

ಬಂಟ್ವಾಳ: ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಹೆಜ್ಜೇನು ದಾಳಿಗೊಳಗಾಗಿ ಗಂಭೀರ ಅಸ್ವಸ್ಥಗೊಂಡಿದ್ದ ಕಸಬಾ ಗ್ರಾಮದ ಕೆಮ್ಮಟ್ಟೆ ಗುಡ್ಡೆ ನಿವಾಸಿ ಕಮಲಾ(74) ಎಂಬುವರು ಬುಧವಾರ ಮೃತಪಟ್ಟಿದ್ದಾರೆ.
ಕಮಲಾ ಅವರು ಬೆಳಗ್ಗೆ 9.30ರ ಸುಮಾರಿಗೆ ಮನೆ ಸಮೀಪದ ತೋಟಕ್ಕೆ ಕೆಲಸಕ್ಕೆ ತೆರಳಿದ್ದರು. ಈ ವೇಳೆ ಹೆಜ್ಜೇನುಗಳು ದಾಳಿ ನಡೆಸಿ ಬೆನ್ನು, ಕಾಲು, ಮುಖಕ್ಕೆ ಕಚ್ಚಿದೆ. 11 ಗಂಟೆಗೆ ಮನೆಗೆ ಬಂದು ಪುತ್ರ ದಿನೇಶ್ ಅವರಿಗೆ ತಿಳಿಸಿದ್ದಾರೆ.
ತಕ್ಷಣ ದಿನೇಶ್ ತಾಯಿಯನ್ನು ಬಂಟ್ವಾಳದ ಕ್ಲಿನಿಕ್‌ಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿ ಬಳಿಕ ಮನೆಗೆ ಕರೆತಂದಿದ್ದರು. ಮಧ್ಯಾಹ್ನ 1.30ರ ವೇಳೆಗೆ ಕಮಲಾ ಅವರು ಅಸ್ವಸ್ಥಗೊಂಡಿದ್ದು, ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರು. ಆದರೆ, ಆ ವೇಳೆಗಾಗಲೇ ಅವರು ಮೃತಪಟ್ಟಿದ್ದರು.