ಪುತ್ತೂರಿಗೆ ಬರಲಿ ಕಿದ್ವಾಯಿ, ನಿಮ್ಹಾನ್ಸ್, ಜಯದೇವ PUTTUR

ಹಿರಿಯ ನಾಗರಿಕರ ಹಿತರಕ್ಷಣಾ ಸಮಿತಿಯಿಂದ ಸಹಿ ಅಭಿಯಾನ ಪ್ರಾರಂಭ
Published on: 

ಪುತ್ತೂರು: ಮೆಡಿಕಲ್ ಕಾಲೇಜು ಪುತ್ತೂರಿಗೆ ಆಗಮಿಸುತ್ತಿರುವ ಬೆನ್ನಲ್ಲೇ ಕಿದ್ವಾಯಿ, ನಿಮ್ಹಾನ್ಸ್, ಜಯದೇವ ಸಂಸ್ಥೆಗಳ ಪ್ರಾದೇಶಿಕ ಘಟಕಗಳನ್ನು ಒಂದೇ ಆವರಣದಲ್ಲಿ ಸ್ಥಾಪಿಸುವಂತೆ ಆಗ್ರಹಿಸಿ ಹಿರಿಯ ನಾಗರಿಕರ ಹಿತರಕ್ಷಣಾ ಸಮಿತಿಯಿಂದ ಸಹಿ ಸಂಗ್ರಹ ಅಭಿಯಾನ ಆರಂಭವಾಗಿದೆ.

ಕ್ಯಾನ್ಸರ್, ಹೃದ್ರೋಗ, ಮಾನಸಿಕ ಆರೋಗ್ಯ ಸಮಸ್ಯೆ ಹಾಗೂ ನರಸಂಬಂಽ ಕಾಯಿಲೆಗಳಿಗೆ ದೀರ್ಘಕಾಲದ ಚಿಕಿತ್ಸೆ, ನಿಯಮಿತ ತಪಾಸಣೆ ಮತ್ತು ಪುನರ್ವಸತಿ ಸೇವೆಗಳ ಅಗತ್ಯವಿದೆ. ಪ್ರಸ್ತುತ ಇಂಥ ಸೇವೆಗಳನ್ನು ಪಡೆಯಲು ಜನರು ದೂರದ ಊರುಗಳನ್ನು ಅವಲಂಬಿಸಿದ್ದಾರೆ. ಇದು ಕುಟುಂಬಗಳಿಗೆ ಆರ್ಥಿಕ ಹಾಗೂ ದೈಹಿಕ ಹೊರೆಯಾಗಿ ಪರಿಣಮಿಸುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯ ಸರ್ಕಾರಿ ಮೆಡಿಕಲ್ ಕಾಲೇಜು ಹಾಗೂ ೩೦೦ ಹಾಸಿಗೆ ಆಸ್ಪತ್ರೆ ಪುತ್ತೂರಿನಲ್ಲಿ ಆರಂಭವಾಗುವ ಹಿನ್ನೆಲೆಯ್ಲಲಿ ಈ ಮೂರೂ ಸಂಸ್ಥೆಗಳ ಪ್ರಾದೇಶಿಕ ಘಟಕಗಳು ಪುತ್ತೂರಿನಲ್ಲಿ ಸ್ಥಾಪಿತವಾಗುವುದರಿಂದ ಸುಳ್ಯ, ಬೆಳ್ತಂಗಡಿ, ಕಡಬ, ಬಂಟ್ವಾಳ ಭಾಗದ ಜನರಿಗೂ ಬಹಳಷ್ಟು ಅನುಕೂಲವಾಗಲಿದೆ. ಮೆಡಿಕಲ್ ಹಬ್ ಮಾಡಬೇಕೆಂಬ ಅಶೋಕ್ ಕುಮಾರ್ ರೈ ಅವರ ಕನಸು ಸಾಕಾರಗೊಳ್ಳಲೂ ಇದು ವರದಾನವಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಮುಖ್ಯಮಂತ್ರಿಗೆ ಪತ್ರ

ಈಗಾಗಲೇ ಹಿರಿಯ ನಾಗರಿಕರ ಹಿತರಕ್ಷಣಾ ಸಮಿತಿ ವತಿಯಿಂದ ಮುಖ್ಯಮಂತಿಗಳಿಗೆ ಬೇಡಿಕೆ ಪತ್ರ ರವಾನಿಸಲು ಸಿದ್ಧತೆ ನಡೆಯುತ್ತಿದೆ. ವಿವಿಧ ಕಾರ್ಯಕ್ರಮದಲ್ಲಿ ಜನಜಾಗೃತಿ ಮೂಡಿಸುವ ಪ್ರಯತ್ನ ನಡೆಯುತ್ತಿದೆ. ರೋಗ ನಿರ್ಣಯ, ಚಿಕಿತ್ಸೆ, ಶಸ್ತ್ರಚಿಕಿತ್ಸೆಯಂತಹ ಸೌಲಭ್ಯಗಳು ಒಂದೇಸೂರಿನಡಿ ಸಿಗಬೇಕೆಂಬ ಬೇಡಿಕೆಯನ್ನು ಇಡಲಾಗಿದೆ.

ಹಂತಹಂತವಾಗಿ ನಡೆಯಲಿ

ಗುಣಮಟ್ಟದ ಆರೋಗ್ಯ ಸೇವೆ ಜನರ ಹಕ್ಕಾಗಿದ್ದು, ಸರ್ಕಾರ ಆರ್ಥಿಕ ಹೊರೆಯನ್ನು ನಿಭಾಯಿಸಿಕೊಂಡು ಹಂತ ಹಂತವಾಗಿ ಯೋಜನೆಯನ್ನು ಜಾರಿಗೊಳಿಸುವ ಪ್ರಯತ್ನ ಮಾಡಲಿ ಎಂಬ ಬೇಡಿಕೆಯನ್ನು ಹೋರಾಟಗಾರರು ಮುಂದಿಟ್ಟಿದ್ದಾರೆ. ಬಡವರು ಆರೋಗ್ಯ ಸೇವೆ, ಚಿಕಿತ್ಸೆಯಿಂದ ವಂಚಿತರಾಗಬಾರದೆಂಬ ನಿಟ್ಟಿನಲ್ಲಿ ಉಚಿತವಾಗಿ ಅಥವಾ ಕೈಗೆಟಕುವ ದರದಲ್ಲಿ ಸೇವೆ ನೀಡುವಂತಾಗಬೇಕು ಎಂದು ಮನವಿ ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net