ಪುತ್ತೂರು: ಸಿಪಿಐಎಂ ಪುತ್ತೂರು ತಾಲೂಕು ಸಂಘಟನಾ ಸಮಿತಿ ವತಿಯಿಂದ ‘ಸರ್ಕಾರಿ ಆಸ್ಪತ್ರೆ ಉಳಿಸಿರಿ, ಖಾಸಗಿ ಆಸ್ಪತ್ರೆ ನಿಯಂತ್ರಿಸಿ’ ಮತ್ತು ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆ, ಜಯದೇವ ಹೃದ್ರೋಗ ಆಸ್ಪತ್ರೆಯ ಪ್ರಾದೇಶಿಕ ಘಟಕಗಳನ್ನು ಪುತ್ತೂರಿನಲ್ಲಿ ಸ್ಥಾಪಿಸುವಂತೆ ಆಗ್ರಹಿಸಿ ಪುತ್ತೂರು ಸಹಾಯಕ ಆಯುಕ್ತರ ಕಚೇರಿ ಮುಂಭಾಗದಲ್ಲಿ ಹಕ್ಕೊತ್ತಾಯ ಧರಣಿ ನಡೆಯಿತು.
ಸಿಪಿಐಎಂ ದ.ಕ. ಜಿಲ್ಲಾ ಕಾರ್ಯಕಾರಿ ಮಂಡಳಿ ಸದಸ್ಯ, ವಕೀಲ ಬಿ.ಎಂ.ಭಟ್ ಮಾತನಾಡಿ ಊರಿನ ಜನರ ಆರೋಗ್ಯ ಕಾಪಾಡುವ ಸರ್ಕಾರಿ ಆಸ್ಪತ್ರೆಯ ಆರೋಗ್ಯ ಕೆಟ್ಟಿದೆ ಎಂದರೆ, ಸರ್ಕಾರದ ಆರೋಗ್ಯ ಸರಿಯಿಲ್ಲ ಎಂದೇ ಅರ್ಥ. ಅದಕ್ಕೆ ಔಷಧ ನೀಡಲು ನಾವೇ ಸಿದ್ಧರಾಗಬೇಕಾಗುತ್ತದೆ. ಜನರಿಗೆ ಮೂಲಸೌಕರ್ಯ ಸಿಗದಿರಲು ಆರೋಗ್ಯ ಇಲಾಖೆ ಮಾತ್ರವಲ್ಲ ಶಿಕ್ಷಣ ಇಲಾಖೆ, ತಾಲೂಕು ಕಚೇರಿ, ಪಂಚಾಯಿತಿ ಕಚೇರಿಗಳೆಲ್ಲವೂ ಸಮರ್ಪಕವಾಗಿ ಕಾರ್ಯನಿರ್ವಹಿಸದಿರುವುದಕ್ಕೆ ಸಾಕ್ಷಿಯಾಗಿದೆ. ಶಿಕ್ಷಣ, ಆರೋಗ್ಯವನ್ನು ವ್ಯಾಪಾರೀಕರಣ ಮಾಡಲು ಮುಂದಾಗುತ್ತಿರುವ ಸರ್ಕಾರದ ವಿರುದ್ಧ ಧ್ವನಿ ಎತ್ತಬೇಕು ಎಂದರು.
ಸಿಪಿಐಎಂ ಪುತ್ತೂರು ಕಾರ್ಯದರ್ಶಿ, ವಕೀಲ ಪಿ.ಕೆ.ಸತೀಶನ್ ಮಾತನಾಡಿ ಜನರಿಗೆ ಆರೋಗ್ಯ ಒದಗಿಸುವುದು ಮೂಲಭೂತ ಕರ್ತವ್ಯಗಳಲ್ಲಿ ಒಂದಾಗಿದೆ. ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆ ಸೇರಿ ವಿವಿಧ ಉತ್ತಮ ಸೌಕರ್ಯವಿರುವ ಆಸ್ಪತ್ರೆಯ ಘಟಕಗಳು ಪುತ್ತೂರಿನಲ್ಲಿ ಸ್ಥಾಪನೆಯಾಗಬೇಕು. ಈಗಿರುವ ತಾಲೂಕು ಆಸ್ಪತ್ರೆಯನ್ನು ಅಭಿವೃದ್ಧಿಪಡಿಸಿ ಮೇಲ್ದರ್ಜೆಗೇರಿಸಬೇಕು ಎಂದರು.
ಸಿಪಿಐಎಂ ಜಿಲ್ಲಾ ಸಮಿತಿ ಸದಸ್ಯೆ ಈಶ್ವರಿ ಪದ್ಮುಂಜ, ಮುಖಂಡರಾದ ದಾಮೋದರ, ರಂಜಿತಾ, ಲತಾ, ಸುಧಾ, ಲೀಲಾವತಿ, ತೆರೆಸಾ, ರಾಮಚಂದ್ರ, ಲಕ್ಷ್ಮೀ ಡಿ., ಚಿದಾನಂದ, ಕೃಷ್ಣ ನಿಡ್ಪಳ್ಳಿ ಮೊದಲಾದವರು ಇದ್ದರು.