ಸ್ಕೂಟರ್ ಬೆಂಕಿಗಾಹುತಿ

ನೀಲೇಶ್ವರ ಠಾಣೆ ಪೊಲೀಸರು ಕೇಸು ದಾಖಲು
Crime
Crime
Published on: 

ಕಾಸರಗೋಡು: ನೀಲೇಶ್ವರ ಕೋಯಾಬುರ ಇಟ್ಟುಪ್ಪರ ನಿವಾಸಿ, ಸಿಪಿಎಂ ಕಾರ್ಯಕರ್ತ ಪ್ರಕಾಶನ್ ಎಂಬುವರ ಮನೆ ಮುಂದೆ ನಿಲ್ಲಿಸಿದ್ದ ಸ್ಕೂಟರ್ ಬೆಂಕಿಗಾಹುತಿಯಾಗಿದೆ.

ಕಿಡಿಗೇಡಿಗಳು ಸ್ಕೂಟರ್‌ಗೆ ಬೆಂಕಿಹಚ್ಚಿರಬೇಕೆಂದು ಸಂಶಯ ವ್ಯಕ್ತಪಡಿಸಲಾಗಿದೆ. ಸೋಮವಾರ ನಸುಕಿಗೆ ಸ್ಕೂಟರ್ ಬೆಂಕಿಗಾಹುತಿಯಾಗಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ನೀಲೇಶ್ವರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

ಬ್ಯಾಟರಿ ಅಂಗಡಿಯಲ್ಲಿ ನಗದು ಕಳವು

ಕಾಸರಗೋಡು: ಪೆರ್ಲ ಪೇಟೆಯ ಬ್ಯಾಟರಿ ಅಂಗಡಿಯೊಂದರಲ್ಲಿ ಹಾಡಹಗಲೇ 7 ಸಾವಿರ ರೂ. ನಗದು ಎಗರಿಸಲಾಗಿದೆ. ಆರೋಪಿ ಓಡಾಡುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ದಾಖಲಾಗಿದ್ದು, ಆರೋಪಿಯ ಪತ್ತೆಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಮಾಯಿಪ್ಪಾಡಿ ನಿವಾಸಿ ರವಿ ಕುಮಾರ್ ಪೆರ್ಲ ಪೇಟೆಯಲ್ಲಿ ದೀರ್ಘಕಾಲದಿಂದ ಬ್ಯಾಟರಿ ಅಂಗಡಿ ನಡೆಸುತ್ತಿದ್ದಾರೆ. ರವಿ ಕುಮಾರ್ ಪಕ್ಕದ ಅಂಗಡಿಗೆ ತೆರಳಿದ್ದ ವೇಳೆ ಅಪರಿಚಿತ ಯುವಕನೊಬ್ಬ ಅಂಗಡಿಗೆ ನುಗ್ಗಿ ಡ್ರಾಯರ್‌ನಲ್ಲಿದ್ದ ಹಣ ಎಗರಿಸಿ ಪರಾರಿಯಾಗುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಜೂಜಾಟ ನಿರತ ಆರು ಮಂದಿ ಬಂಧನ

ಕಾಸರಗೋಡು: ಬದಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಯ ನೆಲ್ಲಿಯಡ್ಕ ಬಸ್ ನಿಲ್ದಾಣ ವಠಾರದಲ್ಲಿ ಜೂಜಾಟದಲ್ಲಿ ನಿರತರಾಗಿದ್ದ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಪೆರ್ಲ ಬಡಾಜೆ ನಿವಾಸಿ ದಿನೇಶ್(40), ಕುಂಬ್ಡಾಜೆ ಬಳ್ಳಪದವಿನ ನವೀನ್ ಪ್ರಕಾಶ್(50), ಜಯೇಶ್(36), ನಾರಂಪಾಡಿ ನೆಲ್ಲಿಯಡ್ಕದ ಸತೀಶ್ ಪಿ.31), ಉಬೈಸ್(29) ಮತ್ತು ಬೆಳ್ಳೂರು ಕೊಡಿಯಡ್ಕ ನಿವಾಸಿ ಕೃಷ್ಣನ್(25) ಬಂಧಿತರು. ಇವರಿಂದ 2,290 ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಬದಿಯಡ್ಕ ಠಾಣೆ ಎಸ್‌ಐ ಸುನೀಲ್ ಕುಮಾರ್ ನೇತೃತ್ವದ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಖಚಿತ ಮಾಹಿತಿಯನ್ವಯ ದಾಳಿ ನಡೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net