

ಬದಿಯಡ್ಕ: ಇಂದಿನ ಆಧುನಿಕ ಯುಗದಲ್ಲಿ ನಾವು ಹಲವು ಸವಾಲುಗಳನ್ನು ಎದುರಿಸುತ್ತಿದ್ದೇವೆ. ವಿಶೇಷವಾಗಿ ನಮ್ಮ ಯುವಜನತೆ ಮತ್ತು ಮಕ್ಕಳು ಎದುರಿಸುತ್ತಿರುವ ಮಾನಸಿಕ ಒತ್ತಡ, ಮಾದಕ ದ್ರವ್ಯಗಳ ದುಷ್ಟ ಚಟ ಹಾಗೂ ಮೊಬೈಲ್-ಇಂಟರ್ನೆಟ್‌ಗಳ ಡಿಜಿಟಲ್ ವ್ಯಸನ ನಮ್ಮೆಲ್ಲರಿಗೂ ದೊಡ್ಡ ಚಿಂತೆಯ ವಿಷಯವಾಗಿದೆ. ಇವುಗಳಿಂದ ನಮ್ಮ ಮುಂದಿನ ಪೀಳಿಗೆ ರಕ್ಷಿಸುವುದು ಹೇಗೆ ಎಂಬ ಪ್ರಶ್ನೆಗೆ ಉತ್ತರವೇ ಈ ‘ರಿಲ್ಯಾಕ್ಸ್’ ಯೋಜನೆ ಎಂದು ಬದಿಯಡ್ಕ ಗ್ರಾಪಂ ಅಧ್ಯಕ್ಷ ಶಂಕರ ಡಿ. ಹೇಳಿದರು.
ಬದಿಯಡ್ಕದಲ್ಲಿ ‘ರಿಲೇಕ್ಸ್’ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು. ಬದಿಯಡ್ಕ ಗ್ರಾಪಂ ಉಪಾಧ್ಯಕ್ಷೆ ಅಶ್ವಿನಿ ಕೆ.ಎಂ. ಅಧ್ಯಕ್ಷತೆ ವಹಿಸಿದ್ದರು. ಕಾಸರಗೋಡು ಬ್ಲಾಕ್ ಪಂಚಾಯಿತಿ ಆರೋಗ್ಯ ಮತ್ತು ವಿದ್ಯಾಭ್ಯಾಸ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಎಸ್.ಮೊಯ್ದು, ಬದಿಯಡ್ಕ ಗ್ರಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಹಮೀದ್ ಕೆಡೆಂಜಿ, ಅವಿನಾಶ್ ರೈ, ಬಾಲಕೃಷ್ಣ ಶೆಟ್ಟಿ ಕೆ., ಶಾಹಿನಾ, ಉಷಾ, ಮಧುಸೂದನ, ಹರೀಶ ಇದ್ದರು. ಅಬಕಾರಿ ಇಲಾಖೆ ಅಧಿಕಾರಿ ಜನಾರ್ದನ ವಂದಿಸಿದರು.
ಸರ್ಕಾರದ ನೂರು ದಿನಗಳ ಕರ್ಮ ಯೋಜನೆ ಭಾಗವಾಗಿ, ಕೇರಳದ ಪ್ರತಿಯೊಂದು ಅಬಕಾರಿ ರೇಂಜ್ ಆಫೀಸ್ ವ್ಯಾಪ್ತಿಯಲ್ಲಿ ಸೂಕ್ತವಾದ ಸ್ಥಳ ಗುರುತಿಸಿ, ಸಂಬಂಧಪಟ್ಟ ಸ್ಥಳೀಯಾಡಳಿತ ಸಂಸ್ಥೆಗಳ ಸಹಯೋಗದೊಂದಿಗೆ ಸ್ವಚ್ಛಗೊಳಿಸಿ, ಆ ಪ್ರದೇಶದ ಜನರು ತಮ್ಮ ಬಿಡುವಿನ ಸಮಯ ವಿವಿಧ ಕಲೆ ಮತ್ತು ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಯೋಗ್ಯವಾಗುವಂತೆ ಮಾಡುವ ಯೋಜನೆಯಾಗಿದೆ.