

ಗುರುಪುರ: ಮಹಾತ್ಮಗಾಂಧಿ ನಗರ ವಿಕಾಸ ಯೋಜನೆಯಡಿ 3 ಕೋಟಿ ರೂ.ಗೂ ಅಧಿಕ ವೆಚ್ಚದಲ್ಲಿ ನಡೆಯಲಿರುವ ರಸ್ತೆ ಅಭಿವೃದ್ಧಿ ಕಾಮಗಾರಿ ಇದಾಗಿದೆ. ಸ್ಥಳೀಯರ ಬೇಡಿಕೆಯಂತೆ ಈ ರಸ್ತೆ ಅಭಿವೃದ್ಧಿಗೆ ಕಳೆದ 3 ವರ್ಷಗಳಿಂದ ಅನುದಾನಕ್ಕಾಗಿ ಪ್ರಯತ್ನಿಸುತ್ತ ಬಂದಿದ್ದೇವೆ. ಅನುದಾನದ ಸಮಸ್ಯೆಯಿಂದ ಕಾಮಗಾರಿ ಕಟ್ಟಕಡೆಗೂ ಬ್ಯಾಂಕ್ ಸಾಲದಲ್ಲಿ ನಡೆಯಲಿದೆ ಎಂದು ಶಾಸಕ ಡಾ.ಭರತ್ ಶೆಟ್ಟಿ ಹೇಳಿದರು.
ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯ 20ನೇ ತಿರುವೈಲು ವಾರ್ಡ್ನ ವಾಮಂಜೂರಿನಿಂದ ಪಿಲಿಕುಳಕ್ಕೆ ಸಂಪರ್ಕ ಕಲ್ಪಿಸುವ ಆಶ್ರಯನಗರ-ಸದಾಶಿವನಗರ ಹಾಗೂ ಅಮೃತನಗರದ 1 ಕಿ.ಮೀ. ಅಂತರದಲ್ಲಿ ನಡೆಯಲಿರುವ ರಸ್ತೆ ಅಗಲೀಕರಣ ಮತ್ತು ಕಾಂಕ್ರೀಟ್ ಕಾಮಗಾರಿಗೆ ಭಾನುವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಅಮೃತನಗರ ಪೌರ ಸಮಿತಿ ಅಧ್ಯಕ್ಷ ಬಾಲಕೃಷ್ಣ ಮಾಸ್ಟರ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಸೇಂಟ್ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕ ಡಾ.ರಮಾನಂದ ಭಟ್ ನಿರೂಪಿಸಿದರು. ನಿಕಟಪೂರ್ವ ಕಾರ್ಪೊರೇಟರ್ ಹೇಮಲತಾ ಆರ್.ಸಾಲ್ಯಾನ್, ಪ್ರಮುಖರಾದ ಉದ್ಯಮಿ ರಘು ಸಾಲ್ಯಾನ್, ಲಕ್ಷ್ಮಣ್ ಶೆಟ್ಟಿಗಾರ, ಸ್ಟೆೃೀನಿ ಕುಟಿನ್ಹೊ, ಸಾಂತನ್ ಡಿಸಿಲ್ವ, ವಕೀಲರಾದ ನಝಹತ್ ಬಾನು, ವಿಠಲ ಭಂಡಾರಿ, ವಿಲಿಯಂ, ಸುನಿತಾ ಶೆಟ್ಟಿ, ಬೇಬಿ, ಅನಿಲ್ ರೈ, ಪೌರ ಸಮಿತಿ ಸದಸ್ಯರು, ಗುತ್ತಿಗೆದಾರ ಸಂಸ್ಥೆ ನ್ಯಾಷನಲ್ ಇನ್ಫ್ರಾ ಪ್ರಾಜೆಕ್ಟ್ನ ಅಬ್ದುಲ್ ಕಲಾಂ ಆಝಾದ್, ಸ್ಥಳೀಯ ನಾಗರಿಕರು ಇದ್ದರು. ಅಮೃತನಗರ ಪೌರ ಸಮಿತಿಯ ಪ್ರಧಾನ ಕಾರ್ಯದರ್ಶಿ ಸುಧಾಕರ ಕಾರಂತ ವಂದಿಸಿದರು.