ವಿಜಯವಾಣಿ ಸುದ್ದಿಜಾಲ ಉಪ್ಪಿನಂಗಡಿ
ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಬಿ.ಸಿ.ರೋಡ್- ಅಡ್ಡಹೊಳೆ ತನಕದ ಚತುಷ್ಪಥ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಸಂಬಂಧಿಸಿ ಉಪ್ಪಿನಂಗಡಿ ಸಮೀಪದ ಬಜತ್ತೂರು ಗ್ರಾಮದ ವಳಾಲು ಎಂಬಲ್ಲಿ ಸ್ಥಾಪಿಸಿರುವ ಟೋಲ್ ಪ್ಲಾಜಾ ಗುರುವಾರ ಕಾರ್ಯಾರಂಭಗೊಂಡಿದ್ದು, ಶುಲ್ಕ ಪಾವತಿಯೊಂದಿಗೆ ಸಂಚಾರ ಆರಂಭವಾಗಿದೆ.
ಬಿ.ಸಿ.ರೋಡ್-ಅಡ್ಡಹೊಳೆ ತನಕ ಚತುಷ್ಪಥ ರಸ್ತೆ ಕಾಮಗಾರಿ ಶೇ.95ರಷ್ಟು ಪೂರ್ಣಗೊಂಡಿದೆ. ಉಪ್ಪಿನಂಗಡಿಯಿಂದ ಸುಮಾರು 8 ಕಿ.ಮೀ. ದೂರದ ಬಜತ್ತೂರು ಗ್ರಾಮದ ವಳಾಲು-ನೀರಕಟ್ಟೆ ಮಧ್ಯೆ ಟೋಲ್‌ಗೇಟ್ ನಿರ್ಮಾಣಗೊಂಡಿದೆ. ಬಿ.ಸಿ.ರೋಡು-ಪೆರಿಯಶಾಂತಿ ಮಧ್ಯೆ 46 ಕಿ.ಮೀ. ಹೆದ್ದಾರಿ ಕಾಮಗಾರಿ ನಿರ್ವಹಿಸುತ್ತಿರುವ ಗುತ್ತಿಗೆ ಸಂಸ್ಥೆ ಕೆಎನ್‌ಆರ್ ಕನ್‌ಸ್ಟ್ರಕ್ಷನ್ ಟೋಲ್ ಪ್ಲಾಜಾ ಕಾಮಗಾರಿ ಪೂರ್ಣಗೊಳಿಸಿ ಹೆದ್ದಾರಿ ಪ್ರಾಧಿಕಾರಕ್ಕೆ ಹಸ್ತಾಂತರಿಸಿದೆ.
ಚತುಷ್ಪಥ ಹೆದ್ದಾರಿಯಲ್ಲಿ ಎರಡೂ ಕಡೆ ತಲಾ ನಾಲ್ಕು ಲೇನ್‌ಗಳು ಇರಲಿವೆ. ಒಂದೇ ಸಮಯಕ್ಕೆ ಎರಡು ಬದಿ ಒಟ್ಟು 8 ಲೇನ್‌ಗಳಲ್ಲಿ ವಾಹನಗಳು ಸಾಗಲು ಅವಕಾಶ ಸಿಗಲಿದೆ. ದ್ವಿಚಕ್ರ ಹಾಗೂ ರಿಕ್ಷಾಗಳ ಸಂಚಾರಕ್ಕೆ ಎರಡೂ ಬದಿ ಪ್ರತ್ಯೇಕ ಲೇನ್‌ಗಳಿವೆ. ಶುಲ್ಕ ಸಂಗ್ರಹಕ್ಕೆ ಸಂಬಂಧಿಸಿ ಟೆಂಡರ್ ಪ್ರಕ್ರಿಯೆ ಈಗಾಗಲೇ ಪೂರ್ಣಗೊಂಡಿದ್ದು, ಮಂಗಳೂರಿನ ಕೋರಲ್ ಸಂಸ್ಥೆ ನಿರ್ವಹಣೆ ಗುತ್ತಿಗೆ ಪಡೆದುಕೊಂಡಿದೆ.
