

ಕಾಸರಗೋಡು: ಉಪ್ಪಳ ಮಣ್ಣಂಗುಳಿ ರಸ್ತೆ ಬದಿ ನಿಲ್ಲಿಸಲಾಗಿದ್ದ ಲಾರಿಯ ಹಿಂಬದಿಗೆ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಬಸ್ಸಿನಲ್ಲಿದ್ದ ಹಲವು ಮಂದಿ ಪ್ರಯಾಣಿಕರು ಗಾಯಗೊಂಡಿದ್ದಾರೆ.
ಗಂಭೀರ ಗಾಯಗೊಂಡಿರುವ ಮಣ್ಣಂಗುಳಿ ನಿವಾಸಿ ಇಸ್ಮಾಯಿಲ್ ಅವರನ್ನು ದೇರಳಕಟ್ಟೆಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದಲ್ಲಿ ಸಣ್ಣಪುಟ್ಟ ಗಾಯಗೊಂಡ ಇತರ ಪ್ರಯಾಣಿಕರನ್ನು ಬಸ್ ಸಿಬ್ಬಂದಿ ಹಾಗೂ ಸ್ಥಳೀಯರು ಮಂಗಲ್ಪಾಡಿ ಸರ್ಕಾರಿ ಆಸ್ಪತ್ರೆ ಹಾಗೂ ಉಪ್ಪಳದ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಿದ ಬಳಿಕ ಬಿಡುಗಡೆಗೊಳಿಸಲಾಗಿದೆ. ಬಾಯಾರಿನಿಂದ ಉಪ್ಪಳಕ್ಕೆ ತೆರಳುತ್ತಿದ್ದ ಖಾಸಗಿ ಬಸ್, ಎದುರಿನಿಂದ ಬರುತ್ತಿದ್ದ ವಾಹನಕ್ಕೆ ಹಾದಿ ಮಾಡಿಕೊಡುವ ಯತ್ನದ ಮಧ್ಯೆ ನಿಯಂತ್ರಣ ತಪ್ಪಿ, ಮಣ್ಣಂಗುಳಿ ರಸ್ತೆ ಬದಿ ಟಯರ್ ಪಂಕ್ಚರ್ ಆಗಿ ನಿಂತಿದ್ದ ಲಾರಿಯ ಹಿಂಭಾಗಕ್ಕೆ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ.
ಕಾಸರಗೋಡು: ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ಮಂಜೇಶ್ವರ ಕಜಿ ರಸ್ತೆಯಲ್ಲಿರುವ ಕವತ್ತು ಮಖಾಂನ ಬಾಗಿಲು ಒಡೆದು ನುಗ್ಗಿದ ಕಳ್ಳರು ಇಟ್ಟಿಗೆಯಿಂದ ನಿರ್ಮಿಸಿದ್ದ ಕಾಣಿಕೆ ಹುಂಡಿ ಕೆಡವಿ ನಗದು ದೋಚಿದ್ದಾರೆ. ಅಲ್ಲದೆ ದರ್ಗಾದೊಳಗಿನ ಟೈಲ್ಸ್ ಅಳವಡಿಸಿ ನಿರ್ಮಿಸಿದ ಕಾಣಿಕೆ ಡಬ್ಬಿ ಕೆಡವಲಾಗಿದ್ದು, ಹಣ ದೋಚಲು ಕಳ್ಳರಿಗೆ ಸಾಧ್ಯವಾಗಲಿಲ್ಲ ಎಂದು ಮಸೀದಿ ಸಮಿತಿ ಪದಾಧಿಕಾರಿಗಳು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಉಪ್ಪಳ ಗೇಟ್ನಲ್ಲಿ ವಾಸಿಸುವ ಉಸ್ತಾದ್ ಅಶ್ರಫ್ ಶುಕ್ರವಾರ ರಾತ್ರಿ ಮಖಾಂ ಬಾಗಿಲು ಮುಚ್ಚಿ ತೆರಳಿದ್ದು, ಶನಿವಾರ ವಾಪಸಾದಾಗ ಕಳವು ನಡೆದಿರುವುದು ಬೆಳಕಿಗೆ ಬಂದಿದೆ. ಮಂಜೇಶ್ವರ ಠಾಣೆ ಎಸ್ಐ ಅಜೂನ್ ಅರವಿಂದ್ ನೇತೃತ್ವದಲ್ಲಿ ಪೊಲೀಸರ ತಂಡ ಸ್ಥಳಕ್ಕೆ ಭೇಟಿ ಮಾಹಿತಿ ಸಂಗ್ರಹಿಸಿದರು.