

ಪುತ್ತೂರು ಗ್ರಾಮಾಂತರ: ದ.ಕ. ಜಿಲ್ಲೆಯಲ್ಲಿ ದಿನವಿಡೀ ಬಿಸಿಲಿನ ವಾತಾವರಣವಿತ್ತು. ಸಂಜೆ ಪುತ್ತೂರು, ಪುಣಚ, ವಿಟ್ಲ, ಅಳಿಕೆ ಭಾಗದಲ್ಲಿ ಉತ್ತಮ ಮಳೆಯಾಗಿದೆ. ಕಾಸರಗೋಡು ಜಿಲ್ಲೆಯ ವಿವಿಧೆಡೆ ಗುಡುಗು- ಮಿಂಚು ಸೇರಿದಂತೆ ಸಾಮಾನ್ಯ ಮಳೆಯಾಗಿದೆ. ಕೇರಳದಲ್ಲಿ ಮುಂದಿನ ದಿನಗಳಲ್ಲಿ ಬಿರುಸಿನ ಮಳೆ ಮುಂದುವರಿಯುವ ಸಾಧ್ಯತೆಯಿದ್ದು, ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಗಂಟೆಗೆ 50 ಕಿ.ಮೀ. ವೇಗದವರೆಗೆ ಬಲವಾದ ಗಾಳಿ ಬೀಸುವ ಸಾಧ್ಯತೆಯೂ ಇದೆ ಎಂದು ಕೇಂದ್ರ ಹವಾಮಾನ ಇಲಾಖೆ ತಿಳಿಸಿದೆ. ಕಾಸರಗೋಡು, ಕಣ್ಣೂರು ಸೇರಿದಂತೆ ಶುಕ್ರವಾರ ರಾಜ್ಯದ ಒಂಬತ್ತು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿತ್ತು.
ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿದ್ದ ಬೃಹತ್ ಗಾತ್ರದ ಮರವೊಂದು ಶುಕ್ರವಾರ ಉರುಳಿ ಬಿದ್ದು ಕೌಡಿಚ್ಚಾರು ಸಮೀಪದ ಮಿನೋಜ್ ಕಲ್ಲು ಎಂಬಲ್ಲಿ ವಾಹನ ಸಂಚಾರಕ್ಕೆ ತಡೆಯಾಯಿತು.
ಶುಕ್ರವಾರ ಗುಡುಗು-ಗಾಳಿ ಸಹಿತ ಮಳೆಯಾಗಿದ್ದು, ಮರ ಪುತ್ತೂರು-ಸುಳ್ಯ 110 ಕೆವಿ ಮುಖ್ಯ ಎಚ್‌ಟಿ ವಿದ್ಯುತ್ ಲೈನ್ ಮೇಲೆ ಬಿದ್ದ ಪರಿಣಾಮ ಆ ಭಾಗದ 3 ವಿದ್ಯುತ್ ಕಂಬ ಧರಾಶಾಯಿಯಾಗಿದೆ. ಮರ ಮತ್ತು ವಿದ್ಯುತ್ ಕಂಬದ ನಡುವೆ ಕಾರೊಂದು ಸಿಲುಕಿದೆ.
ಘಟನೆಯಿಂದ ಕೆಲತಾಸು ಕಾಲ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ತಡೆಯುಂಟಾಯಿತು. ಅರಣ್ಯ ಇಲಾಖೆ, ಮೆಸ್ಕಾಂ, ಅಗ್ನಿಶಾಮಕ ದಳದ ಅಧಿಕಾರಿಗಳು ಮತ್ತು ಸಿಬ್ಬಂದಿ ಮತ್ತು ಸಂಪ್ಯ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಸಾರ್ವಜನಿಕರ ಸಹಕಾರದೊಂದಿಗೆ ಮರ ಮತ್ತು ವಿದ್ಯುತ್ ಕಂಬ ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.