ರಾ.ಹೆ. 75ರಲ್ಲಿ ಬೆಂಗಳೂರು-ಮಂಗಳೂರು ಮಧ್ಯೆ ಬೆಂಗಳೂರು ನೆಲಮಂಗಲದಿಂದ ಸಕಲೇಶಪುರ ಮಧ್ಯೆ 5 ಕಡೆ ಟೋಲ್ ಪ್ಲಾಜಾ ಇದೆ. ದ.ಕ. ಜಿಲ್ಲೆಯ ಗುಂಡ್ಯದಿಂದ ಮಂಗಳೂರು ಪಂಪ್‌ವೆಲ್ ಮಧ್ಯೆ ಬಿ.ಸಿ.ರೋಡು ಸಮೀಪ ಬ್ರಹ್ಮರಕೂಟ್ಲುವಿನಲ್ಲಿ ಟೋಲ್ ಪ್ಲಾಜಾ ಇದ್ದು, ಇದು ಮುಚ್ಚುವ ಸಾಧ್ಯತೆ ನಿರೀಕ್ಷಿಸಲಾಗಿದೆ. ಪ್ರಸ್ತುತ ವಳಾಲಿನಲ್ಲಿ ಆರಂಭವಾಗಿರುವ ಟೋಲ್ ಪ್ಲಾಜಾ ಜಿಲ್ಲೆಯ ಹೆದ್ದಾರಿಯಲ್ಲಿ ಎರಡನೆಯದ್ದಾಗಿದೆ.
ಪ್ರಸ್ತುತ ಟೋಲ್ ಕೇಂದ್ರ ವಿದ್ಯುತ್ ಚಾಲಿತವಾಗಿ ಕಾರ್ಯಾರಂಭಗೊಂಡಿದ್ದು, ಈ ಪರಿಸರದಲ್ಲಿನ ಸೌರಶಕ್ತಿ ಸದ್ಬಳಕೆ ಮಾಡಿಕೊಳ್ಳುವ ಉದ್ದೇಶದಿಂದ ಸೋಲಾರ್ ವಿದ್ಯುತ್ ಘಟಕವನ್ನೂ ಸ್ಥಾಪಿಸಲಾಗಿದೆ. ಮುಂದಿನ ದಿನಗಳಲ್ಲಿ ಸೌರಶಕ್ತಿ ಬಳಕೆಗೂ ಅವಕಾಶವಿದೆ ಎಂದು ಕೆಎನ್‌ಆರ್ ಸಂಸ್ಥೆಯ ಇಂಜಿನಿಯರ್ ರಘುನಾಥ್ ರೆಡ್ಡಿ ತಿಳಿಸಿದ್ದಾರೆ.
ಎನ್‌ಎಚ್‌ಎಐ ನಿಗದಿಪಡಿಸಿರುವ ಪ್ರಕಾರ, ಕಾರು, ವ್ಯಾನ್ ಸೇರಿದಂತೆ ಲೈಟ್ ಮೋಟಾರು ವಾಹನಗಳಿಗೆ ಏಕಮುಖ ಪ್ರಯಾಣಕ್ಕೆ 140 ರೂ. ಹಾಗೂ 24 ಗಂಟೆಗಳ ಒಳಗೆ ಹಿಂದಿರುಗುವ ಪ್ರಯಾಣಕ್ಕೆ 205 ರೂ. ನಿಗದಿಪಡಿಸಲಾಗಿದೆ. ಲೈಟ್ ವಾಣಿಜ್ಯ ವಾಹನಗಳಿಗೆ ಏಕಮುಖ ಪ್ರಯಾಣಕ್ಕೆ 220 ರೂ. ಮತ್ತು ಹಿಂದಿರುಗುವ ಪ್ರಯಾಣಕ್ಕೆ 335 ರೂ., ಎರಡು ಆ್ಯಕ್ಸಿಲ್ ಬಸ್ ಮತ್ತು ಟ್ರಕ್‌ಗಳಿಗೆ ಕ್ರಮವಾಗಿ 465 ರೂ. ಹಾಗೂ 700 ರೂ., ಮೂರು ಆ್ಯಕ್ಸಿಲ್‌ಗಳ ವಾಣಿಜ್ಯ ವಾಹನಗಳಿಗೆ 510 ರೂ. ಮತ್ತು 760 ರೂ., ಭಾರಿ ನಿರ್ಮಾಣ ಕಾಮಗಾರಿ ವಾಹನಗಳಿಗೆ 730 ರೂ. ಹಾಗೂ 1,095 ರೂ. ಮತ್ತು ಅತಿಯಾದ ಗಾತ್ರದ ವಾಹನಗಳಿಗೆ 890 ರೂ. ಹಾಗೂ 1,335 ರೂ. ಶುಲ್ಕ ನಿಗದಿಪಡಿಸಲಾಗಿದೆ.