

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ತಂತ್ರಜ್ಞಾನ ಕ್ಷೇತ್ರ ವೇಗವಾಗಿ ಬೆಳೆಯುತ್ತಿರುವ ನಡುವೆಯೂ ಮಾನವೀಯತೆ ಹಾಗೂ ಪರಿಸರ ಸುಸ್ಥಿರತೆಯ ಸವಾಲುಗಳನ್ನು ಎದುರಿಸುತ್ತಿರುವ ಇಂದಿನ ಸಂದರ್ಭದಲ್ಲಿ ವೈಜ್ಞಾನಿಕ ಚಿಂತನೆ ಮತ್ತು ಜವಾಬ್ದಾರಿಯುತ ಸಂಶೋಧನೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಮಂಗಳೂರು ವಿವಿ ರಸಾಯನಶಾಸ್ತ್ರ ವಿಭಾಗದ ಮಾಜಿ ಅಧ್ಯಕ್ಷ ಹಾಗೂ ಪ್ರಾಧ್ಯಾಪಕ ಪ್ರೊ.ಬಿ.ಶಿವರಾಮ ಹೊಳ್ಳ ಹೇಳಿದರು.
ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ(ಸ್ವಾಯತ್ತ) ರಸಾಯನಶಾಸ್ತ್ರ ವಿಭಾಗದ ವತಿಯಿಂದ ಕಾಲೇಜಿನ ಇಂದ್ರಪ್ರಸ್ಥ ಸಭಾಂಗಣದಲ್ಲಿ ಇಛಿಞಖಢ್ಞ2026 ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನನವನ್ನು ಗುರುವಾರ ಉದ್ಘಾಟಿಸಿ ಮಾತನಾಡಿದರು.
ವಿಜ್ಞಾನ ಮತ್ತು ತಂತ್ರಜ್ಞಾನ ಅಭಿವೃದ್ಧಿ ಪರಿಸರದ ಮೇಲೆ ಪ್ರತಿಕೂಲ ಪರಿಣಾಮ ಬೀರದಂತೆ ನೋಡಿಕೊಳ್ಳಬೇಕು. ಭವಿಷ್ಯದ ಪೀಳಿಗೆಯ ಅಗತ್ಯ ಗಮನದಲ್ಲಿಟ್ಟು ಪರಿಸರ ಸುಸ್ಥಿರತೆ ಮತ್ತು ಸುಸ್ಥಿರ ಉತ್ಪಾದನಾ ಕ್ರಮಗಳಿಗೆ ಹೆಚ್ಚಿನ ಒತ್ತು ನೀಡಬೇಕಿದೆ. ರಸಾಯನಶಾಸ್ತ್ರದ ಜ್ಞಾನ ಪ್ರಯೋಗಾಲಯಕ್ಕೆ ಸೀಮಿತವಾಗದೆ ಪ್ರಸ್ತುತ ಜಗತ್ತು ಎದುರಿಸುತ್ತಿರುವ ಆರೋಗ್ಯ, ಪರಿಸರ ಮತ್ತು ಕೈಗಾರಿಕಾ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಪರಿಣಾಮಕಾರಿಯಾಗಿ ಬಳಕೆಯಾಗಬೇಕು ಎಂದರು.
ಪುಣೆಯ ನ್ಯಾಷನಲ್ ಕೆಮಿಕಲ್ ಲ್ಯಾಬೊರೇಟರಿಯ ಮುಖ್ಯ ವಿಜ್ಞಾನಿ ಡಾ.ಭಗವತುಲ ಎಲ್.ವಿ.ಪ್ರಸಾದ್ ಮಾತನಾಡಿದರು.
ಪ್ರಾಂಶುಪಾಲ ಪ್ರೊ.ವಿಶ್ವನಾಥ ಪಿ. ಮಾತನಾಡಿ, ಜ್ಞಾನ ಹಂಚಿಕೊಳ್ಳುವುದು, ವಿಭಿನ್ನ ಆಲೋಚನೆಗಳನ್ನು ಒಗ್ಗೂಡಿಸುವುದು ಮತ್ತು ಸಂಶೋಧನೆಯನ್ನು ಸಮಾಜದ ಅಗತ್ಯಗಳೊಂದಿಗೆ ಸಂಪರ್ಕಿಸುವುದು ರಾಷ್ಟ್ರೀಯ ಸಮ್ಮೇಳನಗಳ ಪ್ರಮುಖ ಉದ್ದೇಶ ಎಂದರು.
ಸಮ್ಮೇಳನ ಪುಸ್ತಕವನ್ನು ಅತಿಥಿಗಳು ಬಿಡುಗಡೆ ಮಾಡಿದರು. ಕನ್ವೀನರ್ ನಂದಾಕುಮಾರಿ ಕೆ.ಪಿ., ಕೋ-ಕನ್ವೀನರ್ ದಿವ್ಯಾ ಹಾಗೂ ಡಾ.ಗಾನವಿ, ಆಡಳಿತ ಕುಲಸಚಿವ ಪ್ರೊ.ಶ್ರೀಧರ್ ಎನ್.ಭಟ್ಟ, ಪರೀಕ್ಷಾಂಗ ಕುಲಸಚಿವ ಗಣೇಶ್ ನಾಯಕ್, ವಿವಿಧ ವಿಭಾಗಗಳ ಮುಖ್ಯಸ್ಥರು, ವಿದ್ಯಾರ್ಥಿಗಳು, ಅಧ್ಯಾಪಕರು, ಸಂಶೋಧಕರು ಉಪಸ್ಥಿತರಿದ್ದರು.
ಸಹಾಯಕ ಪ್ರಾಧ್ಯಾಪಕಿ ಸಂಗೀತಾ ಬಿ., ವಿದ್ಯಾರ್ಥಿನಿ ಅನ್ವಿತಾ ಸೆರಾವೊ ಕಾರ್ಯಕ್ರಮ ನಿರೂಪಿಸಿದರು. ದಿವ್ಯಾ ವಂದಿಸಿದರು.