ಪುತ್ತೂರು: ವಿದ್ಯುತ್ ಕಾಮಗಾರಿ ಪರಿಶೀಲನೆಗೆಂದು ಗುತ್ತಿಗೆದಾರರ ಸಹಾಯಕಿಯನ್ನು ಕಾರಿನಲ್ಲಿ ಕರೆದುಕೊಂಡು ಹೋದ ಮೆಸ್ಕಾಂ ಸೂಪರ್ವೈಸರ್ ದುರ್ಗಾ ಸಿಂಗ್ ಎಂಬಾತ ಅವರನ್ನು ಮೆಸ್ಕಾಂ ಕ್ವಾರ್ಟರ್ಸ್ಗೆ ಬಲವಂತವಾಗಿ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಎಸಗಿರುವ ಕುರಿತು ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೆಲಸದ ಪರಿಶೀಲನೆ ಬಳಿಕ ಮನೆಗೆ ಕರೆದುಕೊಂಡು ಹೋಗಿ ದೌರ್ಜನ್ಯ ಎಸಗಿದ್ದು, ಮೊಬೈಲ್ನಲ್ಲಿ ಚಿತ್ರೀಕರಿಸಿಕೊಂಡಿದ್ದಾನೆ. ಮಹಿಳೆ ಬೊಬ್ಬೆ ಹಾಕಿ ತಪ್ಪಿಸಿಕೊಂಡು ಮನೆಯಿಂದ ಹೊರ ಬಂದಿದ್ದಾರೆ. ಆರೋಪಿ ವಿಡಿಯೋವನ್ನು ಜಾಲತಾಣದಲ್ಲಿ ಹಾಕುವುದಾಗಿ ಬೆದರಿಕೆ ಹಾಕಿದ್ದಲ್ಲದೆ ಘಟನೆ ಬಗ್ಗೆ ಯಾರಿಗಾದರೂ ತಿಳಿಸಿದರೆ ಉಂಗುರ ಕದ್ದಿರುವುದಾಗಿ ದೂರು ನೀಡುವುದಾಗಿ ಹೆದರಿಸಿದ್ದಾನೆ ಎನ್ನಲಾಗಿದೆ.
ಗುತ್ತಿಗೆದಾರರ ಸಹಾಯಕಿಯೊಬ್ಬರಿಗೆ ದೌರ್ಜನ್ಯ ಎಸಗಲಾಗಿದ್ದು, ಪ್ರಕರಣ ಮುಚ್ಚಿ ಹಾಕಲು ಯತ್ನಿಸಲಾಗಿದೆ ಎಂದು ಪುತ್ತೂರಿನಲ್ಲಿ ನ.೫ರಂದು ನಡೆದ ಉಪವಿಭಾಗದ ಜನಸಂಪರ್ಕ ಸಭೆಯಲ್ಲಿ ಆರೋಪ ಕೇಳಿ ಬಂದಿತ್ತು.
ಸಂತ್ರಸ್ತೆ ದೂರು ನೀಡಲು ಠಾಣೆಗೆ ಹೋದಾಗ ಪ್ರಕರಣ ದಾಖಲಿಸಿಕೊಳ್ಳಲು ಹಿಂದೇಟು ಹಾಕಿದ್ದಾರೆನ್ನಲಾಗಿದೆ. ಬಳಿಕ ಸಂತ್ರಸ್ತೆ ಎಸ್ಪಿ ಅವರನ್ನು ಸಂಪರ್ಕಿಸಿದ ಬಳಿಕ ಎಸ್ಪಿ ಅರುಣ್ ಸೂಚನೆಯಂತೆ ಪ್ರಕರಣ ದಾಖಲಾಗಿದೆ.