

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ಪಡಿತರ ಚೀಟಿಯ ಕೆವೈಸಿಗಾಗಿ ಅಕ್ಟೋಬರ್ 20 ಕೊನೇ ದಿನವಾಗಿದ್ದು, ಪಡಿತರ ಅಂಗಡಿಗಳಲ್ಲಿ ದಿನದಿಂದ ದಿನಕ್ಕೆ ಸರತಿ ಸಾಲು ಹೆಚ್ಚುತ್ತಿದೆ. ಮತ್ತೊಂದೆಡೆ ಪಡಿತರ ಕೆವೈಸಿಗಾಗಿ ಹಲವರ ಆಧಾರ್ ಅಪ್ಡೇಟ್ ಮಾಡಬೇಕಾಗಿರುವ ಕಾರಣ ಬೆರಳೆಣಿಕೆಯ ಆಧಾರ್ ಕೇಂದ್ರಗಳಲ್ಲಿ ನೂಕುನುಗ್ಗಲು ಹೆಚ್ಚಾಗಿದೆ.
ಪಡಿತರ ಚೀಟಿಯಲ್ಲಿರುವ ಕುಟುಂಬ ಸದಸ್ಯರ ಕೆವೈಸಿಗಾಗಿ ಕುಟುಂಬದ ಸದಸ್ಯರೆಲ್ಲರೂ ಪಡಿತರ ಅಂಗಡಿಗಳ ಮುಂದೆ ಸಾಲುಗಟ್ಟಿ ನಿಲ್ಲುತ್ತಿದ್ದಾರೆ. ಪಡಿತರ ಅಂಗಡಿಗಳಲ್ಲಿ ದಿನಕ್ಕೆ 30 ರಿಂದ 40 ಕುಟುಂಬಗಳ ಕೆವೈಸಿ ನಡೆಸಲಾಗುತ್ತಿದೆ. ಅಂಗಡಿಗಳ ಮುಂದೆ ದಿನನಿತ್ಯ 150 ರಿಂದ 200 ಜನರು ಕೆವೈಸಿಗಾಗಿ ಬರುತ್ತಾರೆ. ಬೆಳಗ್ಗೆಯಿಂದ ಸಂಜೆ ತನಕವೂ ಉರಿ ಬಿಸಿಲನ್ನೂ ಲೆಕ್ಕಿಸದೆ ಕೆವೈಸಿ ಮಾಡಬೇಕಾದ ಅನಿವಾರ್ಯತೆಯಿದೆ. ಆಧಾರ್ ಅಪ್ಡೇಟ್, ಸರ್ವರ್ ಇಲ್ಲದೆ ಕೆವೈಸಿ ಆಗುತ್ತಿಲ್ಲ.
ಗ್ರಾಮೀಣ ಪ್ರದೇಶಗಳಲ್ಲಿ ಸರ್ವರ್ ಇನ್ನೂ ಸಮಸ್ಯೆ ಹೆಚ್ಚಾಗಿದ್ದು, ಕೆವೈಸಿ ಮಾಡಿಸಿಕೊಳ್ಳಲು ಸರ್ಕಾರ ಗಡುವು ವಿಧಿಸಿರುವ ಕಾರಣ ಪಡಿತರ ಅಂಗಡಿಗಳಲ್ಲಿ ಒತ್ತಡ ಹೆಚ್ಚಾಗಿದೆ. ಕೆವೈಸಿಯಿಂದ ಪಡಿತರ ಅಂಗಡಿಗಳಲ್ಲಿ ಅಕ್ಕಿ ವಿತರಣೆಗೂ ಸಮಸ್ಯೆ ಉಂಟಾಗಿದೆ.
