

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ಏಷ್ಯನ್ ಗೇಮ್ಸ್‌ನಲ್ಲಿ ಬಲಿಷ್ಠ ಇರಾನ್ ತಂಡವನ್ನು ಮಣಿಸಿ ಭಾರತೀಯ ಪುರುಷರ ಕಬಡ್ಡಿ ತಂಡ ಚಿನ್ನದ ಪದಕಕ್ಕೆ ಮುತ್ತಿಕ್ಕಿದೆ. ಕಬಡ್ಡಿ ಲೋಕದಲ್ಲಿ ತನ್ನ ಪ್ರಾಬಲ್ಯ ಮತ್ತೊಮ್ಮೆ ಲೋಕಕ್ಕೆ ಸಾರಿದೆ. ಆದರೆ ಗೆಲುವಿನ ಹಿಂದೆ ಆಟಗಾರರ ಶ್ರಮದ ಜತೆ ಅಳದಂಗಡಿ ಶ್ರೀ ಸತ್ಯದೇವತೆ ಕಲ್ಲುರ್ಟಿಯ ದೈವ ಬಲ ಇತ್ತು ಎನ್ನುವುದು ಇಲ್ಲಿನವರ ಸಂತಸ. ಇಲ್ಲಿ ಹರಕೆ ಹೊತ್ತು ಹೋಗಿದ್ದ ತಂಡದ ನಾಯಕ ಇದೀಗ ಮತ್ತೆ ಬಂದು ಹರಕೆ ತೀರಿಸುವುದಾಗಿ ಹೇಳಿ ಅಚ್ಚರಿ ಮೂಡಿಸಿದ್ದಾರೆ.
ಭಾರತೀಯ ಕಬಡ್ಡಿ ತಂಡದ ನಾಯಕ ಪವನ್ ಶೆರಾವತ್ ಸುಮಾರು ಎರಡು ತಿಂಗಳ ಹಿಂದೆ ಕ್ಷೇತ್ರದ ಕಾರ್ಯಕ್ರಮಕ್ಕೆ ಅಳದಂಗಡಿಯ ಶ್ರೀ ಸತ್ಯದೇವತೆ ಕಲ್ಲುರ್ಟಿ ಕ್ಷೇತ್ರಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಕಲ್ಲುರ್ಟಿ ದೈವದ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸಿದ್ದ ಅವರು, ಏಷ್ಯನ್ ಗೇಮ್ಸ್‌ನಲ್ಲಿ ಭಾರತ ಚಿನ್ನದ ಪದಕ ಗೆದ್ದರೆ ಮತ್ತೆ ಕ್ಷೇತ್ರಕ್ಕೆ ಬರುವುದಾಗಿ ಹೇಳಿದ್ದರು. ಇದೀಗ ಭಾರತ ತಂಡ ಚಿನ್ನದ ಪದಕ ಗೆದ್ದಿರುವ ಬೆನ್ನಲ್ಲೇ ಪವನ್ ಶೆರಾವತ್ ತಾವು ನೀಡಿದ್ದ ಮಾತನ್ನು ನೆನಪಿಸಿಕೊಂಡಿದ್ದಾರೆ.
ಅಳದಂಗಡಿ ಸತ್ಯದೇವತೆ ಕಲ್ಲುರ್ಟಿ ದೈವಸ್ಥಾನದ ಆಡಳಿತ ಮೊಕ್ತೇಸರ ಶಿವಪ್ರಸಾದ್ ಅಜಿಲ ಅವರಿಗೆ ವಾಯ್ಸ ಮೆಸೇಜ್ ಕಳುಹಿಸಿರುವ ಪವನ್ ಶೆರಾವತ್, ಕಲ್ಲುರ್ಟಿ ದೈವದ ಆಶೀರ್ವಾದದಿಂದ ಭಾರತ ತಂಡ ಚಿನ್ನ ಗೆದ್ದಿದೆ. ಭಾರತಕ್ಕೆ ಮರಳಿದ ಬಳಿಕ ಎರಡು ಅಥವಾ ಮೂರು ವಾರಗಳಲ್ಲಿ ಕ್ಷೇತ್ರಕ್ಕೆ ಆಗಮಿಸಿ ಹರಕೆ ತೀರಿಸುತ್ತೇನೆ ಎಂದು ಹೇಳಿದ್ದಾರೆ. ಕ್ಷೇತ್ರವು ಬೆಳ್ತಂಗಡಿ ತಾಲೂಕು ಮಾತ್ರವಲ್ಲದೆ, ತುಳುನಾಡಿನ ಕರುನಾಡಿನ ದೈವ ಭಕ್ತರ ಪಾಲಿಗೆ ಪ್ರಮುಖ ಶ್ರದ್ಧಾಕೇಂದ್ರವಾಗಿದೆ. ಸಂಕಷ್ಟದ ಸಂದರ್ಭ ಕಲ್ಲುರ್ಟಿ ದೈವದ ಮೊರೆ ಹೋಗುವ ಭಕ್ತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಸಿನಿಮಾ ನಟ ದರ್ಶನ್ ಸೇರಿದಂತೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಕೇಂದ್ರ ಸಚಿವೆ ದಿ.ಸುಷ್ಮಾ ಸ್ವರಾಜ್, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಹಲವು ಗಣ್ಯರು ಕ್ಷೇತ್ರಕ್ಕೆ ಭೇಟಿ ನೀಡಿರುವುದು ಕ್ಷೇತ್ರದ ಕಾರಣೀಕತೆಗೆ ಸಾಕ್ಷಿ.
ಭಾರತ ಚಿನ್ನದ ಪದಕ ಗೆದ್ದಿರುವುದು ನಮಗೆ ಸಂತೋಷ ತಂದಿದೆ. ಹಿಂದೆ ನಮ್ಮ ಕ್ಷೇತ್ರಕ್ಕೆ ಬಂದಾಗ ಏಷ್ಯನ್ ಗೇಮ್ಸ್‌ನಲ್ಲಿ ಗೆದ್ದ ಬಳಿಕ ಮತ್ತೆ ಬರುವುದಾಗಿ ಪ್ರಾರ್ಥನೆ ಸಲ್ಲಿಸಿದ್ದರು. ಬಹಿರಂಗ ಸಭೆಯಲ್ಲೂ ತಿಳಿಸಿದ್ದರು. ಅವರ ತಂಡ ಗೆದ್ದಿರುವುದು ಭಾರತಕ್ಕೆ ಹೆಮ್ಮೆ. ಶ್ರೇಷ್ಠ ಆಟಗಾರ ನಮ್ಮಲಿಗೆ ಬಂದಿರುವುದು ನಮಗೆ ಹೆಮ್ಮೆ. ಕೆಲವೇ ದಿನಗಳಲ್ಲಿ ಪವನ್ ಶೆರಾವತ್ ಕ್ಷೇತ್ರಕ್ಕೆ ಬರುವುದಾಗಿ ದೂರವಾಣಿ ಮೂಲಕ ತಿಳಿಸಿದ್ದಾರೆ.
ಶಿವಪ್ರಸಾದ್ ಅಜಿಲ ಆಡಳಿತ ಮೊಕ್ತೇಸರ, ಅಳದಂಗಡಿ ಸತ್ಯದೇವತೆ ಕಲ್ಲುರ್ಟಿ ದೈವಸ್ಥಾನ