ಬ್ಯಾಂಕ್ ನೌಕರಿ ನೆಪದಲ್ಲಿ 3.75 ಲಕ್ಷ ರೂ. ವಂಚನೆ

ಹಲವು ವಂಚನೆ ಪ್ರಕರಣಗಳಲ್ಲಿ ಭಾಗಿ
fraud
fraud
Published on: 

ಕಾಸರಗೋಡು: ಬ್ಯಾಂಕ್‌ನಲ್ಲಿ ಉದ್ಯೋಗ ಕೊಡಿಸುವುದಾಗಿ ಭರವಸೆ ನೀಡಿ ಯುವಕನಿಂದ 3.75 ಲಕ್ಷ ರೂ. ಪಡೆದು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ಎರ್ನಾಕುಳಂ ಇಡಪ್ಪಳ್ಳಿ ನಿವಾಸಿ ಕಿಶೋರ್ ಶಂಕರ್ (42) ಎಂಬಾತನನ್ನು ಹೊಸದುರ್ಗ ಪೊಲೀಸರು ತ್ರಿಶ್ಶೂರಿನಿಂದ ಬಂಧಿಸಿದ್ದಾರೆ.

ಆರೋಪಿ ನ.16ರಂದು ಪಳನಿಯಲ್ಲಿ ಪುದುಕೈ ನಿವಾಸಿ ಸಿದ್ಧಾರ್ಥ್‌ನನ್ನು ಪರಿಚಯಿಸಿಕೊಂಡು, ತಾನು ಕಾಸರಗೋಡಿನ ವಿದ್ಯಾನಗರ ಶಾಖೆಯ ಎನ್‌ಆರ್‌ಐ ವಿಭಾಗದ ಪ್ರಬಂಧಕನೆಂದು ಹೇಳಿಕೊಂಡಿದ್ದ.

ಬ್ಯಾಂಕ್‌ನಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ 16ರಿಂದ 23ರವರೆಗೆ ತನ್ನ ಖಾತೆಗೆ 3,75,151 ರೂ. ವರ್ಗಾಯಿಸಿಕೊಂಡು ವಂಚಿಸಿದ್ದ. ಈ ಬಗ್ಗೆ ಸಿದ್ಧಾರ್ಥ್ ನೀಡಿದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿದ್ದರು. ಆರೋಪಿ ಇದೇ ರೀತಿಯ ಹಲವು ವಂಚನೆ ಪ್ರಕರಣಗಳಲ್ಲಿ ಭಾಗಿಯಾಗಿರುವುದು ತಿಳಿದುಬಂದಿದೆ.

ಆರೋಪಿಯ ವಿರುದ್ಧ ಆಲಪ್ಪುಳ ಜಿಲ್ಲೆಯ ಮಾನ್ನಾರ್, ತಿರುವನಂತಪುರದ ಪೇರೂರುಕುಡ, ಮಲಪ್ಪುರ ಜಿಲ್ಲೆಯ ಎಡಕ್ಕರ, ತ್ರಿಶ್ಶೂರು ವೆಸ್ಟ್ ಹಾಗೂ ಕಾಸರಗೋಡು ವಿದ್ಯಾನಗರ ಠಾಣೆಗಳಲ್ಲಿ ಐದು ವಂಚನೆ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.