

ಬೆಳ್ತಂಗಡಿ: ಥಿಯೇಟರ್ ಇನ್ ಡೈಲಾಗ್ ಪರಿಕಲ್ಪನೆಯು ಸದಾ ಹೊಸತನ ಹಾಗೂ ಕುತೂಹಲವನ್ನು ಮೂಡಿಸುವುದರ ಜತೆಗೆ ರಂಗಭೂಮಿಯಲ್ಲಿನ ವಿವಿಧ ಚಲನಶೀಲ ಪ್ರಯೋಗಗಳು ಮತ್ತು ಸೃಜನಾತ್ಮಕ ಅಭ್ಯಾಸಗಳನ್ನು ಅನ್ವೇಷಿಸಲು ಅವಕಾಶ ನೀಡುತ್ತದೆ. ರಂಗಭೂಮಿ ಸಂವಾದಗಳು ವಿಭಿನ್ನ ಸಂಸ್ಕೃತಿಗಳ ಅನುಭವವನ್ನು ವಿಸ್ತರಿಸುವುದರೊಂದಿಗೆ ಸ್ಥಳೀಯ ಹಾಗೂ ಸ್ವದೇಶಿ ರಂಗಭೂಮಿ ಪರಂಪರೆಗಳನ್ನು ಅರಿಯಲು ಸಹಕಾರಿಯಾಗುತ್ತವೆ ಎಂದು ಪುತ್ತೂರು ವಿವೇಕಾನಂದ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ.ವಾಧವ ಭಟ್ ಎಚ್. ತಿಳಿಸಿದರು.
ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ (ಸ್ವಾಯತ್ತ) ಕಾಲೇಜಿನ ಇಂಗ್ಲಿಷ್ ಪದವಿ ಹಾಗೂ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ವಿಭಾಗಗಳ ವತಿಯಿಂದ ‘ಥಿಯೇಟರ್ ಇನ್ ಡೈಲಾಗ್: ಈಸ್ಟರ್ನ್ ಆ್ಯಂಡ್ ವೆಸ್ಟರ್ನ್ ಟ್ರೆಡಿಷನ್ಸ್, ಎನ್‌ಕೌಂಟರ್ಸ್ ಆ್ಯಂಡ್ ಎಕ್ಸ್‌ಪೆರಿಮೆಂಟೇಶನ್ಸ್’ ವಿಷಯದ ಕುರಿತು ಕಾಲೇಜಿನ ಸಮ್ಯಗ್ದರ್ಶನ ಸಭಾಂಗಣದಲ್ಲಿ ರಾಷ್ಟ್ರಮಟ್ಟದ ವಿಚಾರಸಂಕಿರಣ ಉದ್ಘಾಟಿಸಿ ಮಾತನಾಡಿದರು.
ಪ್ರಾಂಶುಪಾಲ ಪ್ರೊ.ವಿಶ್ವನಾಥ್ ಪಿ. ಅಧ್ಯಕ್ಷತೆ ವಹಿಸಿದ್ದರು. ಹೈದರಬಾದ್‌ನ ಇಎಫ್‌ಎಲ್ ವಿಶ್ವವಿದ್ಯಾಲಯದ ಅನುವಾದ ಅಧ್ಯಯನ ವಿಭಾಗದ ಮುಖ್ಯಸ್ಥ ಪ್ರೊ.ತಾರಕೇಶ್ವರ ವಿ.ಬಿ., ಕಲಬುರಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಇಂಗ್ಲಿಷ್ ಮತ್ತು ವಿದೇಶಿ ಭಾಷೆಗಳ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಮಹೇಂದ್ರ ಎಂ., ಇಂಗ್ಲಿಷ್ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಮುಖ್ಯಸ್ಥೆ ಡಾ.ಮಂಜುಶ್ರೀ ಆರ್., ಕಾಲೇಜಿನ ಆಡಳಿತ ಕುಲಸಚಿವ ಪ್ರೊ.ಶ್ರೀಧರ್ ಎನ್.ಭಟ್, ಪರೀಕ್ಷಾಂಗ ಕುಲಸಚಿವ ಪ್ರೊ.ಗಣೇಶ್ ನಾಯಕ್, ಉಪಪ್ರಾಂಶುಪಾಲೆ ಕೆ.ಪಿ.ನಂದಾಕುವಾರಿ, ಪಿಜಿ ವಿಭಾಗದ ಡೀನ್ ಡಾ.ಸೌಮ್ಯಾ ಬಿ.ಪಿ. ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮದ ಸಂಯೋಜಕ ಗಜಾನನ ಆರ್.ಭಟ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.