ತೆಂಕುತಿಟ್ಟು ಯಕ್ಷಗಾನದ ಮೆರುಗು ಹೆಚ್ಚಿಸುವ ಬಣ್ಣದ ವೇಷ PUTTUR

ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಚಿಂತನೆ | ಬಣ್ಣದ ಮಹಾಲಿಂಗ ಸಂಸ್ಮರಣೆ, ಪ್ರಶಸ್ತಿ ಪ್ರದಾನ
puttur bannada mahalinga
ಬಣ್ಣದ ಮಹಾಲಿಂಗ ಯಕ್ಷ ಪ್ರತಿಷ್ಠಾನ ದಶಮಾನೋತ್ಸವ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಉದ್ಘಾಟಿಸಿದರು. ನಳಿನ್ ಕುಮಾರ್, ಕೆ.ರಾಮ ಮುಗ್ರೋಡಿ, ಶಿವಶಂಕರ ನೆಕ್ರಾಜೆ ಇದ್ದರು.
Published on: 

ಪುತ್ತೂರು: ತೆಂಕುತಿಟ್ಟು ಯಕ್ಷಗಾನದ ಮೆರುಗು ಹೆಚ್ಚಿಸುವಲ್ಲಿ ಬಣ್ಣದ ವೇಷಗಳ ಪಾತ್ರ ದೊಡ್ಡದಿದೆ. ಬಣ್ಣದ ವೇಷ ಸಿದ್ಧವಾಗುವುದಕ್ಕೆ ಶ್ರಮ ಹೆಚ್ಚಿದ್ದರೂ, ವೇದಿಕೆಯಲ್ಲಿ ಕೆಲಸ ಕಡಿಮೆ. ಸರಳ ವ್ಯಕ್ತಿತ್ವ ಹೊಂದಿದ ಬಣ್ಣದ ಮಹಾಲಿಂಗ ಸಜ್ಜನರಾಗಿದ್ದರು. ವೇಷಗಳ ಬಗ್ಗೆ ಬದ್ಧತೆ ಹಾಗೂ ನಿಷ್ಠೆ ಹೊಂದಿದ್ದವರು. ಅವರ ಹೆಸರಿನಲ್ಲಿ ಪ್ರತಿಷ್ಠಾನದ ಕೆಲಸ ಕಾರ್ಯ ಅನುಕರಣೀಯ ಎಂದು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಹೇಳಿದರು.

ಜೈನ ಭವನದಲ್ಲಿ ಬಣ್ಣದ ಮಹಾಲಿಂಗ ಯಕ್ಷ ಪ್ರತಿಷ್ಠಾನ ವತಿಯಿಂದ ದಶಮಾನೋತ್ಸವ ಕಾರ್ಯಕ್ರಮದಲ್ಲಿ ಬಣ್ಣದ ಮಹಾಲಿಂಗ ಸಂಸ್ಮರಣೆ, ಪ್ರಶಸ್ತಿ ಪ್ರದಾನ ಮತ್ತು ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದರು.

ದಶಮಾನೋತ್ಸವ ಸಮಿತಿ ಅಧ್ಯಕ್ಷ ಕೆ.ರಾಮ ಮುಗ್ರೋಡಿ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಅರ್ಥಧಾರಿ ಜಬ್ಬಾರ್ ಸಮೊ ಸಂಪಾಜೆ ಸಂಸ್ಮರಣೆ ನಡೆಸಿದರು. ಪೆರ್ಣೆ ಮುಚ್ಚಿಲೋಟ್ ಭಗವತಿ ಕ್ಷೇತ್ರದ ರಮೇಶ್ ಚೆಟ್ಟಿಯಾನ್ ಶುಭಾಶಂಸನೆ ಮಾಡಿದರು. ಜಯರಾಮ ಪಾಟಾಳಿ ಪಡುಮಲೆ ಅಭಿನಂದನಾ ಭಾಷಣ ಮಾಡಿದರು.

ಹಿರಿಯ ಬಣ್ಣದ ವೇಷಧಾರಿ ಶಶಿಧರ ಶೆಟ್ಟಿ ಪಂಜ ಅವರಿಗೆ ಯಕ್ಷ ಪ್ರಶಸ್ತಿ, ಪೂರ್ಣಿಮಾ ಯತೀಶ್ ರೈ ಅವರಿಗೆ ದಶಮಾನೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಯಿತು. ಹಿರಿಯ ಯಕ್ಷಗಾನ ಕಲಾವಿದ ಜಯಪ್ರಕಾಶ್ ಕಲ್ಮಡ್ಕ ಅವರನ್ನು ಸನ್ಮಾನಿಸಲಾಯಿತು.

ಶಾಸಕ ಅಶೋಕ್ ಕುಮಾರ್ ರೈ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಉದ್ಯಮಿ ಶಿವಶಂಕರ ನೆಕ್ರಾಜೆ, ಗುತ್ತಿಗೆದಾರ ಬಾಲಚಂದ್ರ ಅಡ್ಕಾರು ಉಪಸ್ಥಿತರಿದ್ದರು.

ಯಕ್ಷ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ನಾರಾಯಣ ದೇಲಂಪಾಡಿ ಸ್ವಾಗತಿಸಿದರು. ಅಧ್ಯಕ್ಷ ಗೋಪಾಲಕೃಷ್ಣ ಪಂಜತ್ತೊಟ್ಟಿ ಪ್ರಸ್ತಾವನೆಗೈದರು. ಉಪಾಧ್ಯಕ್ಷ ಸುಬ್ಬಪ್ಪ ಪಟ್ಟೆ ವಂದಿಸಿದರು. ನಾಗೇಶ್ ಪಾಟಾಳಿ ಪೆರುವಾಯಿ ಕಾರ್ಯಕ್ರಮ ನಿರೂಪಿಸಿದರು.

ಕಲಾವಿದ ಯಕ್ಷ ರಂಗದಲ್ಲಿ ಮೆರೆದ ಕಾರಣ ಇಂದು ಎಲ್ಲರೂ ನೆನಪಿಸಿಕೊಳ್ಳುವಂತೆ ಮಾಡಿದೆ. ಹಿಂದಿನ ತಲೆಮಾರು ಯಕ್ಷಗಾನಕ್ಕೆ ನೀಡಿದ ಕೊಡುಗೆಯನ್ನು ಮುಂದಿನ ಜನಾಂಗಕ್ಕೆ ತಿಳಿಸುವ ಕಾರ್ಯವಾಗಬೇಕು. ಪ್ರತಿಷ್ಠಾನ ಇನ್ನಷ್ಟು ಬೆಳೆಯುವ ಮೂಲಕ ಯಕ್ಷಗಾನ ಬೆಳಗುತ್ತಾ ಬಣ್ಣದ ಮಹಾಲಿಂಗರ ಹೆಸರು ಶಾಶ್ವತವಾಗಿ ಉಳಿಯುವಂತಾಗಬೇಕು.
ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ, ಎಡನೀರು ಮಠಾಧೀಶ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net