

ಬಂಟ್ವಾಳ: ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿ ನಿಲ್ಲಿಸಿದ್ದ ಕಾರು ಹಾಗೂ ದುರಸ್ತಿಗಾಗಿ ನಿಲ್ಲಿಸಿದ್ದ ಕ್ರೇನ್‌ಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೆಕಾನಿಕ್‌ಗಳು ಸೇರಿದಂತೆ ಮೂವರು ಗಾಯಗೊಂಡ ಘಟನೆ ಬಿ.ಸಿ.ರೋಡು-ಬೆಳ್ತಂಗಡಿ ರಾಷ್ಟ್ರೀಯ ಹೆದ್ದಾರಿಯ ಕಳ್ಳಿಮಾರ್‌ನಲ್ಲಿ ಶನಿವಾರ ಸಂಭವಿಸಿದೆ.
ಪುಂಜಾಲಕಟ್ಟೆ ನಿವಾಸಿ ಯು.ಮಹಮ್ಮದ್ ಅವರು ಮಗಳನ್ನು ಕಾರಿನಲ್ಲಿ ಮಂಗಳೂರಿಗೆ ಕರೆದೊಯ್ಯುತ್ತಿದ್ದ ವೇಳೆ ಕಳ್ಳಿಮಾರ್‌ನ ಸುವರ್ಣ ಇಂಜಿನಿಯರಿಂಗ್ ಶಾಪ್ ಮುಂಭಾಗ ಅಪಘಾತ ಸಂಭವಿಸಿದೆ. ಘಟನಾ ಸ್ಥಳಕ್ಕೆ ಬಂಟ್ವಾಳ ಸಂಚಾರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು.
ರಸ್ತೆ ಬದಿ ಕಾರನ್ನು ನಿಲ್ಲಿಸಿ ಅದರ ಮಾಲೀಕ ತೆರಳಿದ್ದರು. ಸಮೀಪದಲ್ಲೇ ಕ್ರೇನ್‌ವೊಂದನ್ನು ದುರಸ್ತಿಗಾಗಿ ನಿಲ್ಲಿಸಲಾಗಿತ್ತು. ಅಯ್ಯಪ್ಪ ಮಾಲಾಧಾರಿ ಮಾಧವ ಕ್ರೇನ್ ದುರಸ್ತಿ ಕಾರ್ಯದಲ್ಲಿ ತೊಡಗಿದ್ದರೆ, ಪುನೀತ್ ಸಜೀಪ ಬೈಕ್‌ನಲ್ಲಿ ಕುಳಿತು ಅವರೊಂದಿಗೆ ಮಾತನಾಡುತ್ತಿದ್ದರು. ಈ ವೇಳೆ ಅತಿ ವೇಗದಲ್ಲಿ ಬಂದ ಕಾರು ರಸ್ತೆ ಬದಿ ನಿಲ್ಲಿಸಿದ್ದ ಕಾರಿಗೆ ಡಿಕ್ಕಿ ಹೊಡೆದು, ಬಳಿಕ ಕ್ರೇನ್‌ಗೆ ಅಪ್ಪಳಿಸಿದೆ. ಡಿಕ್ಕಿಯ ರಭಸಕ್ಕೆ ರಸ್ತೆ ಬದಿಯಿದ್ದ ಕಾರು ಸುಮಾರು 100 ಮೀಟರ್ ದೂರಕ್ಕೆ ಎಸೆಯಲ್ಪಟ್ಟು ನಿಂತಿದೆ. ಡಿಕ್ಕಿಯ ತೀವ್ರತೆಗೆ ಕ್ರೇನ್ ದುರಸ್ತಿ ಮಾಡುತ್ತಿದ್ದ ಮಾಧವ ಹಾಗೂ ಬೈಕ್‌ನಲ್ಲಿದ್ದ ಪುನೀತ್ ಸಜೀಪ ವಾಹನಗಳ ನಡುವೆ ಸಿಲುಕಿ ಗಂಭೀರವಾಗಿ ಗಾಯಗೊಂಡರು. ತಕ್ಷಣ ಸ್ಥಳಕ್ಕೆ ಧಾವಿಸಿದ ಸ್ಥಳೀಯರು ಹರಸಾಹಸಪಟ್ಟು ಇಬ್ಬರನ್ನೂ ಹೊರತೆಗೆದಿದ್ದಾರೆ. ಕಾರು ಚಾಲಕ ಯು.ಮಹಮ್ಮದ್ ಅವರಿಗೂ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಇದೇ ರಸ್ತೆಯಲ್ಲಿ ಸಂಚರಿಸುತ್ತಿದ್ದ ಬಂಟ್ವಾಳ ಶಾಸಕ ರಾಜೇಶ್ ನಾಕ್ ಅಪಘಾತದ ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದರು. ಗಾಯಾಳುಗಳನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲು ಅಗತ್ಯ ವ್ಯವಸ್ಥೆ ಕಲ್ಪಿಸಿದರು.