

ಉಪ್ಪಿನಂಗಡಿ: ಯಾವುದೇ ಒಟಿಪಿ ನೀಡದೆ ಬ್ಯಾಂಕ್ ಖಾತೆಯಿಂದ 54 ಸಾವಿರ ರೂ. ವರ್ಗಾವಣೆಗೊಂಡ ಪ್ರಕರಣವೊಂದು ನಡೆದಿದ್ದು, ಹಣವನ್ನು ತನ್ನ ಖಾತೆಗೆ ಮರು ಜಮೆಗೊಳಿಸಬೇಕೆಂದು ಗ್ರಾಹಕರು ಬ್ಯಾಂಕ್ ಅಧಿಕಾರಿಗಳಿಗೆ ಒತ್ತಾಯಿಸಿದ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ.
ಆಲಂತಾಯ ಗ್ರಾಮದ ಸೋಮಶೇಖರ ಆಚಾರ್ಯ ಎಂಬುವರು ಉಪ್ಪಿನಂಗಡಿ ಕೆನರಾ ಬ್ಯಾಂಕ್ನಲ್ಲಿ ಉಳಿತಾಯ ಖಾತೆ ಹೊಂದಿದ್ದು, ವ್ಯವಹಾರ ನಿಮಿತ್ತ ಗ್ರಾಹಕರೊಬ್ಬರು ಅವರಿಗೆ ಕಳುಹಿಸಿದ್ದ ಹಣ ಖಾತೆಯಲ್ಲಿತ್ತು. ಬುಧವಾರ ಅವರ ಮೊಬೈಲ್ ಏಕಾಏಕಿ ನಿಷ್ಕ್ರೀಯಗೊಂಡು ಬಳಿಕ ಸರಿಯಾಗಿದೆ. ಈ ವೇಳೆ ಅವರ ಖಾತೆಯಿಂದ ಮೊದಲು 1 ರೂ. ಕಡಿತಗೊಂಡಿದ್ದು, ಬಳಿಕ 54000 ರೂ. ಕಡಿತವಾಗಿದೆ. ತಾನು ಯಾರಿಗೂ ಯಾವುದೇ ಒಟಿಪಿ ನೀಡದೆ ಖಾತೆಯಿಂದ ಹಣ ಏಕಾಏಕಿ ವರ್ಗಾವಣೆಗೊಂಡಿರುವುದನ್ನು ಪ್ರಶ್ನಿಸಿ ಸೋಮಶೇಖರ ಆಚಾರ್ಯ, ವರ್ಗಾವಣೆಗೊಂಡ ಹಣವನ್ನು ಮರು ಜಮೆಗೊಳಿಸಬೇಕೆಂದು ಒತ್ತಾಯಿಸಿ ಬ್ಯಾಂಕ್ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.