ಬೈಕ್ ಅಪಘಾತದಲ್ಲಿ ಪಂಚಾಯಿತಿ ಕ್ಲರ್ಕ್ ಮೃತ್ಯು

ಕಾಸರಗೋಡು ಜಿಲ್ಲೆಯ ಕುತ್ತಿಕೋಲ್ ಗ್ರಾಪಂ ಉದ್ಯೋಗಿ
accident highway
ACCIDENT
Published on: 

ಕಾಸರಗೋಡು: ಕೊಲ್ಲಂನಲ್ಲಿ ಸಂಭವಿಸಿದ ಬೈಕ್ ಅಪಘಾತದಲ್ಲಿ ಗಾಯಗೊಂಡಿದ್ದ ಕಾಸರಗೋಡು ಜಿಲ್ಲೆಯ ಕುತ್ತಿಕೋಲ್ ಗ್ರಾಪಂ ಕ್ಲರ್ಕ್, ಕೊಲ್ಲಂ ನಿವಾಸಿ ಅಲೆಕ್ಸ್ ಜೋನ್ಸನ್ (28) ಚಿಕಿತ್ಸೆಗೆ ಸ್ಪಂದಿಸದೆ ಶುಕ್ರವಾರ ಮೃತಪಟ್ಟಿದ್ದಾರೆ. ಸೆ.21ರಂದು ಬೈಕ್‌ನಲ್ಲಿ ಹೋಗುತ್ತಿದ್ದಾಗ ಅಡ್ಡಬಂದ ಬೆಕ್ಕಿಗೆ ಬೈಕ್ ಡಿಕ್ಕಿ ತಪ್ಪಿಸಲು ಮುಂದಾದಾಗ ನಿಯಂತ್ರಣ ತಪ್ಪಿದ ಬೈಕ್ ಮಗುಚಿ ಬಿದ್ದು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು.

ಆಮ್ಲಜನಕ ಪೂರೈಕೆಯಾಗದೆ ವೃದ್ಧೆ ಸಾವು

ಕಾಸರಗೋಡು: ಕಾಞಂಗಾಡಿನಲ್ಲಿ ನಿರಂತರ ಆರು ತಾಸು ವಿದ್ಯುತ್ ಪೂರೈಕೆ ಸ್ಥಗಿತಗೊಂಡ ಹಿನ್ನೆಲೆ ಆಮ್ಲಜನಕ ಕಾನ್ಸೆಂಟ್ರೇಟರ್ ಕಾರ್ಯನಿರ್ವಹಿಸದೆ ಅತಿಞೌಲ್ ಕೆ.ಕೆ.ಪುರ ನಿವಾಸಿ ಬೀರಾನ್ ಕಾದರ್ ಖಾದರ್ ಅವರ ಪತ್ನಿ ಮರಿಯಂ(75) ಮೃತಪಟಿದ್ದಾರೆ. ಕಫದ ಸಮಸ್ಯೆಗಾಗಿ ಚಿಕಿತ್ಸೆ ಪಡೆಯುತ್ತಿದ್ದ ಮರಿಯಂ ಅವರನ್ನು ಎರಡು ದಿನಗಳ ಹಿಂದೆ ಆಸ್ಪತ್ರೆಯಿಂದ ಮನೆಗೆ ಕರೆತರಲಾಗಿತ್ತು. ಬಳಿಕ ಆಮ್ಲಜನಕ ಕಾನ್ಸೆಂಟ್ರೇಟರ್ ನೆರವಿನಿಂದ ಮನೆಯಲ್ಲೇ ಚಿಕಿತ್ಸೆ ಮುಂದುವರಿಸಲಾಗಿತ್ತು.

ಶುಕ್ರವಾರ ಮಧ್ಯಾಹ್ನ ಸುಮಾರು 2.30ಕ್ಕೆ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದ್ದು, ರಾತ್ರಿ 8.30ರ ನಂತರ ವಿದ್ಯುತ್ ಬಂದಿದೆ. ವಿದ್ಯುತ್ ಕಡಿತದಿಂದ ರಾತ್ರಿ ವೇಳೆಗೆ ಇನ್ವರ್ಟರ್‌ನ ಚಾರ್ಜ್ ಸಂಪೂರ್ಣ ಖಾಲಿಯಾದ ಹಿನ್ನೆಲೆ ಆಮ್ಲಜನಕ ಕಾನ್ಸೆಂಟ್ರೇಟರ್ ಸ್ಥಗಿತಗೊಂಡಿದ್ದು, ಇದಾದ ಅಲ್ಪ ಹೊತ್ತಿನಲ್ಲಿ ಮರಿಯಂ ಮೃತಪಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net