ಮನೆಗೆ ಬೆಂಕಿ ಹಚ್ಚಿದ ಇಬ್ಬರು ಆರೋಪಿಗಳ ಬಂಧನ

ನ್ಯಾಯಾಂಗ ಬಂಧನ
ARREST
ARREST
Published on: 

ಕಾಸರಗೋಡು: ದಂಪತಿ ಸೇರಿದಂತೆ ಮೂವರಿಗೆ ಇರಿದು ಗಾಯಗೊಳಿಸಿದ ಪ್ರಕರಣದ ಆರೋಪಿಯ ಮನೆಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಅಂಬಲತ್ತರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬೇಕೂರ ಆಟ್ಟಂಗಾನದ ವೆಳ್ಳಮುಂಡ ನಿವಾಸಿಗಳಾದ ವಿ.ಸುನೀಲ್(48) ಮತ್ತು ಕೆ.ಸುಭಾಷ್(37) ಬಂಧಿತರು. ನ್ಯಾಯಾಲಯದ ಆದೇಶದಂತೆ ಇವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆರೋಪಿ ಆಟ್ಟಂಗಾನದ ಶರತ್ ಎಂಬಾತನ ತಾಯಿ ಮನೆಗೆ ಬೀಗ ಹಾಕಿ ಕೆಲಸಕ್ಕೆ ತೆರಳಿದ್ದ ವೇಳೆ ಮನೆಗೆ ಬೆಂಕಿ ಹಚ್ಚಿದ ಪರಿಣಾಮ ಪೀಠೋಪಕರಣ, ಇಲೆಕ್ಟ್ರಾನಿಕ್ ಉಪಕರಣಗಳು ಹಾನಿಗೀಡಾಗಿ 80 ಸಾವಿರ ರೂ. ನಷ್ಟ ಉಂಟಾಗಿತ್ತು. ವೆಳ್ಳಾಮುಂಡ ರಾಘವನ್ ನಾಯರ್, ಅವರ ಪತ್ನಿ ಇಂದಿರಾ, ನೆರೆಮನೆ ನಿವಾಸಿ ಯದುಚಂದ್ರನ್ ಎಂಬುವರನ್ನು ಶರತ್ ಇರಿದು ಗಾಯಗೊಳಿಸಿದ ದ್ವೇಷದಿಂದ ಶರತ್‌ನ ಮನೆಗೆ ಈ ಇಬ್ಬರು ಆರೋಪಿಗಳು ಬೆಂಕಿ ಹಚ್ಚಿದ್ದಾರೆ ಎನ್ನಲಾಗಿದೆ.

25 ವಿದ್ಯಾರ್ಥಿಗಳ ವಿರುದ್ಧ ಕೇಸು

ಕೇಂದ್ರೀಯ ವಿವಿಯಲ್ಲಿ ದಾಂಧಲೆ

ಕಾಸರಗೋಡು: ಕೇಂದ್ರೀಯ ವಿಶ್ವವಿದ್ಯಾಲಯ ಕಾಸರಗೋಡು ಪೆರಿಯ ಕ್ಯಾಂಪಸ್‌ನಲ್ಲಿ ನಡೆದ ‘ವಂದೇ ಮಾತರಂ’ ರಾಷ್ಟ್ರೀಯ ವಿಚಾರ ಸಂಕಿರಣದ ವೇಳೆ ಪ್ರತಿಭಟನೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ 25 ಮಂದಿ ವಿದ್ಯಾರ್ಥಿಗಳ ವಿರುದ್ಧ ಬೇಕಲ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ವಿಚಾರ ಸಂಕಿರಣ ನಡೆಯುತ್ತಿದ್ದ ವೇದಿಕೆ ಮುಂಭಾಗದಲ್ಲಿ ಗುಂಪು ಸೇರಿ ಕಾರ್ಯಕ್ರಮ ಅಸ್ತವ್ಯಸ್ತಗೊಳಿಸಿದ ಆರೋಪವನ್ನು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

