

ವಿಜಯವಾಣಿ ಸುದ್ದಿಜಾಲ ಉಳ್ಳಾಲ
ಇರುವುದೇ ಕೇವಲ ಆರಡಿ ಅಗಲದ ಸರ್ವೀಸ್ ರಸ್ತೆ; ಅದರಲ್ಲೂ ಅರ್ಧಪಾಲು ವ್ಯಾಪಾರಿಗಳ ಕಾರು ಪಾರ್ಕಿಂಗ್ ಪಾಲು... ಇನ್ನೊಂದೆಡೆ ಇರುವ ಮೂರಡಿ ಫುಟ್‌ಪಾತ್ ದ್ವಿಚಕ್ರ ವಾಹನಗಳ ಪಾಲು... ಇವೆರಡರ ನಡುವೆ ಸಿಲುಕಿ ಪಾದಚಾರಿಗಳು ಜೀವ ಕೈಯಲ್ಲಿ ಹಿಡಿದು ಸಾಗಬೇಕಾದ ದುಸ್ಥಿತಿ ತೊಕ್ಕೊಟ್ಟಿನಲ್ಲಿ ನಿರ್ಮಾಣವಾಗಿದ್ದು, ಸಂಚಾರ ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕೆಂಬ ಕೂಗು ಸಾರ್ವಜನಿಕ ವಲಯದಿಂದ ಕೇಳಿಬಂದಿದೆ.
ತೊಕ್ಕೊಟ್ಟಿನಲ್ಲಿ ರಾಷ್ಟ್ರೀಯ ಹೆದ್ದಾರಿ ಮೇಲ್ಸೇತುವೆ ನಿರ್ಮಾಣದ ವೇಳೆ ಇಕ್ಕೆಲಗಳಲ್ಲಿ ಕೇವಲ ಆರಡಿ ಅಗಲದ ಸರ್ವೀಸ್ ರಸ್ತೆ ನಿರ್ಮಿಸಲಾಗಿದೆ. ಇದರಿಂದ ವಾಹನಗಳು ನಿತ್ಯವೂ ಸರ್ಕಸ್ ಮಾಡುತ್ತಾ, ಆಮೆಗತಿಯಲ್ಲಿ ಸಾಗಬೇಕಾದ ಅನಿವಾರ್ಯತೆ ಇದೆ. ಸಂಚಾರ ದಟ್ಟಣೆ ನಿಯಂತ್ರಿಸಲು ಸಚಿವ ಯು.ಟಿ.ಖಾದರ್ ಸೂಚನೆಯಂತೆ ವನ್‌ವೇ ವ್ಯವಸ್ಥೆ ಜಾರಿಗೊಳಿಸಲಾಗಿದ್ದರೂ, ಕೆಲ ಸವಾರರು ಪೊಲೀಸರ ಕಣ್ತಪ್ಪಿಸಿ ವಿರುದ್ಧ ದಿಕ್ಕಿನಲ್ಲಿ ನುಗ್ಗುತ್ತಿರುವುದು ಸಮಸ್ಯೆಯನ್ನು ಮತ್ತಷ್ಟು ಜಟಿಲಗೊಳಿಸಿದೆ.
ಏಕಮುಖ ಸಂಚಾರದ ಬಳಿಕ ತಲಪಾಡಿಯತ್ತ ಸಾಗುವ ವಾಹನಗಳು ಹಾಗೂ ಉಳ್ಳಾಲ, ಕೊಣಾಜೆ ಭಾಗದಿಂದ ಮಂಗಳೂರಿಗೆ ತೆರಳುವ ಬಸ್‌ಗಳು ಸೇರಿದಂತೆ ಎಲ್ಲ ವಾಹನಗಳು ತೊಕ್ಕೊಟ್ಟು ಜಂಕ್ಷನ್‌ನಿಂದ ಕಾಪಿಕಾಡ್ ವರೆಗೆ ಸಾಗಿ ಯೂಟರ್ನ್ ಪಡೆಯಬೇಕು. ಈ ಮಾರ್ಗದ ಎಡಬದಿಯ ಚರಂಡಿ ಮೇಲಿರುವ ಫುಟ್‌ಪಾತನ್ನು ಪಾದಚಾರಿಗಳ ಬದಲು ದ್ವಿಚಕ್ರ ವಾಹನಗಳ ಪಾರ್ಕಿಂಗ್‌ಗೆ ಬಳಸಲಾಗುತ್ತಿದೆ. ಪರಿಣಾಮವಾಗಿ ಪಾದಚಾರಿಗಳು ಅನಿವಾರ್ಯವಾಗಿ ವಾಹನಗಳ ನಡುವೆಯೇ ರಸ್ತೆಯಲ್ಲಿ ಸಾಗಬೇಕಾಗಿದೆ.
ಉಳ್ಳಾಲ ಕ್ರಾಸ್‌ನಿಂದ ತೊಕ್ಕೊಟ್ಟು ಜಂಕ್ಷನ್ ವರೆಗಿನ ಸರ್ವೀಸ್ ರಸ್ತೆಯ ಸ್ಥಿತಿಯೂ ಭಿನ್ನವಾಗಿಲ್ಲ. ಸಮೀಪದ ವಾಣಿಜ್ಯ ಸಂಕೀರ್ಣಗಳಲ್ಲಿ ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಇಲ್ಲದಿರುವುದರಿಂದ ಗ್ರಾಹಕರು ಹಾಗೂ ವ್ಯಾಪಾರಿಗಳು ತಮ್ಮ ಕಾರುಗಳನ್ನು ರಸ್ತೆಯಲ್ಲೇ ನಿಲ್ಲಿಸುತ್ತಿದ್ದಾರೆ. ಇದರಿಂದ ಇಕ್ಕಟ್ಟಾದ ರಸ್ತೆಯಲ್ಲಿ ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.
ತೊಕ್ಕೊಟ್ಟು ಜಂಕ್ಷನ್‌ನಲ್ಲಿ ಸಂಚಾರಿ ಪೊಲೀಸರು ನಿತ್ಯವೂ ವಾಹನ ತಪಾಸಣೆ ನಡೆಸಿ ದಂಡ ವಿಧಿಸುತ್ತಿದ್ದರೂ, ಸರ್ವೀಸ್ ರಸ್ತೆ ಹಾಗೂ ಫುಟ್‌ಪಾತ್ ಆಕ್ರಮಿಸಿಕೊಂಡಿರುವ ವಾಹನಗಳ ತೆರವಿಗೆ ಮುಂದಾಗುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. ಪೊಲೀಸರು ಮೃದು ಧೋರಣೆ ಬಿಟ್ಟು ಶಿಸ್ತುಕ್ರಮ ಜರುಗಿಸಿದರೆ ಮಾತ್ರ ಪಾದಚಾರಿಗಳು ಹಾಗೂ ವಾಹನ ಸವಾರರು ನಿರಾಳವಾಗಿ ಸಂಚರಿಸಲು ಸಾಧ್ಯ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.