ಯಮಸ್ವರೂಪಿ ಸಾಣೂರು ಮಾರ್ಗ!

ಅವೈಜ್ಞಾನಿಕ ಸಂಚಾರ ವ್ಯವಸ್ಥೆಯಿಂದ ಅಪಘಾತ, ವಾಹನ ಸವಾರರಿಗೆ ತೊಂದರೆ
ಒಂದೇ ಭಾಗದ ರಸ್ತೆಯಲ್ಲಿ ಓಡಾಡುವ ವಾಹನಗಳು.
ಒಂದೇ ಭಾಗದ ರಸ್ತೆಯಲ್ಲಿ ಓಡಾಡುವ ವಾಹನಗಳು.
Published on: 

ಹರಿಪ್ರಸಾದ್ ನಂದಳಿಕೆ ಕಾರ್ಕಳ

ಕಾರ್ಕಳದಿಂದ ಮಂಗಳೂರಿನ ಬಿಕರ್ನಕಟ್ಟೆವರೆಗೆ ಸಾಗುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಕಳೆದ ಐದು ವರ್ಷಗಳಿಂದ ನಿಧಾನಗತಿಯಲ್ಲಿ ಅವೈಜ್ಞಾನಿಕವಾಗಿ ಸಾಗುತ್ತಿದ್ದು, ಸಾರ್ವಜನಿಕರ ಪಾಲಿಗೆ ಜೀವಭಯದ ಹಾದಿಯಾಗಿದೆ. ಅದರಲ್ಲೂ ಸಾಣೂರು ಭಾಗದಲ್ಲಿ ನಿರ್ಲಕ್ಷೃದ ಪರಮಾವಧಿ ಮುಂದುವರಿದಿದ್ದು, ಈ ರಸ್ತೆ ಈಗ ಸಾಕ್ಷಾತ್ ಯಮಸ್ವರೂಪಿಯಾಗಿ ಮಾರ್ಪಟ್ಟಿರುವುದು ದುರಂತ.

15 ದಿನಗಳಿಂದ ಸೇತುವೆಯ ಒಂದು ಭಾಗದಲ್ಲಿ ಡಾಂಬರು ಕಾಮಗಾರಿ ನಡೆಯುತ್ತಿದ್ದು, ಎರಡೂ ಕಡೆಯ ವಾಹನಗಳನ್ನು ಒಂದೇ ಬದಿಯಲ್ಲಿ ಸಂಚರಿಸುವಂತೆ ಮಾಡಿರುವುದು ಸರಣಿ ಅಪಘಾತಗಳಿಗೆ ಕಾರಣವಾಗುತ್ತಿದೆ ಎಂಬ ಆರೋಪ ಸ್ಥಳೀಯರಿಂದ ಕೇಳಿಬಂದಿದೆ. ಇದೇ ಸ್ಥಳದಲ್ಲಿ ಭಾನುವಾರ ಮಾಜಿ ಸಚಿವ ಬಿ.ರಮಾನಾಥ್ ರೈ ಪ್ರಯಾಣಿಸುತ್ತಿದ್ದ ಕಾರು ಹಾಗೂ ಖಾಸಗಿ ಬಸ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಅದೃಷ್ಟವಶಾತ್ ಜೀವಹಾನಿ ಸಂಭವಿಸಿಲ್ಲ. ಘಟನೆ ಬಳಿಕ ಹೆದ್ದಾರಿ ಕಾಮಗಾರಿ ಅವ್ಯವಸ್ಥೆ ಮತ್ತೊಮ್ಮೆ ಚರ್ಚೆಗೆ ಬಂದಿದೆ. ಮಂಗಳೂರು ಹಾಗೂ ಕಾರ್ಕಳ ಕಡೆಯಿಂದ ವೇಗವಾಗಿ ಬರುವ ವಾಹನಗಳು ಡಿವೈಡರ್ ಸಮೀಪ ತಿರುವು ಪಡೆಯುವಾಗ ಎದುರು ಬರುವ ವಾಹನದ ಅಂದಾಜು ಸಿಗದೆ ಗೊಂದಲ ಉಂಟಾಗುತ್ತಿದೆ.