ನಾಪತ್ತೆಯಾಗಿದ್ದಾಕೆ ಮದುವೆಯಾಗಿ ಠಾಣೆಗೆ ಹಾಜರ್

ಕಾಸರಗೋಡು: ಮೇಲ್ಪರಂಬ ಪೊಲೀಸ್ ಠಾಣೆ ವ್ಯಾಪ್ತಿಯ ಪೆರುಂಬಳ ಕೋಳಿಯಡ್ಕದಲ್ಲಿ ನಾಪತ್ತೆಯಾಗಿದ್ದ ಗೃಹಿಣಿ ಮತ್ತೊಬ್ಬನನ್ನು ವಿವಾಹವಾಗಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿದೆ. ಹಲೀಮಾ ಸದಿಯ ಎಂಬಾಕೆ ತ್ರಿಶ್ಯೂರ್ ನಿವಾಸಿ ಅಜಯ್ ಎಂಬಾತನನ್ನು ವಿವಾಹವಾಗಿ ಚಿರುತುರುತ್ತಿ ಪೊಲೀಸರ ಮುಂದೆ ಹಾಜರಾಗಿರುವುದಾಗಿ ತ್ರಿಶ್ಯೂರು ಪೊಲೀಸರು ಮೇಲ್ಪರಂಬ ಪೊಲೀಸರಿಗೆ ತಿಳಿಸಿದ್ದಾರೆ. ಸೋಮವಾರ ಹಲೀಮ ನಾಪತ್ತೆಯಾಗಿದ್ದ ಬಗ್ಗೆ ಈಕೆ ತಂದೆ ಮೇಲ್ಪರಂಬ ಠಾಣೆಗೆ ದೂರು ನೀಡಿದ್ದರು. ಹಲೀಮಾ ವಿದೇಶದಲ್ಲಿದ್ದ ಸಂದರ್ಭ ಅಜಯ್‌ನ ಪರಿಚಯವಾಗಿತ್ತು ದೂರಿನಲ್ಲಿ ತಿಳಿಸಲಾಗಿತ್ತು. ಮಹಿಳೆ ಪತ್ತೆಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದರು. ಈ ಮಧ್ಯೆ ಹಲೀಮಾ ಹಾಗೂ ಅಜಯ್ ಮದುವೆಯಾಗಿ ಪೊಲೀಸ್ ಠಾಣೆಯಲ್ಲಿ ಹಾಜರಾದ ವಿಷಯ ಮೇಲ್ಪರಂಬ ಠಾಣೆ ಪೊಲೀಸರ ಮೂಲಕ ಮನೆಯವರಿಗೆ ಲಭಿಸಿದೆ.

ಕೋಳಿ ಅಂಕಕ್ಕೆ ದಾಳಿ, ಏಳು ಮಂದಿ ವಶ

ಕಾಸರಗೋಡು: ಬದಿಯಡ್ಕ ಪಂಚಾಯಿತಿ ಬೇಳ ಬಿರ್ಮಿನಡ್ಕ ಸಮೀಪದ ಪಡಿಯಡ್ಕ ಎಂಬಲ್ಲಿ ನಡೆಯುತ್ತಿದ್ದ ಕೋಳಿಅಂಕಕ್ಕೆ ಬದಿಯಡ್ಕ ಠಾಣೆ ಪೊಲೀಸರು ದಾಳಿ ನಡೆಸಿ ಏಳು ಮಂದಿಯನ್ನು ಸೆರೆಹಿಡಿದಿದ್ದಾರೆ. ಇವರಿಂದ ಏಳು ಅಂಕದ ಕೋಳಿ ಹಾಗೂ 3800 ರೂ. ನಗದು ವಶಪಡಿಸಿಕೊಂಡಿದ್ದಾರೆ. ಬಂಬ್ರಾಣ ನಿವಾಸಿ ಜಯರಾಮ್, ಕುಂಟಾರಿನ ಪಟ್ಟಾಭಿ ಎಂ., ನೀರ್ಚಾಲಿನ ನಾರಾಯಣ ಎನ್.ಕೆ. ಮತ್ತು ಕುಂಬಳೆ ಮುಜಂಗಾವಿನ ಚಂದ್ರ, ಪಳ್ಳಿಕೆರೆ ಪಾಕಂ ನಿವಾಸಿ ಶಶಿ(65), ಪೆರಡಾಲ ಪೀಲಿತ್ತಡ್ಕದ ಪ್ರಜ್ವಲ್, ಪೆರುಂಬಳ ಕೋಳಿಯಡ್ಕದ ಪ್ರಮೋದ್ ಅವರನ್ನು ಬಂಧಿಸಿ ಬಳಿಕ ನೋಟಿಸ್ ನೀಡಿ ಬಿಡುಗಡೆಗೊಳಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net