

ಬೆಳ್ತಂಗಡಿ: ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರಗಳು ವಿದ್ಯಾರ್ಥಿಗಳನ್ನು ಹೊಸ ಚಿಂತನೆಯ ಕಡೆಗೆ ಕೊಂಡೊಯ್ಯಲು ಸಹಕಾರಿಯಾಗಿದೆ. ಶಿಬಿರಗಳ ಮೂಲಕ ಜೀವನ ಮೌಲ್ಯದ ಶಿಕ್ಷಣ ದೊರೆಯುತ್ತಿದ್ದು, ಉತ್ತಮ ಜೀವನ ಕಟ್ಟಿಕೊಳ್ಳಲು ಸಹಕಾರಿಯಾಗಿದೆ ಎಂದು ಪ್ರಗತಿಪರ ಕೃಷಿಕ ಸಂತೋಷ್ ಸಾಲಿಯಾನ್ ಕಾಪಿನಡ್ಕ ಹೇಳಿದರು.
ಬಳಂಜ ಸರ್ಕಾರಿ ಉನ್ನತೀಕರಿಸಿದ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಶ್ರೀ ಗುರುದೇವ ಪದವಿ ಪೂರ್ವ ಕಾಲೇಜಿನ ಎನ್ಎಸ್ಎಸ್ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ವಿದ್ಯಾರ್ಥಿಗಳು ಕ್ಷಣಿಕ ಸುಖದ ಕಡೆಗೆ ಆಸಕ್ತರಾಗದೆ ಬದುಕನ್ನು ಬೆಳಗಿಸುವ ಕಡೆಗೆ ಸದಾ ಪ್ರಯತ್ನಶೀಲರಾಗಬೇಕು. ಎನ್ಎಸ್ಎಸ್ ಶಿಬಿರದ ಮೂಲಕ ಸಿಗುವ ಮೌಲ್ಯಯುತ ವಿಚಾರಗಳನ್ನು ಬದುಕಿನ ಉದ್ದಕ್ಕೂ ಅಳವಡಿಸಿಕೊಳ್ಳಬೇಕು ಎಂದರು.
ಶ್ರೀ ಗುರುದೇವ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸುಕೇಶ್ ಕುಮಾರ್ ಕೆ. ಅಧ್ಯಕ್ಷತೆ ವಹಿಸಿದ್ದರು.
ಅಳದಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ರಾಕೇಶ್ ಹೆಗ್ಡೆ, ಉದ್ಯಮಿ ಶೇಖರ್ ದೇವಾಡಿಗ ಪಾಲಬೆ, ಬಳಂಜ ಶಾಲಾ ಶಿಕ್ಷಣ ಟ್ರಸ್ಟ್ ಅಧ್ಯಕ್ಷ ಮನೋಹರ್ ಬಳಂಜ, ಕಾರ್ಯದರ್ಶಿ ರತ್ನರಾಜ ಜೈನ್, ವಕೀಲ ಸತೀಶ್ ರೈ ಬಾರ್ದಡ್ಕ, ಬಿ.ಯುವರಾಜ, ಉಪನ್ಯಾಸಕ ದಿನೇಶ್ ಬಿ.ಕೆ., ಪ್ರೌಢಶಾಲೆ ಮುಖ್ಯಶಿಕ್ಷಕಿ ಸುಲೋಚನಾ, ಘಟಕದ ನಾಯಕಿ ಸಾನಿಕಾ ಉಪಸ್ಥಿತರಿದ್ದರು.
ಶಿಬಿರಕ್ಕೆ ಸಹಕರಿಸಿದವರನ್ನು ಗೌರವಿಸಲಾಯಿತು. ಸಹ ಶಿಬಿರಾಧಿಕಾರಿಗಳಾದ ಅನನ್ಯಾ ಸ್ವಾಗತಿಸಿದರು. ಸಹ ಶಿಬಿರಾಧಿಕಾರಿ ಸೌಜನ್ಯಾ ಮತ್ತು ಶಿಬಿರಾರ್ಥಿ ದೀಪಿಕಾ ಕಾರ್ಯಕ್ರಮ ನಿರೂಪಿಸಿದರು. ಶಿಬಿರಾಧಿಕಾರಿ ಗಣೇಶ್ ಬಿ.ಶಿರ್ಲಾಲು ವಂದಿಸಿದರು.