ಕೆರೆಯಲ್ಲಿ ಮಹಿಳೆ ಮೃತದೇಹ ಪತ್ತೆ

ಬದಿಯಡ್ಕ ಠಾಣೆ ಪೊಲೀಸರು ಪ್ರಕರಣ ದಾಖಲು
Crime
Crime
Published on: 

ಕಾಸರಗೋಡು: ಎಣ್ಮಕಜೆ ಪಂಚಾಯಿತಿಯ ಪೆರ್ಲ ಸನಿಹದ ಬಜಕೂಡ್ಲು ನಿವಾಸಿ ಈಶ್ವರ ನಾಯ್ಕ ಎಂಬುವರ ಪತ್ನಿ ಜಯಲಕ್ಷ್ಮೀ(58) ಅವರ ಮೃತದೇಹ ಮನೆ ಸಮೀಪದ ತೋಟದ ಕೆರೆಯಲ್ಲಿ ಪತ್ತೆಯಾಗಿದೆ. ಮನೆಯಲ್ಲಿ ಕಾಣದ ಜಯಲಕ್ಷ್ಮೀ ಅವರನ್ನು ಮನೆಯವರು ಹುಡುಕಾಡಿದಾಗ ಮನೆ ಸಮೀಪವಿರುವ ಆವರಣ ಗೋಡೆಯಿಲ್ಲದ ಕೆರೆಯಲ್ಲಿ ಅವರ ಮೃತದೇಹ ಕಂಡುಬಂದಿದೆ. ಸ್ಥಳಕ್ಕೆ ಆಗಮಿಸಿದ ವೈದ್ಯರು ತಪಾಸಣೆ ನಡೆಸಿ ಮೃತಪಟ್ಟಿರುವುದನ್ನು ಖಚಿತಪಡಿಸಿದ್ದರು. ಬದಿಯಡ್ಕ ಠಾಣೆ ಪೊಲೀಸರು ಅಸಹಜ ಸಾವಿನ ಬಗ್ಗೆ ಕೇಸು ದಾಖಲಿಸಿಕೊಂಡಿದ್ದಾರೆ. ಅವರು ಕೆಲವು ಸಮಯದಿಂದ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರೆನ್ನಲಾಗಿದೆ.

ಎಂಡಿಎಂಎ ವಶ, ಆರೋಪಿಗಳಿಬ್ಬರ ಬಂಧನ

ಕಾಸರಗೋಡು: ಮಾರಕ ಎಂಡಿಎಂಎ ಮಾದಕ ದ್ರವ್ಯ ಹಸ್ತಾಂತರಿಸುತ್ತಿದ್ದ ಮಧ್ಯೆ ಇಬ್ಬರನ್ನು ಬದಿಯಡ್ಕ ಠಾಣೆ ಪೊಲೀಸರು ಬಂಧಿಸಿದ್ದಾರೆ. ಎದಿರ್ತೋಡ್ ಬದರ್ ನಗರದ ಮುಹಮ್ಮದ್ ಅಜ್ನಾಸ್(26) ಹಾಗೂ ಮುಳ್ಳೇರಿಯ ಮೋಯಂತನ್‌ಪಾರ ಹೌಸ್‌ನ ಸುಲೈಮಾನ್ ಅಫ್ರಿದಿ(28) ಬಂಧಿತರು. ಬದಿಯಡ್ಕ ಪೊಲೀಸ್ ಠಾಣಾಧಿಕಾರಿ ಸುನೀಲ್ ಕುಮಾರ್ ಟಿ. ನೇತೃತ್ವದ ಪೊಲೀಸರ ತಂಡ ಗಸ್ತು ತಿರುಗುತ್ತಿದ್ದ ವೇಳೆ ನೆಲ್ಲಿಕಟ್ಟ ಬಿಲಾಲ್ ನಗರ ಜಂಕ್ಷನ್ ರಸ್ತೆ ಬದಿ ನಿಲ್ಲಿಸಿದ್ದ ಸ್ಕೂಟರ್ ಸನಿಹ ನಿಂತಿದ್ದ ವ್ಯಕ್ತಿ, ಇನ್ನೊಬ್ಬನಿಗೆ ಯಾವುದೋ ವಸ್ತು ಹಸ್ತಾಂತರಿಸುತ್ತಿದ್ದ. ಪೊಲೀಸ್ ವಾಹನ ಕಂಡ ತಕ್ಷಣ ಪರಾರಿಯಗಲೆತ್ನಿಸಿದ ಇಬ್ಬರನ್ನು ವಿಚಾರಣೆಗೊಳಪಡಿಸಿದಾಗ ಮಾದಕ ವಸ್ತು ಪತ್ತೆಯಾಗಿದೆ. ಸುಲೈಮಾನ್ ಅಫ್ರಿದಿಯಿಂದ ಮಾದಕ ವಸ್ತು ಖರೀದಿಸಿರುವುದಾಗಿ ಮುಹಮ್ಮದ್ ಅಜ್ನಾಸ್ ಪೊಲೀಸರಿಗೆ ತಿಳಿಸಿದ್ದು, ಬಳಿಕ ದೇಹ ತಪಾಸಣೆ ನಡೆಸಿದಾಗ ಅಜ್ನಾಸ್‌ನ ಶರ್ಟ್‌ನ ಜೇಬಿನಿಂದ 0.39 ಗ್ರಾಂ ಎಂಡಿಎಂಎ ಪತ್ತೆಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.