ಪಡಿತರ ಕೆವೈಸಿಗಾಗಿ ಆಧಾರ್ ಕಾರ್ಡ್ ಅಪ್ಡೇಟ್ ಅನಿವಾರ್ಯವಾದ ಕಾರಣ ತಾಲೂಕಿನ ಬೆರಳೆಣಿಕೆಯ ಆಧಾರ್ ಕೇಂದ್ರಗಳಲ್ಲಿ ಬೆಳಗ್ಗೆ 6 ಗಂಟೆಗೆ ಸರತಿ ಸಾಲಿನಲ್ಲಿ ನಿಂತು ಕೂಪನ್ ಪಡೆಯಬೇಕಾಗಿದೆ. ಕೆಲವರು ವಾರಗಟ್ಟಲೆ ಆಧಾರ್ ಕಾರ್ಡ್ ಅಪ್ಡೇಟ್‌ಗಾಗಿ ಆಧಾರ್ ಕಾರ್ಡ್ ಕೇಂದ್ರಗಳಿಗೆ ಅಲೆದಾಡಿ ಅಪ್ಡೇಟ್ ಮಾಡಿಸಿಕೊಂಡಿದ್ದಾರೆ. ಒಂದು ಆಧಾರ್ ಕೇಂದ್ರದಲ್ಲಿ ದಿನಕ್ಕೆ 20 ರಿಂದ 25 ಜನರ ಆಧಾರ್ ಕಾರ್ಡ್ ಮಾತ್ರ ಅಪ್ಡೇಟ್ ಮಾಡಲಾಗುತ್ತಿದೆ. ಇದರಿಂದಾಗಿ ಬೆಳಗ್ಗೆ 6 ಗಂಟೆಗೆ ಸಣ್ಣಪುಟ್ಟ ಮಕ್ಕಳೊಂದಿಗೆ, ವೃದ್ಧರೊಂದಿಗೆ ವಾಹನ ಬಾಡಿಗೆ ಮಾಡಿಕೊಂಡು ಬಂದು ಕಾಯಬೇಕಾಗಿದೆ. ಕೆಲವರು ಬಂದು ಕೂಪನ್ ಸಿಗದೆ ವಾಪಸ್ ಹೋಗಬೇಕಾದ ಪರಿಸ್ಥಿತಿಯಿದೆ.
ತಾಲೂಕಿನಲ್ಲಿ ಬೆರಳೆಣಿಕೆಯಷ್ಟು ಆಧಾರ್ ಕೇಂದ್ರಗಳಿವೆ. ಬ್ಯಾಂಕ್ ಆಫ್ ಬರೋಡ ಬೆಳ್ತಂಗಡಿ ಶಾಖೆಯಲ್ಲಿ ಆಧಾರ್ ಕಾರ್ಡ್ ಅಪ್ಡೇಟ್ ಮಾಡಲಾಗುತ್ತಿದೆ. ಇನ್ನುಳಿದಂತೆ ಬೆಳ್ತಂಗಡಿ ಅಂಚೆ ಕಚೇರಿ ಸೇರಿದಂತೆ ಗುರುವಾಯನಕೆರೆ, ವೇಣೂರು, ಕೊಯ್ಯೂರು, ಧರ್ಮಸ್ಥಳ ಅಂಚೆ ಕಚೇರಿಯಲ್ಲಿ ಮಾತ್ರ ಆಧಾರ್ ಕಾರ್ಡ್ ಅಪ್ಡೇಟ್ ಮಾಡಲಾಗುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ಸರ್ವರ್ ಸಮಸ್ಯೆಯಿಂದ ದಿನಕ್ಕೆ 5-10 ಅಪ್ಡೇಟ್ ಮಾಡುವುದು ಕಷ್ಟ ಸಾಧ್ಯವಾಗಿದೆ. ತಾಲೂಕಿನ 81 ಗ್ರಾಮಗಳ ಜನರು ಆಧಾರ್ ಅಪ್ಡೇಟ್‌ಗಾಗಿ ಲಭ್ಯವಿರುವ ಕೇಂದ್ರಗಳಲ್ಲಿ ಮುಗಿಬೀಳುವ ಕಾರಣ ಬ್ಯಾಂಕ್, ಅಂಚೆ ಕಚೇರಿಯ ದೈನಂದಿನ ಕೆಲಸ ಕಾರ್ಯಗಳಿಗೆ ಅಡ್ಡಿ ಉಂಟಾಗಿದೆ.