ಕಾಮಗಾರಿಯಲ್ಲಿ ವಿಳಂಬ

ರಮಾನಾಥ್ ರೈ ಅವರ ಕಾರು ಅಪಘಾತ ನಡೆದ ಜಾಗದಲ್ಲಿ ಈ ಹಿಂದೆ ಯುಗಾದಿ ಮುನ್ನ ದಿನದಂದು ಸಾಣೂರು ನಿವಾಸಿ ಹರೀಶ್ ಪೂಜಾರಿ ಎಂಬುವರು ಸ್ಕೂಟರ್‌ನಲ್ಲಿ ಬರುತ್ತಿದ್ದ ವೇಳೆ ಮೂಡುಬಿದಿರೆ ಭಾಗದಿಂದ ಬಂದ ಬೈಕ್ ಡಿಕ್ಕಿ ಹೊಡೆದು ಹರೀಶ್ ಸ್ಥಳದಲ್ಲೇ ಮೃತಪಟ್ಟಿದ್ದರು. ಈ ಅಪಘಾತ ನಡೆದು 11 ದಿನಗಳ ಬಳಿಕ ತಂದೆಯೊಬ್ಬರು ಮಗನಿಗೆ ತಿಂಡಿ ತರಲೆಂದು ಅಂಗಡಿಗೆ ತೆರಳಿ ವಾಪಸಾಗುವಾಗ ವೇಗವಾಗಿ ಬಂದ ಟೆಂಪೊ ಡಿಕ್ಕಿಯಾಗಿ ಮೃತಪಟ್ಟಿದ್ದರು. ರಸ್ತೆ ಕಾಮಗಾರಿ ಆರಂಭಗೊಂಡ ಬಳಿಕ ಸಾಲು ಸಾಲು ಅಪಘಾತಗಳ ಸಂಖ್ಯೆ ಹೆಚ್ಚಾಗಿದ್ದು, ಇನ್ನೆಷ್ಟು ಜನ ತೊಂದರೆ ಅನುಭವಿಸಬೇಕು ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮತ್ತಷ್ಟು ಅಪಘಾತ ಸಾಧ್ಯತೆ

ಸಾಣೂರು ಭಾಗದಲ್ಲಿ ಸರಿಯಾದ ಸರ್ವೀಸ್ ರಸ್ತೆಗಳು ನಿರ್ಮಾಣವಾಗದ ಹಿನ್ನೆಲೆಯಲ್ಲಿ ಈಗಾಗಲೇ ಸಾಕಷ್ಟು ಅಪಘಾತಗಳು ನಡೆದಿವೆ. ಸಾಣೂರಿನ ಸೇತುವೆ ಕಾಮಗಾರಿ ನಡೆಯುತ್ತಿದ್ದು, 15 ದಿನಗಳಿಗೊಮ್ಮೆ ಪದೇಪದೆ ರಸ್ತೆ ಬದಲಾವಣೆಯಾಗುತ್ತಿದ್ದು, ವಾಹನ ಸವಾರರು ಎಡವಟ್ಟು ಮಾಡಿಕೊಳ್ಳುವಂತಾಗಿದೆ.

ಸೂಚನಾ ಫಲಕಗಳಿಲ್ಲ

ಸೇತುವೆ ಹಾಗೂ ರಸ್ತೆ ವಿಭಜಕದ ಬಳಿ ಸಮರ್ಪಕ ರಿಫ್ಲೆಕ್ಟರ್‌ಗಳು, ಎಚ್ಚರಿಕೆ ದೀಪಗಳು ಹಾಗೂ ಸೂಚನಾ ಫಲಕಗಳ ಕೊರತೆ ದೊಡ್ಡ ಸಮಸ್ಯೆಯಾಗಿದೆ. ರಾತ್ರಿ ವೇಳೆ ಹಲವು ವಾಹನಗಳು ತಡೆಗೋಡೆ ಹಾಗೂ ಡಿವೈಡರ್‌ಗೆ ಡಿಕ್ಕಿ ಹೊಡೆದಿವೆ. ಧ್ವಂಸಗೊಂಡ ಫಲಕಗಳನ್ನು ಇದುವರೆಗೂ ಮರುಸ್ಥಾಪಿಸಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

