ಪುತ್ತೂರು: ಲೋಕ ಅದಾಲತ್ ಕಾರ್ಯಕ್ರಮ ಡಿ.೧೨ರಂದು ನಡೆಯಲಿದ್ದು, ಪುತ್ತೂರಿನಲ್ಲಿ ಸುಮಾರು ೮೮೫೦ ಪ್ರಕರಣಗಳು ಇತ್ಯರ್ಥಕ್ಕೆ ಬಾಕಿ ಇದ್ದು, ಅದಾಲತ್‌ಗೆ ೧೨೬೧ ಪ್ರಕರಣವನ್ನು ರಾಜಿಗಾಗಿ ಗುರುತಿಸಲಾಗಿದೆ. ೨೭೨ ಪ್ರಕರಣಗಳನ್ನು ಈಗಾಗಲೇ ಅದಾಲತ್‌ನಲ್ಲಿ ಇತ್ಯರ್ಥಕ್ಕೆ ಸೂಚಿಸಲಾಗಿದೆ ಎಂದು ೫ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಸದಾನಂದ ನಾಗಪ್ಪ ನಾಯ್ಕ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಾರ್ಚ್ ನಡೆದ ಅದಾಲತ್‌ನಲ್ಲಿ ೧೨೭೩ ಪ್ರಕರಣದಲ್ಲಿ ೫೩೯, ಜುಲೈ ಅದಾಲತ್‌ನಲ್ಲಿ ೮೮೦ ಪ್ರಕರಣದಲ್ಲಿ ೬೪೨, ಸೆಪ್ಟೆಂಬರ್‌ನಲ್ಲಿ ೮೯೭ ಪ್ರಕರಣದಲ್ಲಿ ೫೧೫ ಪ್ರಕರಣಗಳನ್ನು ರಾಜಿ ಮೂಲಕ ಇತ್ಯರ್ಥಗೊಳಿಸಲಾಗಿದೆ. ಹೆಚ್ಚಿನ ಪ್ರಕರಣಗಳನ್ನು ಲೋಕ ಅದಾಲತ್ ಮೂಲಕ ಇತ್ಯರ್ಥ ಮಾಡುವ ಗುರಿಯನ್ನು ಹೊಂದಲಾಗಿದೆ. ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.
ನ್ಯಾಯಾಧೀಶೆ ಸಮಂಗಳಾ ಚಕಲಬ್ಬಿ ಮಾತನಾಡಿ, ೧೨ರಂದು ಬೆಳಗ್ಗೆ ೧೧ರಿಂದ ಸಂಜೆ ೫ ಗಂಟೆ ತನಕ ಪುತ್ತೂರಿನ ಪೋಕ್ಸೋ ಸಹಿತ ೭ ನ್ಯಾಯಾಲಯಗಳಲ್ಲೂ ಅದಾಲತ್ ನಡೆಯಲಿದೆ. ಮೊದಲ ಹಂತದಲ್ಲಿ ಇಥ್ಯರ್ತವಾಗದೆ ಎರಡನೇ ಹಂತದಲ್ಲಿರುವ ಪ್ರಕರಣಗಳನ್ನು ಲೋಕ ಅದಾಲತ್‌ನಲ್ಲಿ ಇತ್ಯರ್ಥಗೊಳಿಸಲು ಅವಕಾಶವಿದೆ. ಅದಾಲತ್ ದಿನ ಬೆಳಗ್ಗೆಯೂ ಪ್ರಕರಣ ಇತ್ಯರ್ಥ ಮಾಡಿಕೊಳ್ಳಲು ಅವಕಾಶವಿದೆ. ಸಿವಿಲ್ ಪ್ರಕರಣದಲ್ಲಿ ನ್ಯಾಯಾಲಯ ಶುಲ್ಕ ಸಂಪೂರ್ಣ ವಾಪಸಾಗುತ್ತದೆ ಎಂದರು.
ನ್ಯಾಯಾಧೀಶರಾದ ದೇವರಾಜ್, ಪ್ರಕೃತಿ ಕಲ್ಯಾಣಪುರ, ವೈ.ಹರಿಹರನ್, ರಮ್ಯಾ ಆರ್., ವಕೀಲ ಸಂಘದ ಅಧ್ಯಕ್ಷ ಸಂತೋಷ್ ಮತ್ತಿತರರು ಉಪಸ್ಥಿತರಿದ್ದರು.