ರದಲ್ಲಿ ಈಗಾಗಲೇ ಶ್ರೀ ಶಾರದಾ ಮಾತೆ ಹಾಗೂ ನವದುರ್ಗೆಯರ ಮೂರ್ತಿಗಳ ರಚನೆ ಕೆಲಸಗಳು ಅಂತಿಮ ಹಂತದಲ್ಲಿವೆ.
- ಪದ್ಮರಾಜ್ ಆರ್.ಪೂಜಾರಿ
ಕೋಶಾಧಿಕಾರಿ, ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