5 ವರ್ಷದಿಂದ ಮುಗಿಯದ ಯೋಜನೆ

ಸಾಣೂರು ಬೈಪಾಸ್ ಸರ್ಕಲ್‌ನಿಂದ ಮುರತಂಗಡಿವರೆಗೆ ತಲಾ 4.5 ಕಿ.ಮೀ. ವ್ಯಾಪ್ತಿಯ ಭೂಸ್ವಾಧೀನ ಪ್ರಕ್ರಿಯೆ ವಿಳಂಬದಿಂದ 2021ರ ಜನವರಿಯಲ್ಲಿ ಆರಂಭಗೊಳ್ಳಬೇಕಿದ್ದ ಕಾಮಗಾರಿ ಒಂದು ವರ್ಷ ವಿಸ್ತರಣೆ ಪಡೆದಿತ್ತು. ಆದರೂ 2026ರ ವೇಳೆಗೆ ಇಲ್ಲಿ ಇನ್ನೂ ಒಂದೂವರೆ ವರ್ಷದಷ್ಟು ಕೆಲಸ ಬಾಕಿಯಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಸೇತುವೆ ಸಂಪರ್ಕಿಸುವ 800 ಮೀ. ಡಾಂಬರು ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಜತೆಗೆ 2 ಕಿ.ಮೀ. ಸರ್ವೀಸ್ ರಸ್ತೆ ಕಾಮಗಾರಿ ಬಾಕಿಯಿದ್ದು, ಅನುಮೋದನೆ ವಿಳಂಬದಿಂದ ಕೆಲಸ ಸ್ಥಗಿತಗೊಂಡಿದೆ ಎನ್ನಲಾಗಿದೆ.

ರಾತ್ರಿ ವೇಳೆ ರಿಪ್ಲೆಕ್ಟರ್‌ಗಳ ಕೊರತೆಯಿಂದ ವಾಹನ ಸವಾರರು ದಿಕ್ಕು ತಪ್ಪುವ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನಷ್ಟು ಅವಘಡಗಳು ನಡೆಯುವ ಮುನ್ನ ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವುದು ಅಗತ್ಯ.
ಯುವರಾಜ್ ಜೈನ್ ನಿಕಟ ಪೂರ್ವ ಅಧ್ಯಕ್ಷ, ಸಾಣೂರು ಗ್ರಾಪಂ
ರಾಷ್ಟ್ರೀಯ ಹೆದ್ದಾರಿಯಂತಹ ರಸ್ತೆಯಲ್ಲಿ ಅಪೂರ್ಣ ಕಾಮಗಾರಿ ಹಾಗೂ ಗೊಂದಲದ ಸಂಚಾರ ವ್ಯವಸ್ಥೆಯಿಂದ ಪದೇಪದೆ ಅಪಘಾತಗಳು ಹೆಚ್ಚಳವಾಗುತ್ತಿವೆ. ಅಭಿವೃದ್ಧಿ ನೆಪದಲ್ಲಿ ಇನ್ನೆಷ್ಟು ಅಮಾಯಕರು ಬಲಿಯಾಗಬೇಕು. ಹಲವು ಅಪಘಾತಗಳಿಂದ ಸ್ಥಳೀಯರೆಲ್ಲರೂ ಸಾಕಷ್ಟು ಆತಂಕಗೊಂಡಿದ್ದೇವೆ. ಈ ಕೂಡಲೆ ಸುರಕ್ಷತೆ ಮತ್ತು ಕಾಮಗಾರಿ ವ್ಯವಸ್ಥಿತವಾಗಿಸಲು ಕ್ರಮವಹಿಸಬೇಕು.
ನರಸಿಂಹ ಕಾಮತ್ ಸ್ಥಳೀಯರು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net