

ವಿಜಯವಾಣಿ ಸುದ್ದಿಜಾಲ ಗುರುಪುರ
ರಾಷ್ಟ್ರೀಯ ಹೆದ್ದಾರಿ 169ರ ರೋಸಾ ಮಿಸ್ತಿಕಾ ಶಾಲೆ ಸಮೀಪದ ವಿಕಾಸನಗರದಿಂದ ಒಳಮಾರ್ಗವಾಗಿ ಕೈಕಂಬಕ್ಕೆ ಸಂಪರ್ಕ ಕಲ್ಪಿಸುವ ಸುಮಾರು 40-50 ವರ್ಷಗಳ ಹಳೆಯ ಕಚ್ಚಾ ರಸ್ತೆ ಇಂದಿಗೂ ಅಭಿವೃದ್ಧಿ ಕಾಣದೆ ಉಳಿದಿದೆ.
ವಿಕಾಸನಗರದ ಮಟ್ಟಿಕುಲ ಮಾರ್ಗವಾಗಿ ಕೈಕಂಬ ಸಂಪರ್ಕಿಸುವ ಬಹುತೇಕ ಒಳರಸ್ತೆಗಳು ವಸತಿ ಬಡಾವಣೆಗಳ ನಿರ್ಮಾಣದೊಂದಿಗೆ ಕಾಂಕ್ರೀಟೀಕರಣಗೊಂಡಿವೆ. ಆದರೆ, ಹೆದ್ದಾರಿಯ ಎರಡು ಬದಿಗಳನ್ನು ಬೆಸೆಯುವ ಅತ್ಯಂತ ಹಳೆಯ ರಸ್ತೆಯ ಸುಮಾರು 320-350 ಮೀಟರ್ ವ್ಯಾಪ್ತಿಯ ಮಧ್ಯದ ಭಾಗ ಮಾತ್ರ ಮುರಕಲ್ಲಿನ ದಿಣ್ಣೆ ಮತ್ತು ಹೊಂಡ-ಗುಂಡಿಗಳಿಂದ ಕೂಡಿದೆ. ಸಂಬಂಧಪಟ್ಟ ಪಂಚಾಯಿತಿ ಹಾಗೂ ಇಲಾಖೆಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂಬುದು ಸ್ಥಳೀಯರ ಅಳಲು.
ಈ ಕಚ್ಚಾ ರಸ್ತೆಯ ಒಂದು ಪಾರ್ಶ್ವದಲ್ಲಿ ಭೂಮಿಯೊಳಗೆ ಎಂಆರ್‌ಪಿಎಲ್‌ನ ಕಚ್ಚಾತೈಲ ಪೈಪ್‌ಲೈನ್ ಹಾಗೂ ಹೊರಭಾಗದಲ್ಲಿ ಎಚ್‌ಪಿಸಿಎಲ್‌ನ ಅನಿಲ ಪೈಪ್‌ಲೈನ್ ಹಾದುಹೋಗಿವೆ. ಇವೆರಡೂ ಸಾಕಷ್ಟು ಆಳದಲ್ಲಿದ್ದು, ಇದೇ ಪೈಪ್‌ಲೈನ್ ಹಾದುಹೋಗಿರುವ ಅಕ್ಕಪಕ್ಕದ ಇತರ ರಸ್ತೆಗಳು ಈಗಾಗಲೇ ಕಾಂಕ್ರೀಟೀಕರಣಗೊಂಡಿವೆ. ಹೀಗಿರುವಾಗ, ಈ ಸಣ್ಣ ಅಂತರದ ರಸ್ತೆಯನ್ನೂ ಸಮತಟ್ಟುಗೊಳಿಸಿ ಕಾಂಕ್ರೀಟ್ ಅಥವಾ ಡಾಂಬರೀಕರಣ ಮಾಡಲು ಸಾಧ್ಯವಿದೆ. ಇಲಾಖೆಗಳ ಇಚ್ಛಾಶಕ್ತಿಯ ಕೊರತೆಯಿಂದ ಕಾಮಗಾರಿ ನನೆಗುದಿಗೆ ಬಿದ್ದಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.
ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ದಟ್ಟಣೆ ಉಂಟಾದಾಗ ಕೈಕಂಬ ತಲುಪಲು ವಾಹನ ಸವಾರರಿಗೆ ಇದುವೇ ಸಮೀಪದ ಪರ್ಯಾಯ ಮಾರ್ಗ. ಜತೆಗೆ ಈ ಭಾಗದ 100ಕ್ಕೂ ಹೆಚ್ಚು ಮನೆಗಳ ನಿವಾಸಿಗಳು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಕಾರ್ಮಿಕರು ದಿನನಿತ್ಯ ಕೈಕಂಬ ಮತ್ತು ಮಂಗಳೂರಿಗೆ ತೆರಳಲು ಇದೇ ರಸ್ತೆಯನ್ನು ಆಶ್ರಯಿಸಿದ್ದಾರೆ. ಸುತ್ತಲೂ ನಗರೀಕರಣದ ವೇಗ ಹೆಚ್ಚುತ್ತಿದ್ದರೂ ಈ ಮುಖ್ಯ ಕೊಂಡಿ ಮಾತ್ರ ದುಃಸ್ಥಿತಿಯಲ್ಲೇ ಮುಂದುವರಿದಿದೆ.